ಸಾರಾಂಶ
ಕನ್ನಡಪ್ರಭ ವಾರ್ತೆ ಸುತ್ತೂರುರೈತರು ರಾಸಾಯನಿಕ ಮುಕ್ತ ಕೃಷಿಯತ್ತ ಹೆಚ್ಚು ಗಮನ ಹರಿಸಬೇಕು ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.ಸುತ್ತೂರು ಶ್ರೀಕ್ಷೇತ್ರದಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಆಯೋಜಿಸಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಸಾನ್ನಿಧ್ಯ ವಹಿಸಿ ಮಾತನಾಡಿದರು.ವಿಪರೀತ ರಾಸಾಯನಿಕಗಳ ಬಳಕೆಯಿಂದ ಇಂದು ಕೃಷಿ ಭೂಮಿ ಕಲುಷಿತಗೊಳ್ಳುತ್ತಿದೆ. ಇದರಿಂದ ಆಹಾರವೂ ವಿಷಪೂರಿತವಾಗುತ್ತಿದೆ. ರೈತರು ಸಾವಯವ ಕೃಷಿಯತ್ತ ಹೆಚ್ಚು ಗಮನಹರಿಸಬೇಕು. ಮನುಷ್ಯ ಆಗಾಗ ಆರೋಗ್ಯ ತಪಾಸಣೆಗೆ ಒಳಗಾಗುವಂತೆ ಕಾಲಕಾಲಕ್ಕೆ ಕೃಷಿ ಭೂಮಿಯ ಮಣ್ಣನ್ನು ಪರೀಕ್ಷೆ ಮಾಡಿಸಬೇಕು. ಪ್ರಾಚೀನ ಕೃಷಿ ಪದ್ಧತಿಯೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಚ್.ಎಂ. ನಾಗರಾಜು ಮಾತನಾಡಿ, ರೈತರ ಜ್ಞಾನ ಹೆಚ್ಚಿಸುವ ಕಾರ್ಯ ಮಾಡುವುದೇ ಈ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಉದ್ದೇಶ. ಕರ್ನಾಟಕವು ಇಡೀ ಭಾರತದಲ್ಲಿ ಹೆಚ್ಚು ತೋಟಗಾರಿಕೆ ಬೆಳೆಯನ್ನು ಬೆಳೆಯುವ ರಾಜ್ಯ. ನೀರಿನ ಸಮರ್ಪಕ ಬಳಕೆಗಾಗಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು. ಕೃಷಿಯಲ್ಲಿ ತಂತ್ರಜ್ಞಾನದ ಅಳವಡಿಕೆ ಅವಶ್ಯಕ. ಸಾವಯವ ಕೃಷಿಗೆ ಹೆಚ್ಚು ಒತ್ತುಕೊಟ್ಟು ಸರ್ಕಾರದ ವಿವಿಧ ಯೋಜನೆಗಳ ಉಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ನಿವೃತ್ತ ಐಎಎಸ್ ಅಧಿಕಾರಿ ಎಂ. ಮದನ್ ಗೋಪಾಲ್ ಮಾತನಾಡಿ, ರೈತರ ಆದಾಯ ಹೆಚ್ಚಳವಾದರೆ ದೇಶ ಸಮೃದ್ಧವಾಗಿರುತ್ತದೆ. ಇಂದು ಭಾರತ ಅಕ್ಕಿ ಉತ್ಪಾದನೆಯಲ್ಲಿ ಪ್ರಪಂಚದಲ್ಲೇ ಮೊದಲ ಸ್ಥಾನದಲ್ಲಿದೆ. ರೈತರು ಋತುಮಾನಕ್ಕೆ ಅನುಗುಣವಾಗಿ ಬೆಳೆ ಬೆಳೆಯಬೇಕು ಎಂದು ವಿವರಿಸಿದರು. ಮಾಜಿ ಶಾಸಕ ಮಹಿಮ ಪಟೇಲ್ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರಗಳು ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುವ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಹೆಚ್ಚು ರಾಸಾಯನಿಕಗಳನ್ನು ಬಳಕೆ ಮಾಡದೆ ಕೃಷಿ ಮಾಡಬೇಕು. ಸಾವಯವ ಕೃಷಿಯ ಜೊತೆಗೆ ಸಾವಯವ ರಾಜಕೀಯವೂ ಬೇಕು ಎಂದು ತಿಳಿಸಿದರು.ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ, ರೈತರು ನಮ್ಮ ಬದುಕಿನ ಜೀವನಾಡಿಯಾಗಿದ್ದಾರೆ. ಅವರ ಶ್ರೇಯೋಭಿವೃದ್ಧಿಗೆ ಸರ್ಕಾರ ಶ್ರಮಿಸಬೇಕು. ಕೃಷಿಕರು ಪಾರಂಪರಿಕ ವಿಧಾನಗಳ ಮೂಲಕವೂ ಕೃಷಿ ಕಾರ್ಯ ಕೈಗೊಳ್ಳಬೇಕು ಎಂದರು.ಡಾ.ಬಿ.ಎನ್. ಜ್ಞಾನೇಶ್ ಮಾತನಾಡಿ, ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಬಗ್ಗೆ ಮಾಹಿತಿ ನೀಡಿದರು. ಮಾತ್ರೋಶ್ರೀ ಪಾರ್ವತಮ್ಮ ಮತ್ತು ತಂಡದವರು ಪ್ರಾರ್ಥಿಸಿದರು. ಜಿ.ಎಲ್. ತ್ರಿಪುರಾಂತಕ ಸ್ವಾಗತಿಸಿದರು. ಕೆ.ಪಿ. ಬಸವರಾಜು ವಂದಿಸಿದರು. ಮಹದೇವ ಪ್ರಸಾದ್ ನಿರೂಪಿಸಿದರು.