ಸಾರಾಂಶ
ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಮೇಳ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ
ಕೊಪ್ಪಳ:ಇತ್ತೀಚೆಗೆ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ರೈತರು ಸಾವಯವ ಬೆಳೆಗಳನ್ನು ಬೆಳೆಯಲು ಒತ್ತು ನೀಡಬೇಕು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.
ಶನಿವಾರ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆ ಕೊಪ್ಪಳ ಇವುಗಳ ಸಹಯೋಗದಲ್ಲಿ ನಗರದ ಮಧುಶ್ರೀ ಗಾರ್ಡನಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ನಮ್ಮ ಹಿರಿಯರು ಸಿರಿಧಾನ್ಯ ಸೇವಿಸುತ್ತಿದ್ದರಿಂದಲೇ 80ರಿಂದ 90 ವರ್ಷಗಳ ಕಾಲ ಬದುಕುತ್ತಿದ್ದರು. ಆದರೆ ಇಂದು ನಾವು ಹೆಚ್ಚಿನ ಇಳುವರಿ ಪಡೆಯಲು ಶೇ. 60ಕ್ಕಿಂತಲೂ ಹೆಚ್ಚು ರಾಸಾಯನಿಕ ಗೊಬ್ಬರವನ್ನು ನಮ್ಮ ಹೊಲಗಳಿಗೆ ಹಾಕುತ್ತಿದ್ದೇವೆ. ಇದರಿಂದ ನಮಗೆ ಬಿಪಿ ಮತ್ತು ಶುಗರ್ ಸೇರಿದಂತೆ ಹಲವಾರು ಕಾಯಿಲೆಗಳು ಬರುವುದರ ಜೊತೆಗೆ ನಮ್ಮ ಜೀವನಾಂಶವು ಕಡಿಮೆಯಾಗಿದೆ ಎಂದರು.
ಸರ್ಕಾರ ರೈತರಿಗಾಗಿ ಹನಿ ನೀರಾವರಿ, ಕೃಷಿ ಹೊಂಡಗಳ ನಿರ್ಮಾಣ ಸೇರಿದಂತೆ ಹಲವಾರು ಯೋಜನೆಗಳನ್ನು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಮೂಲಕ ರೈತರಿಗೆ ನೀಡುತ್ತಿದೆ. ಇಂದು ಕೃಷಿಯಲ್ಲಿ ಅನೇಕ ಹೊಸ ತಂತ್ರಜ್ಞಾನಗಳು ಬೆಳೆದಿವೆ. ಜಿಲ್ಲೆಯಲ್ಲಿ ರೈತರಿಗೆ ನೀರಾವರಿ ಮಾಡಲು ಮೂರು ಏತ ನೀರಾವರಿ ಯೋಜನೆಗಳ ಮೂಲಕ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಜಗತ್ತು ಇಂದು ಸಿರಿಧಾನ್ಯಗಳ ಕಡೆಗೆ ದಾಪುಗಾಲು ಹಾಕುತ್ತಿದೆ. ಸಿರಿಧಾನ್ಯ ಬೆಳೆಗಳಾದ ಸಜ್ಜೆ, ನವಣೆ, ಬರಗು ಸೇರಿದಂತೆ ಇತರೆ ಆಹಾರ ಸೇವನೆಯಿಂದ ನಾವು ಉತ್ತಮ ಆರೋಗ್ಯವಂತರಾಗಿರುತ್ತೇವೆ. ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲು ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ, ನಾನು ರೈತನ ಮಗ ಆಗಿರುವುದರಿಂದ ರೈತರ ಕಷ್ಟ ನನಗೂ ಗೊತ್ತಿದೆ. ರೈತ ನಮ್ಮ ಅನ್ನದಾತ ಅವನಿಲ್ಲದಿದ್ದರೆ ನಮ್ಮ ಜೀವನ ಇಲ್ಲ. ರೈತರಿಗೆ ಕೃಷಿಯ ಬಗ್ಗೆ ಮಾಹಿತಿ ನೀಡುವ ಹಲವಾರು ಕಾರ್ಯಕ್ರಮಗಳನ್ನು ತಮ್ಮ ಇಲಾಖೆಯಿಂದ ಆಯೋಜನೆ ಮಾಡಬೇಕೆಂದು ಹೇಳಿದರು.ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಕವಿತಾ ಹುಳ್ಳಿಕಾಶಿ ವಿಶೇಷ ಉಪನ್ಯಾಸ ನೀಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೈಪಿಡಿ ಬಿಡುಗಡೆ:ಸಿರಿಧಾನ್ಯಗಳ ಅಧಿಕ ಉತ್ಪಾದನೆಗೆ ಸುಧಾರಿತ ತಾಂತ್ರಿಕತೆಗಳು ಹಾಗೂ ಮೌಲ್ಯವರ್ಧನೆ ಕುರಿತ ಕೃಷಿ ಇಲಾಖೆಯಿಂದ ಸಿದ್ದಪಡಿಸಲಾದ ಕೈಪಿಡಿಯನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.ಗಮನ ಸೆಳೆದ ಪ್ರದರ್ಶನ ಮಳಿಗೆ:
ಸಿರಿಧಾನ್ಯಗಳು ಮತ್ತು ಅವುಗಳಿಂದ ತಯಾರಿಸಲ್ಪಟ್ಟ ಖಾದ್ಯಗಳು ಹಾಗೂ ಸಾವಯವ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಸಾರ್ವಜನಿಕರ ಗಮನ ಸೆಳೆದವು. ಇದರ ಜೊತೆಗೆ ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣ ಪ್ರದರ್ಶನ, ಸಹಾಯಧನ ಸೌಲಭ್ಯಗಳ ಮಾಹಿತಿ ನೀಡಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಲಿನ್ ಅತುಲ್, ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಪಶು ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ. ಮಲ್ಲಯ್ಯ, ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ರಾಘವೇಂದ್ರ ಎಲಿಗಾರ, ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ತಿಮ್ಮಣ್ಣ ಚೌಡಿ, ಕೊಪ್ಪಳ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಸಣ್ಣ ಹನುಮಪ್ಪ ಹುಳ್ಳಿ, ಜಿಪಂ ಮಾಜಿ ಸದಸ್ಯ ರಾಮಣ್ಣ ಚೌಡಕಿ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ರೈತರು, ಕೃಷಿ ಸಖಿಯರು, ಸಹಾಯಕ ಕೃಷಿ ಸಖಿಯರು ಸೇರಿದಂತೆ ಕೃಷಿ ಇಲಾಖೆಯ ಇತರೆ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.