ಸಾರಾಂಶ
ಪ್ರತಿ ವರ್ಷ ಮಣ್ಣಿನ ಫಲವತ್ತತೆಗಾಗಿ ಪ್ರತಿಯೊಬ್ಬ ರೈತರು ತಮ್ಮ ಕೃಷಿ ಭೂಮಿಯ ಮಣ್ಣು ಪರೀಕ್ಷೆ ಮಾಡಿಸಿ, ಮಣ್ಣನ್ನು ಉಪಚರಿಸಿದರೆ ಅಧಿಕ ಉತ್ಪಾದನೆ ಗಳಿಸಬಹುದು ಎಂದು ಸಕಲೇಶಪುರ ಕಾಫಿ ಬೋರ್ಡ್ ಎಸ್‌ಎಲ್‌ಒ ಬಸವರಾಜು ತಿಳಿಸಿದರು. ಆಲೂರಲ್ಲಿ ‘ಮಣ್ಣು ಪರೀಕ್ಷೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಸವರಾಜು ಸಲಹೆ । ಮಣ್ಣು ಪರೀಕ್ಷೆ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಆಲೂರು
ಪ್ರತಿ ವರ್ಷ ಮಣ್ಣಿನ ಫಲವತ್ತತೆಗಾಗಿ ಪ್ರತಿಯೊಬ್ಬ ರೈತರು ತಮ್ಮ ಕೃಷಿ ಭೂಮಿಯ ಮಣ್ಣು ಪರೀಕ್ಷೆ ಮಾಡಿಸಿ, ಮಣ್ಣನ್ನು ಉಪಚರಿಸಿದರೆ ಅಧಿಕ ಉತ್ಪಾದನೆ ಗಳಿಸಬಹುದು ಎಂದು ಸಕಲೇಶಪುರ ಕಾಫಿ ಬೋರ್ಡ್ ಎಸ್‌ಎಲ್‌ಒ ಬಸವರಾಜು ತಿಳಿಸಿದರು.ತಾಲೂಕಿನ ಕಣತೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪತ್ರಕರ್ತರ ಸಂಘದ ವತಿಯಿಂದ ರೈತರು ಹಾಗೂ ಕಾಫಿ ಬೆಳೆಗಾರರಿಗೆ ಏರ್ಪಡಿಸಲಾಗಿದ್ದ ‘ಮಣ್ಣು ಪರೀಕ್ಷೆ’ ಕಾರ್ಯಕ್ರಮದಲ್ಲಿ ಮಾತನಾಡಿ, ಕೃಷಿ ಇಲಾಖೆ ಸಹಕಾರ ಪಡೆದು ನಿಗದಿತ ಕಾಲದಲ್ಲಿ ಮಣ್ಣನ್ನು ಪರೀಕ್ಷೆ ಮಾಡಿಸಿ, ಅದಕ್ಕೆ ಬೇಕಾಗುವ ಪೋಷಕಾಂಶಗಳನ್ನು ಒದಿಗಿಸಿ ಕೃಷಿ ಮಾಡಿದರೆ ಉತ್ಪಾದನೆ ದ್ವಿಗುಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಣ್ಣಲ್ಲಿ ರಸಾಯನಿಕ ಅಂಶಗಳು ಬೆರೆತು ಮಣ್ಣಿನಲ್ಲಿ ಫಲವತ್ತತೆ ಕಡಿಮೆಯಾಗುತ್ತಿದೆ. ಮಣ್ಣು ಪರೀಕ್ಷೆಯನ್ನು ತಪ್ಪದೆ ಮಾಡಿಸಿ ಉಪಚರಿಸಿ ಎಂದು ಹೇಳಿದರು.
ಬಾಳೆಹೊನ್ನೂರು ಕಾಫಿ ಸಂಶೋಧನಾ ಕೇಂದ್ರದ ಡಾ ಸೌಮ್ಯ ಮಾತನಾಡಿ, ಮಣ್ಣಿನ ಫಲವತ್ತತೆ ತಿಳಿದುಕೊಳ್ಳಲು ಮಣ್ಣು ಪರೀಕ್ಷೆ ಜತೆಗೆ ಕಾಫಿ ಬೆಳೆಗಾರರು ಧೂಳು ಅಗೆತ, ತೊಟ್ಟಿಲು ಗುಂಡಿ ಸೇರಿದಂತೆ ಮಣ್ಣಿನಲ್ಲಿ ತೇವಾಂಶ ಹಿಡಿದಿಡುವ ಕ್ರಮಗಳನ್ನು ಅನುಸರಿಸಬೇಕು ಎಂದರು.ಈ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ರೈತರು ಹಾಗೂ ಕಾಫಿ ಬೆಳೆಗಾರರು ಮಣ್ಣು ಪರೀಕ್ಷಾ ಕಾರ್ಯಕ್ರಮದ ಪ್ರಯೋಜನ ಪಡೆದರು, ಕಾಫಿ ತೋಟದ ಮಣ್ಣು ಹಾಗೂ ನೀರಿನ ಮಾದರಿಗಳನ್ನು ಪರೀಕ್ಷಿಸಿಕೊಂಡರು.
ಕಾರ್ಯಕ್ರಮದಲ್ಲಿ ವಿಸ್ತರಣಾಧಿಕಾರಿ ರೋಬ್ ಮಿಲ್ ಬೇಬಿ, ಬಾಳೆಹೊನ್ನೂರು ಸಂಶೋಧನಾ ಕೇಂದ್ರದ ಮಣ್ಣು ಪರೀಕ್ಷಕಿ ಸ್ನೇಹ, ತಾಲೂಕು ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಸಂದೇಶ ಹಳೆ ಆಲೂರು, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪೃಥ್ವಿ ರಾಮ್, ಗ್ರಾಮ ಪಂಚಾಯಿತಿ ಸದಸ್ಯರಾದ ಡೇಗರಾಜ್, ಪದ್ಮಾ, ನಿರ್ವಾಣಯ್ಯ, ಪಿಡಿಒ ಪುರುಷೋತ್ತಮ್, ಕಿರಣ್, ಮೋಹನ್, ಅನಂತ್, ಮಲ್ಲಿಕಾರ್ಜುನ್, ನೂರಾರು ರೈತರು ಹಾಗೂ ಕಾಫಿ ಬೆಳೆಗಾರರು ಭಾಗವಹಿಸಿದ್ದರು.ಆಲೂರು ಕಸಬಾ ಕಣತೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಮಣ್ಣು ಪರೀಕ್ಷೆ ಮಾಡಿದ ವರದಿಯನ್ನು ಡಾ.ಸೌಮ್ಯ ರೈತರಿಗೆ ನೀಡಿದರು.