ರೋಗಿಗಳಲ್ಲಿ ಬೇಧವೆಣಿಸದೆ ಸೇವೆಗೆ ಗೌರವ ಪ್ರಾಪ್ತಿ

| Published : Jul 04 2024, 01:02 AM IST

ರೋಗಿಗಳಲ್ಲಿ ಬೇಧವೆಣಿಸದೆ ಸೇವೆಗೆ ಗೌರವ ಪ್ರಾಪ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕಾರಿಪುರದ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ನಡೆದ ವಿಶ್ವ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಸರ್ಜನ್ ಡಾ.ಶ್ರಿನಿವಾಸ್ ರನ್ನು ಸನ್ಮಾನಿಸಲಾಯಿತು.

- ಡಾ.ಶ್ರೀನಿವಾಸ್ ಅಭಿಮತ । ಬಾಪೂಜಿ ಇನ್ಸ್ಟಿಟ್ಯೂಟ್‌ನಲ್ಲಿ ವಿಶ್ವ ವೈದ್ಯರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಸಮಾಜ ವೈದ್ಯರನ್ನು ದೇವರ ಸರಿಸಮಾನವಾಗಿ ಗೌರವಿಸುತ್ತದೆ. ಆ ವೃತ್ತಿಯ ಪಾವಿತ್ರ್ಯತೆಯನ್ನು ಕಾಪಾಡುವ ಮೂಲಕ ವೈದ್ಯರು ರೋಗಿಗಳ ಬಗ್ಗೆ ಬೇಧಭಾವಕ್ಕೆ ಆಸ್ಪವಿಲ್ಲದೆ ಸೇವೆ ಸಲ್ಲಿಸಿದಾಗ ಮಾತ್ರ ಸಮಾಜದ ಗೌರವಕ್ಕೆ ಪ್ರಾಪ್ತರಾಗಲು ಸಾಧ್ಯ ಎಂದು ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಸರ್ಜನ್ ಡಾ.ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಬುಧವಾರ ಇಲ್ಲಿನ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ನಡೆದ ವಿಶ್ವ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪಶ್ಚಿಮ ಬಂಗಾಳದಲ್ಲಿ 2 ಬಾರಿ ಮುಖ್ಯಮಂತ್ರಿಯಾಗಿದ್ದ ಡಾ.ಬಿ.ಸಿ.ರಾಯ್ ಜನ್ಮದಿನಾಚರಣೆ ಜ್ಞಾಪಕಾರ್ಥವಾಗಿ ವೈದ್ಯ ದಿನಾಚರಣೆ ಎಲ್ಲೆಡೆ ಆಚರಿಸಲಾಗುತ್ತದೆ ಎಂದ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದ ಡಾ.ಬಿ.ಸಿ.ರಾಯ್ ಎಂದಿಗೂ ಮುಖ್ಯಮಂತ್ರಿ ಎಂಬ ಅಹಂಕಾರವಿಲ್ಲದೆ ಬಿಡುವಿನ ಸಮಯದಲ್ಲಿ ರೋಗಿಗಳ ಆರೈಕೆ ಮೂಲಕ ಪ್ರತಿಷ್ಠಿತ ವೈದ್ಯ ವೃತ್ತಿಯ ಘನತೆ ಗೌರವ ಹೆಚ್ಚಿಸಿದ್ದಾರೆ. ಸಮಸ್ತ ವೈದ್ಯರಿಗೆ ಅವರ ವ್ಯಕ್ತಿತ್ವ ಮಾದರಿಯಾಗಿದೆ ಎಂದು ತಿಳಿಸಿದರು.

ಆಧುನಿಕ ಜೀವನದ ಜಂಜಾಟದಲ್ಲಿ ಹಲವು ರೀತಿಯ ಕಾಯಿಲೆಗಳು ಮನುಷ್ಯನನ್ನು ಬಾಧಿಸುತ್ತಿದ್ದು, ಪ್ರತಿಯೊಂದು ಕಾಯಿಲೆಗೆ ಸದೃಢ ಮನಸ್ಸು ಅಗತ್ಯವಾಗಿದೆ. ದ್ವೇಷ ಅಸೂಯೆಯಿಂದ ಹೊರಬಂದು ಆರೋಗ್ಯಯುತ ಜೀವನ ನಡೆಸುವಂತೆ ಇದೇ ವೇಳೆ ಅವರು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಅರುಣ್ ಕುಮಾರ್ ಮಾತನಾಡಿ, ಪ್ರತಿ ವೈದ್ಯರಿಗೂ ಸಮರ್ಪಣೆ, ಪರಿಣಿತಿ ಹಾಗೂ ಸಹಾನುಭೂತಿಯ ಗುಣ ಅಗತ್ಯವಾಗಿದೆ ಎಂದರು.

ಪ್ಯಾಥೊಲಾಜಿಸ್ಟ್ ಡಾ.ಅನಿಲ್ ಕುಮಾರ್ ಮಾತನಾಡಿ, ಪ್ರತಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗೆ ಸಮರ್ಪಣಾ ಮನೋಭಾವ ಮುಖ್ಯವಾಗಿದ್ದು ನಿಸ್ವಾರ್ಥ ಸೇವೆಯಿಂದ ಮಾತ್ರ ವೈದ್ಯರಿಗೆ ಸಹಾಯಕರಾಗಿ ಕಾರ್ಯನಿರ್ವಹಿಸಿ ಸಮಾಜದಿಂದ ಗುರುತಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಸಂಸ್ಥೆಯ ಸಂಸ್ಥಾಪಕ ಬಿ.ಪಾಪಯ್ಯ ಮಾತನಾಡಿ, 2011-12 ರಲ್ಲಿ ಆರಂಭವಾದ ಸಂಸ್ಥೆ ಮೂಲಕ ಈಗಾಗಲೇ ಹಲವರು ಸಮಾಜಕ್ಕೆ ಕೊಡುಗೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಜೀವ ವ್ಯಕ್ತಿಗಳ ಜತೆ ವ್ಯವಹರಿಸುವ ವಿದ್ಯಾರ್ಥಿಗಳು ತಾಳ್ಮೆಯಿಂದ ರೋಗಿಗಳಿಗೆ ಧೈರ್ಯ ತುಂಬಿದಾಗ ಬಹುಪಾಲು ಕಾಯಿಲೆ ವಾಸಿಯಾಗಲಿದೆ ಎಂಬ ಸತ್ಯ ಅರಿತು ಸೇವೆ ಸಲ್ಲಿಸುವಂತೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ತಜ್ಞ ವೈದ್ಯ ರನ್ನು ಸನ್ಮಾನಿಸಲಾಯಿತು. ಸಿಮ್ರಾನ್ ಪ್ರಾಸ್ಥಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ವೈದ್ಯ ಡಾ.ಸಂತೋಷ, ಜಿಲ್ಲಾ ಪರ್ತಕರ್ತರ ಸಂಘದ ಉಪಾಧ್ಯಕ್ಷ ಹುಚ್ರಾಯಪ್ಪ, ರಾಘವೇಂದ್ರ ಸಂಸ್ಥೆ ಕಾರ್ಯದರ್ಶಿ ಪವಿತ್ರ, ಪ್ರಾಚಾರ್ಯ ಮುಸ್ತಫಾ, ಮುಖ್ಯೋಪಾದ್ಯಾಯ ರಾಘವೇಂದ್ರ ಕುಲಕರ್ಣಿ ಸಹಿತ ಉಪನ್ಯಾಸಕ ವೃಂದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸೃಷ್ಟಿ ಸಂಗಡಿಗರು ಪ್ರಾರ್ಥಿಸಿ, ನೇಹಾ ಸ್ವಾಗತಿಸಿ, ತನ್ಸೀಲ ನಿರೂಪಿಸಿ, ನೀತು ವಂದಿಸಿದರು.

ವೈದ್ಯರದ್ದು ಜೀವ ಉಳಿಸುವ ಶ್ರೇಷ್ಠ ವೃತ್ತಿ: ಸುಂದರ್‌ರಾಮ್

ಶಿವಮೊಗ್ಗ: ಆರೋಗ್ಯ ಸದೃಢವಾಗಿರುವಂತೆ ಮಾರ್ಗದರ್ಶನ ನೀಡುವ ಜತೆಯಲ್ಲಿ ಜೀವ ಉಳಿಸುವ ಶ್ರೇಷ್ಠ ಕಾರ್ಯ ನಡೆಸುವ ವೃತ್ತಿ ವೈದ್ಯರದ್ದಾಗಿದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಅಧ್ಯಕ್ಷ ಕೆ.ಸುಂದರ್ ರಾಮ್ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಸಂಸ್ಥೆಯಿಂದ ಗುಡಲಕ್ ಆರೈಕೆ ಕೇಂದ್ರದಲ್ಲಿ ಆಯೋಜಿಸಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸದಾ ಆರೋಗ್ಯ ಸೇವೆ ನೀಡುವ ವೈದ್ಯರನ್ನು ಸನ್ಮಾನಿಸುವುದು ರೋಟರಿ ಸಂಕಲ್ಪ ದಿನದ ಉದ್ದೇಶವಾಗಿದ್ದು, ಸಂಸ್ಥೆ ವತಿಯಿಂದ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

2024-25ರಲ್ಲಿ ಹೆಚ್ಚಿನ ಸೇವಾ ಕಾರ್ಯ ನಡೆಸುವ ಉದ್ದೇಶವಿದೆ. ಪ್ರಪಂಚಾದ್ಯತ ರೋಟರಿ ಸೇವೆ ನಡೆಸುತ್ತಿದೆ. ಜನೋಪಯೋಗಿ ಕಾರ್ಯಗಳನ್ನು ನಡೆಸಲಾಗುವುದು ಎಂದರು.2024-25ರ ಸಹಾಯಕ ಗವರ್ನರ್ ಎಸ್.ಆರ್.ನಾಗರಾಜ ಮಾತನಾಡಿ, ರೋಟರಿಯ ಆಶಯದಂತೆ ಸರ್ವರಿಗೂ ಪ್ರಾಮಾಣಿಕ ಸೇವೆಯ ಪ್ರಯತ್ನವನ್ನು ಮಾಡುವ ಉದ್ದೇಶದಿಂದ ಪ್ರಾರಂಭಿಸಿ ಈವರೆಗೂ ನಡೆಸಿರುವ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.ಸಂಸ್ಥೆಯ ಎಲ್ಲ ಸದಸ್ಯರು ಗುಡ್‌ಲಕ್ ಆರೈಕೆ ಕೇಂದ್ರದಲ್ಲಿ ನಗರದ ಖ್ಯಾತ ವೈದ್ಯ ಡಾ.ಚಂದುಶ್ರೀ ಅವರನ್ನು ರೋಟರಿ ಮಾಜಿ ಗವರ್ನರ್ ಎ.ಎಸ್.ಚಂದ್ರಶೇಖರ ಸನ್ಮಾನಿಸಿದರು. ಗೈನಾಕಾಲಜಿಸ್ಟ್ ಚಂದ್ರುಶ್ರೀ ಅವರು ಉಚಿತ ವೈದ್ಯಕೀಯ ತಪಾಸಣೆ ಸೇವಾಕಾರ್ಯಕ್ಕೆ ಚಾಲನೆ ನೀಡಿದರು.

ಗುಡ್‌ಲಕ್ ಆರೈಕೆ ಕೇಂದ್ರದ ಅಧ್ಯಕ್ಷ ರವೀಂದ್ರನಾಥ ಐತಾಳ ಅವರು ಆರೈಕೆ ಕೇಂದ್ರ ನಡೆದುಬಂದ ದಾರಿ ವಿವರಿಸಿದರು. ಪ್ರಪಂಚಾದ್ಯಂತ ರೋಟರಿಯ ಸಮಾಜಮುಖಿ ಕೊಡುಗೆ, ಅಸಹಾಯಕರಿಗೆ ಸಾಂತ್ವಾನ ಮತ್ತು ವೈದ್ಯಕೀಯ ನೆರವು, ಶಿಕ್ಷಣಕ್ಕೆ ಸಂಬಂಧಿಸಿದ ಸಹಾಯ ಉತ್ತಮ ಕಾರ್ಯದ ದಿಕ್ಸೂಚಿ ಎಂದರು.ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಕಾರ್ಯದರ್ಶಿ ರಮೇಶ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಬಸವರಾಜಪ್ಪ, ಸರ್ಜಾ ಜಗದೀಶ್, ಎ.ಎಸ್.ಚಂದ್ರಶೇಖರ, ಶಿವಪ್ಪ, ಅನಿಲ್ ಕುಮಾರ್ ಮತ್ತು ಎನ್.ಶ್ರೀಧರ ಉಪಸ್ಥಿತರಿದ್ದರು.