ಸಾರಾಂಶ
ಹಗರಿಬೊಮ್ಮನಹಳ್ಳಿ: ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಕೊಡುವಾಗ ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು. ಸರ್ಕಾರಿ ಸೌಲಭ್ಯ ಪಡೆದುಕೊಂಡ ರೈತರಿಗೆ ಪುನಃ ಕೊಡುವುದರಿಂದ ದುರುಪಯೋಗವಾಗುತ್ತದೆ ಎಂದು ಶಾಸಕ ಕೃಷ್ಣನಾಯ್ಕ ತಿಳಿಸಿದರು.
ತಾಲೂಕಿನ ಹಂಪಸಾಗರ ಗ್ರಾಮದ ವಾಲ್ಮೀಕಿ ಭವನದಲ್ಲಿ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿದರು.ಬೆಳೆ ವಿಮೆ ಮಾಡಿಸಿದ ರೈತರಿಗೆ ವಿಮೆ ಸಿಗುವಂತೆ ಕಂಪನಿಗಳಿಗೆ ಕೃಷಿ ಅಧಿಕಾರಿಗಳು ಆದೇಶ ಮಾಡಬೇಕು. ಎಸ್‌ಸಿ, ಎಸ್‌ಟಿ ವರ್ಗದವರಿಗೆ ಕೃಷಿ ಸಲಕರಣೆಗಳನ್ನು ನೀಡಿರುವ ಸಮರ್ಪಕ ಮಾಹಿತಿ ಒದಗಿಸಿ ಎಂದು ಕೃಷಿ ಸಹಾಯಕ ನಿರ್ದೇಶಕ ಸುನೀಲ್‌ನಾಯ್ಕಗೆ ತಿಳಿಸಿದರು. ರೈತರಿಗೆ ಸೂಕ್ತ ಸಮಯದಲ್ಲಿ ಬೀಜ, ಗೊಬ್ಬರ ಸಿಗುವಂತೆ ನೋಡಿಕೊಳ್ಳಿ. ರೈತರ ಹೊಲಗಳಿಗೆ ಬೇಟಿನೀಡಿ ಮಣ್ಣು ಪರೀಕ್ಷೆ ಮಾಡಿ, ಅವರ ಭೂಮಿ ಯಾವ ಬೆಳೆಯಲು ಸೂಕ್ತ ಎಂಬುದನ್ನು ಕೃಷಿ ವಿಚಾರ ಸಂಕಿರಣಗಳ ಮೂಲಕ ರೈತರಿಗೆ ಮಾಹಿತಿ ಒದಗಿಸಿ ಎಂದರು.
ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವ ಬಡ ಜನತೆಗೆ ಶೀಘ್ರದಲ್ಲಿಯೇ ಸರ್ಕಾರ ಹಕ್ಕುಪತ್ರ ನೀಡಲಾಗುವುದು. ಹಂಪಸಾಗರ ಹೋಬಳಿ ವ್ಯಾಪ್ತಿಯ ಗದ್ದಿಕೇರಿ, ಸೊನ್ನ, ಮೋರಗೇರಿ, ಬನ್ನಿಕಲ್ಲು ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ಹಕ್ಕುಪತ್ರ ನೀಡಲಾಗುವುದು ಎಂದರು.ತೋಟಗಾರಿಕಾ ಸಹಾಯಕ ನಿರ್ದೇಶಕ ರಾಜೇಂದ್ರ ಮಾತನಾಡಿ, ಹೋಬಳಿ ವ್ಯಾಪ್ತಿಯಲ್ಲಿ ೨೭೫೦ ಹೆಕ್ಟೇರ್ ತೋಟಗಾರಿಕೆ ಬೆಳೆ ಇದ್ದು, ಈ ಸಾಲಿನಲ್ಲಿ ೧೫೦ಹೆಕ್ಟೇರ್ ಬೆಳೆ ಹೆಚ್ಚಿಸಲಾಗಿದೆ. ಪ್ರಮುಖವಾಗಿ ದಾಳಿಂಬೆ, ಪಪ್ಪಾಯಿ, ಡ್ರ್ಯಾಗನ್ ಫ್ರೂಟ್, ಪೇರಲ ಇತ್ಯಾದಿ ಬೆಳೆಗಳನ್ನು ರೈತರು ಬೆಳೆಯುತ್ತಾರೆ. ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ ಅಡಿಯಲ್ಲಿ ದಾಳಿಂಬೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ₹೧೫ ಸಾವಿರ ಪ್ರೋತ್ಸಾಹ ಧನ ಸಿಗುತ್ತದೆ. ಶೇ. ೯೦ರಷ್ಟು ಸಬ್ಸಿಡಿ ನೀಡಲಾಗುತ್ತಿದೆ ಎಂದರು.
ಈ ವ್ಯಾಪ್ತಿಯಲ್ಲಿ ಹಾಸ್ಟೆಲ್‌ಗಳು ಎಷ್ಟಿವೆ. ಎಸ್‌ಸಿ, ಎಸ್‌ಟಿ, ಬಿಸಿಎಂ ಹಾಸ್ಟೆಲ್‌ಗಳಿಗೆ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಿ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್ ಡೊಳ್ಳಿನ, ಬಿಸಿಎಂ ಅಧಿಕಾರಿ ರಮೇಶ್‌ಗೆ ತಿಳಿಸಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳ ಗುಣಾತ್ಮಕ ಶಿಕ್ಷಣಕ್ಕಾಗಿ ವಿಶೇಷ ತರಗತಿಗಳನ್ನು ಕಲ್ಪಿಸಿ ಎಂದು ಬಿಆರ್‌ಸಿ ಸಂಪನ್ಮೂಲ ಅಧಿಕಾರಿ ಪ್ರಭಾಕರಗೆ ತಿಳಿಸಿದರು.ಪ್ರತಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಆಟದ ಮೈದಾನ, ಕುಡಿಯುವ ನೀರು, ಅಡುಗೆ ಕೋಣೆ ಸೌಲಭ್ಯಗಳು ಇರುವಂತೆ ನೋಡಿಕೊಳ್ಳಿ ಎಂದು ಶಾಸಕರು ತಿಳಿಸಿದರು.
ಶಾಲಾ ಮಕ್ಕಳಿಗೆ ಬಿಸಿಯೂಟ, ಮೊಟ್ಟೆಯನ್ನು ಸಮರ್ಪಕವಾಗಿ ವಿತರಿಸಿ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜಕುಮಾರನಾಯ್ಕಗೆ ತಿಳಿಸಿದರು. ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ, ಲ್ಯಾಬ್ ಟೆಕ್ನಿಷನ್, ಸಿಬ್ಬಂದಿ ಕೊರತೆಯಾಗದಂತೆ ಜಾಗೃತಿ ವಹಿಸಿ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಪ್ರವೀಣ ಕುಮಾರಗೆ ತಿಳಿಸಿದರು.ಸಭೆಯಲ್ಲಿ ತಹಶೀಲ್ದಾರ್ ಕವಿತಾ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ವರಪ್ಪ, ಸಿಡಿಪಿಒ ಬೋರೇಗೌಡ, ಸಿಪಿಐ ವಿಕಾಸ್ ಲಮಾಣಿ, ಜೆಸ್ಕಾಂ ಅಧಿಕಾರಿ ಪ್ರಕಾಶ್‌ನಾಯ್ಕ, ಪಿಎಸ್‌ಐ ಬಸವರಾಜ ಅಡವಿಬಾವಿ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.