ಸಾರಾಂಶ
- ರೈತರ ಆತ್ಮಹತ್ಯೆಗೆ ಸರ್ಕಾರಗಳ ಬೆಲೆ ನೀತಿ ಕಾರಣ: ಹುಚ್ಚವ್ವನಹಳ್ಳಿ ಮಂಜುನಾಥ
- - - ಕನ್ನಡಪ್ರಭ ವಾರ್ತೆ, ದಾವಣಗೆರೆಕೃಷಿ ಸಾಲ ಮಾಡಿದ ರೈತರು ಸಾಲಕ್ಕೆ ಸವಾಲು ಹಾಕಬೇಕೇ ಹೊರತು, ಅಂಜಬಾರದು. ಸಾಲಕ್ಕೆ ಸಾವೇ ಉತ್ತರವೂ ಅಲ್ಲ. ಕೇಂದ್ರ, ರಾಜ್ಯ ಸರ್ಕಾರಗಳ ಬೆಲೆ ನೀತಿಯೇ ರೈತರ ಸಾಲಕ್ಕೆ ಪ್ರಮುಖ ಕಾರಣ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಕಾರಿಗನೂರು ಕ್ರಾಸ್‌ನ ಶ್ರೀ ಆಂಜನೇಯ ನಗರ ಮತ್ತು ಹೊನ್ನಮರಡಿ ಗ್ರಾಮಗಳಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಗ್ರಾಮ ಶಾಖೆಗಳ ಉದ್ಘಾಟನೆ ಹಾಗೂ ನಾಮಫಲಕಗಳ ಅನಾವರಣಗೊಳಿಸಿ ಅವರು ಮಾತನಾಡಿದರು.ಕನಿಷ್ಠ ಬೆಂಬಲ ಬೆಲೆಗೆ ಒತ್ತಾಯಿಸಿ ರೈತರು ಕೇಂದ್ರದ ವಿರುದ್ಧ ನಿರಂತರ ಹೋರಾಟ ಮಾಡುತ್ತಿದ್ದರೂ ಗಮನಹರಿಸುತ್ತಿಲ್ಲ. ಕ್ವಿಂಟಲ್ ಮೆಕ್ಕೆಜೋಳಕ್ಕೆ ₹2225 ವನ್ನು ಕೇಂದ್ರ ಘೋಷಣೆ ಮಾಡಿದೆ. ಆದರೆ, ಮಾರುಕಟ್ಟೆಯಲ್ಲಿ ₹1600ಕ್ಕೆ ಖರೀದಿಸಲಾಗುತ್ತಿದೆ. 50 ಕ್ವಿಂಟಲ್ ಮೆಕ್ಕೆಜೋಳ ಬೆಳೆದ ರೈತರಿಗೆ ₹48ರಿಂದ ₹50 ಸಾವಿರ ನಷ್ಟವಾಗುತ್ತಿದೆ. ಇದು ರೈತರನ್ನು ಹಗಲು ದರೋಡೆ ಮಾಡುವುದಲ್ಲದೇ ಮತ್ತೇನು? ಎಂದರು.
ಭದ್ರಾ ಡ್ಯಾಂನಿಂದ ಭದ್ರಾ ನಾಲೆಯ ಕೊನೆ ಭಾಗಕ್ಕೆ ನೀರು ಇಂದಿಗೂ ಸರಿಯಾಗಿ ಬರುತ್ತಿಲ್ಲ. ಹೊನ್ನಮರಡಿ, ಕಾರಿಗನೂರು ಕ್ರಾಸ್‌ಗಳ ಅಚ್ಚುಕಟ್ಟು ಭಾಗಕ್ಕೂ ಸಮರ್ಪಕ ನೀರು ತಲುಪಿಸುವ ಕೆಲಸವಾಗಬೇಕು. ನೀರಾವರಿ ಇಲಾಖೆ ಅಧಿಕಾರಿಗಳು ತಮ್ಮ ಕರ್ತವ್ಯ ಸರಿಯಾಗಿ ನಿರ್ವಹಣೆ ಮಾಡಬೇಕು. ಕೊನೆ ಭಾಗಕ್ಕೆ ಸಮರ್ಪಕ ನೀರು ತಲುಪಿಸುವ ಕೆಲಸ ಮಾಡಲಿ ಎಂದು ತಾಕೀತು ಮಾಡಿದರು.ಹಿರಿಯ ರೈತ ಮುಖಂಡ ತೇಜಸ್ವಿ ವಿ.ಪಟೇಲ್ ಮಾತನಾಡಿ, ಹೊನ್ನಮರಡಿ, ಕಾರಿಗನೂರು ಕ್ರಾಸ್‌ಗಳ ಭಾಗದಲ್ಲಿ ಅನೇಕ ವರ್ಷಗಳ ನಂತರ ರೈತ ಸಂಘ-ಹಸಿರು ಸೇನೆ ಘಟಕಗಳನ್ನು ಸ್ಥಾಪಿಸಿದ್ದು ಸಂತೋಷದ ಸಂಗತಿ. ದಿನದಿನಕ್ಕೂ ರೈತ ಸಂಘವು ಬೆಳೆಯಬೇಕು. ಹೋರಾಟದ ಮೂಲಕ ರೈತರ ಸಮಸ್ಯೆಗಳನ್ನು ಪರಿಹರಿಸುವ ಜೊತೆಗೆ ರೈತರ ಧ್ವನಿಯಾಗಿ ರೈತ ಸಂಘವು ಕಾರ್ಯನಿರ್ವಹಿಸಲಿ ಎಂದರು.
ನಿಟುವಳ್ಳಿ ಅಂಜಿನಪ್ಪ ಪೂಜಾರ, ಹೂವಿನಮಡು ನಾಗರಾಜ, ಕಡರನಾಯಕನಕಳ್ಳಿ ಪ್ರಭು, ಗುಮ್ಮನೂರು ರುದ್ರೇಶ, ಕುರ್ಕಿ ಹನುಮಂತ, ರುದ್ರಗೌಡ ಪಾಳ್ಯ, ಹೊನ್ನಮರಡಿ ಅಶೋಕ, ಆಂಜನೇಯ ನಗರ ಶಿವಕುಮಾರ, ಗಿರಿಯಾಪುರ ಸ್ವಾಮಿ ಇತರರು ಇದ್ದರು. ನೂರಾರು ರೈತರು ಹಸಿರು ಶಾಲು ದೀಕ್ಷೆ ಪಡೆದರು. - - -ಟಾಪ್ ಕೋಟ್
ರೈತರ ಬಗ್ಗೆ ಪ್ರಧಾನಿಗೆ ನಿಜವಾದ ಕಾಳಜಿ ಇದ್ದರೆ, ಬೆಲೆ ನಿಗದಿ ಕಾಯ್ದೆ ಜಾರಿಗೊಳಿಸಲಿ. ದೆಹಲಿಯಲ್ಲಿ ರೈತರು ಹೋರಾಟ ಮಾಡುತ್ತಿರುವ ಉದ್ದೇಶ ಕರ್ನಾಟಕದ ರೈತರಿಗೆ ಅರ್ಥವಾಗುತ್ತಿಲ್ಲ. ಹಾಗಾಗಿ, ಮುಂದಿನ ದಿನಗಳಲ್ಲಿ ಎಲ್ಲ ರೈತರು ಸಂಘಟಿತರಾಗಿ ಕಾಯ್ದೆ ಜಾರಿಗೆ ಹೋರಾಟ ನಡೆಸಬೇಕು- ಹುಚ್ಚವ್ವನಹಳ್ಳಿ ಮಂಜುನಾಥ, ರಾಜ್ಯಾಧ್ಯಕ್ಷ
- - - -2ಕೆಡಿವಿಜಿ4, 5:ದಾವಣಗೆರೆ ಜಿಲ್ಲೆ ಕಾರಿಗನೂರು ಕ್ರಾಸ್‌ನ ಶ್ರೀ ಆಂಜನೇಯ ನಗರ ಮತ್ತು ಹೊನ್ನಮರಡಿ ಗ್ರಾಮಗಳಲ್ಲಿ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಅವರು ರೈತ ಸಂಘ ಮತ್ತು ಹಸಿರು ಸೇನೆ ಗ್ರಾಮ ಶಾಖೆಗಳ ಉದ್ಘಾಟಿಸಿದರು.
;Resize=(128,128))
;Resize=(128,128))