ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಭತ್ತ, ಕಬ್ಬು, ರಾಗಿ ಬೆಳೆಗಳ ಇಳುವರಿ ಹೆಚ್ಚಿಸಲು ಸುಧಾರಿತ ತಾಂತ್ರಿಕತೆಗಳ ಬಗ್ಗೆ ರೈತರು ಅರಿವು ಪಡೆಯಬೇಕು ಎಂದು ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ ಗುರುವಾರ ಹೇಳಿದರು.ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆವರಣದಲ್ಲಿ, ಕೃಷಿ ಇಲಾಖೆ ವತಿಯಿಂದ ನಡೆದ ಕಸಬಾ ಹೋಬಳಿ ರೈತರಿಗೆ ಭತ್ತ, ಕಬ್ಬು ಹಾಗೂ ರಾಗಿ ಬೆಳೆಗಳಲ್ಲಿ ಇಳುವರಿ ಹೆಚ್ಚಿಸುವ ಸುಧಾರಿತ ತಾಂತ್ರಿಕತೆಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಯೂರಿಯಾ ರಸಗೊಬ್ಬರ ಸಮರ್ಪಕ ನಿರ್ವಹಣೆ, ಯೂರಿಯಾ ಬದಲಾಗಿ ಕಾಂಪ್ಲೆಕ್ಸ್ ಗೊಬ್ಬರಗಳ ಶಿಫಾರಸ್ಸಿಗನುಗುಣವಾಗಿ ಬಳಸುವಂತೆ ಸಲಹೆ ನೀಡಿದರು.
ತಾಲೂಕಿನ ಮಣ್ಣಿನಲ್ಲಿ ಶೇ.70 ರಷ್ಟು ಜಿಂಕ್ ಅಂಶವಿದ್ದು, ಶೇ.30 ರಷ್ಟು ಬೊರಾನ್, ಲಘು ಪೋಷಕಾಂಶಗಳು ಕಡಿಮೆ ಇದ್ದು, ರೈತರು ಭತ್ತ, ರಾಗಿ, ಕಬ್ಬು ಬೆಳೆಗಳಲ್ಲಿ ಇಳುವರಿ ಹೆಚ್ಚಿಸಲು ಸಮಗ್ರ ಪೋಷಕಾಂಶ ಹಾಗೂ ಜೈವಿಕ ಗೊಬ್ಬರಗಳ ಬಳಕೆ ಮಾಡಿ ಆದಾಯ ದ್ವಿಗುಣಗೊಳಿಸುವಂತೆ ತಿಳಿಸಿದರು.ಮಣ್ಣಿಗೆ 16 ವಿಧದ ಪೋಷಕಾಂಶಗಳ ಅಗತ್ಯತೆ ಇದೆ, ಇವುಗಳಲ್ಲಿ ಗಾಳಿ, ಬೆಳಕು, ನೀರು, ನೈಸರ್ಗಿಕವಾಗಿ ದೊರೆತರೆ ಇನ್ನುಳಿದವುಗಳನ್ನು ಪೂರೈಸಿಕೊಳ್ಳಬೇಕು. ಸಾರಜನಕ ಕೂಡ ಗಾಳಿಯಲ್ಲಿದೆ. ಅದನ್ನು ಬೆಳೆಗಳು ತನ್ನಷ್ಟಕ್ಕೆ ತಾವೇ ಹೀರಿಕೊಳ್ಳುತ್ತವೆ. ಆದರೂ ರೈತರು ಯೂರಿಯಾವನ್ನು ಮಣ್ಣಿಗೆ ಸೇರಿಸುವ ಮುಖಾಂತರ ಮನುಷ್ಯರಿಗೆ ರೋಗ- ರುಜಿನಗಳು ಬರುವಂತೆ ಮಾಡುತ್ತಿದ್ದಾರೆಂದು ವಿಷಾದಿಸಿದರು.
ರೈತರು ಸಮತೋಲನ ರಸಗೊಬ್ಬರ ಬಳಕೆ ಹಾಗೂ ವಿವೇಚನಾತ್ಮಕ ಪೀಡೆ ನಾಶಕಗಳ ಬಳಕೆ ಹಾಗೂ ಕೃಷಿ ಬೆಳೆಗಳಲ್ಲಿ ಪೀಡೆನಾಶಕ ಶೇಷಾಂಶ ತಗ್ಗಿಸಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.ಉಪ ಕೃಷಿ ನಿರ್ದೇಶಕ ಆರ್.ಮುನೇಗೌಡ ಮಾತನಾಡಿ, ಕೃಷಿಕರು ಬೆಳೆಗಳಿಗೆ ಅಗತ್ಯಕ್ಕಿಂತ ಹೆಚ್ಚು ಪೀಡೆನಾಶಕಗಳನ್ನು ಬಳಸಬಾರದು. ಇದರಿಂದ ಮನುಷ್ಯ ಹಾಗೂ ಜಾನುವಾರುಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಕಿವಿಮಾತು ಹೇಳಿದರು.
ಕಾರ್ಯಾಗಾರದಲ್ಲಿ ಕೃಷಿ ವಿಜ್ಞಾನಿ ಸನತ್ ಕುಮಾರ್, ಭತ್ತ, ಕಬ್ಬು, ರಾಗಿ ಬೆಳೆಗಳ ಸುಧಾರಿತ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಮಹದೇವು ಅಧ್ಯಕ್ಷತೆ ವಹಿಸಿದ್ದರು.ಸಹಾಯಕ ಕೃಷಿ ನಿರ್ದೇಶಕಿ ಎಚ್.ಜಿ.ಪ್ರತಿಭಾ, ರೇಷ್ಮೆ ಸಹಾಯಕ ನಿರ್ದೇಶಕ ಸುರೇಶ್, ಪಶುವೈದ್ಯಕೀಯ ಇಲಾಖೆ ನಿರ್ದೇಶಕ ಡಾ.ರವಿಶಂಕರ್, ಕೃಷಿ ಅಧಿಕಾರಿ ಎನ್.ರೂಪಶ್ರೀ, ತಾಂತ್ರಿಕ ವ್ಯವಸ್ಥಾಪಕ (ಆತ್ಮ) ಎ.ಎಸ್.ಗವಾಸ್ಕರ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಿಇಒ, ಖಾಸಗಿ ರಸಗೊಬ್ಬರ ಮಾರಾಟಗಾರರು, ರೈತರು ಭಾಗವಹಿಸಿದ್ದರು.