ಸಾರಾಂಶ
ಹುಬ್ಬಳ್ಳಿ:
ಕೃಷಿ ಉತ್ಪನ್ನ ರಪ್ತು ಮಾಡುವ ಮಾಹಿತಿ ರೈತರಿಗೆ ಒದಗಿಸಬೇಕು. ಇದರಿಂದ ಮುಂಬರುವ ದಿನಗಳಲ್ಲಿ ಅವರೇ ತಮ್ಮ ಉತ್ಪನ್ನಗಳನ್ನು ರಪ್ತು ಮಾಡಲು ಸಹಕಾರಿಯಾಗಲಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಹಾಗೂ ಕೊಚ್ಚಿನ್‌ನ ಭಾರತೀಯ ಸಾಂಬಾರು ಮಂಡಳಿ ಸಹಯೋಗದಲ್ಲಿ ತೋಟಗಾರಿಕೆ ಇಲಾಖೆ ನಗರದ ಖಾಸಗಿ ಹೊಟೇಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಸಾಂಬಾರು ಪದಾರ್ಥಗಳ ಖರೀದಿದಾರರ ಮತ್ತು ಮಾರಾಟಗಾರರ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಗ್ರ ಮಾಹಿತಿ ಅವಶ್ಯ:ರೈತರ ಮಕ್ಕಳೂ ಇದೀಗ ಸುಶಿಕ್ಷಿತರಾಗಿದ್ದಾರೆ. ರಪ್ತು ವ್ಯಾಪಾರದ ಬಗ್ಗೆ ಸಮಗ್ರ ಮಾಹಿತಿ ನೀಡಿದರೆ ಅವರೂ ಉತ್ತಮ ಆದಾಯ ಗಳಿಸಿ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗಲಿದೆ. ಕರ್ನಾಟಕದಲ್ಲಿ ಬೆಳೆಯುವ ಕೆಲವು ಉತ್ಪನ್ನಗಳನ್ನು ಹೊರ ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತದೆ. ಅಲ್ಲಿನ ಜನರು ಅದೇ ಉತ್ಪನ್ನಗಳನ್ನು ಹೊರ ದೇಶಗಳಿಗೆ ರಫ್ತು ಮಾಡಿ ಸ್ಥಿತಿವಂತರಾಗುತ್ತಿದ್ದಾರೆ ಎಂದರು.
ರೈತರಿಗೆ ಅರಿವು ಮೂಡಿಸಿ:ಸ್ಥಳೀಯರಿಗೆ ಅರಿವು ಇದ್ದರೆ, ಇಲ್ಲಿನ ರೈತರು ಹಾಗೂ ವ್ಯಾಪಾರಸ್ಥರು ಆರ್ಥಿಕವಾಗಿ ಬೆಳೆಯಲು ಅವಕಾಶ ಸಿಕ್ಕಂತಾಗುತ್ತದೆ. ಸಾಂಬಾರು ಪದಾರ್ಥ ಸೇರಿದಂತೆ ಇತರ ಕೃಷಿ ಉತ್ಪನ್ನಗಳನ್ನು ರಫ್ತು ಮಾಡುವ ಮಾಹಿತಿಯನ್ನು ರೈತರಿಗೂ ಒದಗಿಸಬೇಕು. ಮುಂಬರುವ ದಿನಗಳಲ್ಲಿ ರೈತರು ತಮ್ಮ ಉತ್ಪನ್ನವನ್ನು ತಾವೇ ರಫ್ತು ಮಾಡುವಂತಾಗಲಿ ಎಂದು ಟೆಂಗಿನಕಾಯಿ ಹೇಳಿದರು.
₹1 ಲಕ್ಷ ಕೋಟಿ ರಫ್ತು ಗುರಿ:2023-24ನೇ ಸಾಲಿನಲ್ಲಿ 15,39,692 ಮೆಟ್ರಿಕ್ ಟನ್ ಸಾಂಬಾರು ಪದಾರ್ಥಗಳನ್ನು ರಫ್ತು ಮಾಡಿದ್ದು, ಇದರಿಂದ ₹ 36,956 ಕೋಟಿ ವ್ಯವಹಾರ ಆಗಿದೆ. ಮುಂದಿನ ವರ್ಷದಲ್ಲಿ ₹ 1 ಲಕ್ಷ ಕೋಟಿ ಮೊತ್ತದ ಸಾಂಬಾರು ಪದಾರ್ಥ ರಫ್ತು ಮಾಡುವ ಗುರಿ ಹೊಂದಲಾಗಿದೆ ಎಂದರು.
ಸಮಾವೇಶ ಉದ್ಘಾಟಿಸಿದ ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಸಾಂಬಾರು ಪದಾರ್ಥಗಳಿಗೆ ತಗಲುವ ರೋಗ, ನಿರ್ವಹಣೆ ಬಗ್ಗೆ ರೈತರಿಗೆ ಅಗತ್ಯ ಮಾಹಿತಿ ನೀಡಬೇಕು ಎಂದರು.ಹುಡಾ ಅಧ್ಯಕ್ಷ ಶಾಕೀರ ಸನದಿ ಮಾತನಾಡಿ, ಉತ್ತಮ ಆಹಾರ ಸೇವನೆಯಿಂದ ಆರೋಗ್ಯಯುತ ಜೀವನ ನಡೆಸಲು ಸಾಧ್ಯ. ಹಾಗಾಗಿ, ಗುಣಮಟ್ಟದ ಕೃಷಿ ಉತ್ಪನ್ನಗಳು ಸ್ಥಳೀಯರಿಗೂ ಲಭಿಸುವಂತಾಗಲಿ ಎಂದು ಹೇಳಿದರು.
ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್. ಗಿರೀಶ ಪ್ರಾಸ್ತಾವಿಕ ಮಾತನಾಡಿದರು. ಹಾವೇರಿಯ ಚನ್ನಯ್ಯ ಎಮ್ಮೆಟ್ಟಿ ಹಿರೇಮಠ, 8 ದೇಶಗಳಿಗೆ ಜೋಳದ ಹಾಗೂ ಸಜ್ಜಿ ರೊಟ್ಟಿ ರಫ್ತು ಮಾಡುತ್ತಿರುವುದಾಗಿ ತಿಳಿಸಿದರು. ಉತ್ತರ ಕರ್ನಾಟಕದ ಹೊಸ ರಪ್ಪುದಾರರಿಗೆ ಹುಬ್ಬಳ್ಳಿಯಲ್ಲಿಯೇ ತರಬೇತಿ ನೀಡಬೇಕು ಎಂದು ಮನವಿ ಮಾಡಿದರು.ಇದೇ ವೇಳೆ ಶಾಸಕ ಮಹೇಶ ಟೆಂಗಿನಕಾಯಿ ಅವರು ಸಾಂಬಾರು ಬೆಳಗಳಲ್ಲಿ ಸಮಗ್ರ ರೋಗ ಮತ್ತು ಕೀಟ ಬಾಧೆಗಳ ನಿರ್ವಹಣೆ ಕುರಿತ ಕಿರುಹೊತ್ತಿಗೆ ಬಿಡುಗಡೆಗೊಳಿಸಿದರು. ಪ್ರಧಾನ ವ್ಯವಸ್ಥಾಪಕ ಎಚ್.ಆರ್. ನಾಯ್ಕ, ಸಕಲೇಶಪುರದ ಸಾಂಬಾರು ಮಂಡಳಿ ಉಪ ನಿರ್ದೇಶಕ ಎಂ.ವೈ. ಹೊನ್ನೂರ, ಹಿರಿಯ ಅಧಿಕಾರಿಗಳಾದ ಟಿ.ಎನ್. ಝಾ, ಸಿದ್ದರಾಮಯ್ಯ ಬರ್ಲಿಮಠ ಸೇರಿದಂತೆ ಹಲವರಿದ್ದರು.ಕುಸಿದು ಬಿದ್ದ ರೈತ:
ಸಾಂಬಾರು ಪದಾರ್ಥಗಳ ಖರೀದಿದಾರರ ಮತ್ತು ಮಾರಾಟಗಾರರ ಸಮಾವೇಶಕ್ಕೆ ಆಗಮಿಸಿದ್ದ ರೈತರೊಬ್ಬರು ಹಠಾತ್ ಕುಸಿದು ಬಿದ್ದು ಆತಂಕ ಸೃಷ್ಟಿಯಾದ ಪ್ರಸಂಗ ನಡೆಯಿತು. ತಕ್ಷಣ ಸಭೆಯಲ್ಲಿದ್ದವರು ಅಸ್ವಸ್ಥಗೊಂಡಿದ್ದ ರೈತನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಸುಧಾರಿಸಿಕೊಳ್ಳುವಂತೆ ನೋಡಿಕೊಂಡರು.ಪೂರೈಕೆದಾರರು ಸಂಪರ್ಕಿಸಿಕಾರ್ಯಕ್ರಮದ ನಂತರ ನಡೆದ ಅಧಿವೇಶನದಲ್ಲಿ ಮಾರಾಟಗಾರರು ಬೆಳ್ಳೊಳ್ಳಿ, ಮೆಣಸಿನಕಾಯಿ, ಅರಿಷಿಣ, ಕಾಳಮೆಣಸು, ದಾಲ್ಚಿನ್ನಿ ಸೇರಿದಂತೆ ಹಲವು ಉತ್ಪನ್ನಗಳ ಬೇಡಿಕೆಯಿದ್ದು, ಪೂರೈಕೆದಾರರು ತಮ್ಮನ್ನು ಸಂಪರ್ಕಿಸಬಹುದಾಗಿದೆ ಎಂದರು. ಇದೇ ರೀತಿ ಬೆಳೆಗಾರರು ಕೂಡ ತಾವು ಬೆಳೆದ ಉತ್ಪನ್ನಗಳು ಮಾರಾಟಕ್ಕಿದ್ದು, ಖರೀದಿಗೆ ಸಂಪರ್ಕಿಸಬಹುದು ಎಂದು ಮನವಿ ಮಾಡಿದರು. 200ಕ್ಕೂ ಅಧಿಕ ರೈತರು ಹಾಗೂ 50ಕ್ಕೂ ಅಧಿಕ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.