ಸಾರಾಂಶ
ರೈತರು ಸಿರಿಧಾನ್ಯ ಕೃಷಿಗೆ ಅದ್ಯತೆ ನೀಡಬೇಕುಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ ಉದ್ಘಾಟಿಸಿದ ಜಂಟಿ ಕೃಷಿ ನಿರ್ದೇಶಕಿ ಜಾವೀದಾ ನಸೀಮಾ ಖಾನಂ ಸಲಹೆ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸಾಂಪ್ರದಾಯಿಕ ಕೃಷಿಯಲ್ಲಿ ಸಿರಿಧ್ಯಾನಗಳನ್ನು ಬೆಳೆಯುವುದು ರೈತರಿಗೆ ವರದಾನವಾಗೆದೆ. ಹಿಂದಿನ ಕಾಲದಲ್ಲಿ ಒಂದೇ ಪ್ರದೇಶದಲ್ಲಿ ಇಂತಹ ಕನಿಷ್ಠ ಹತ್ತು ಬೆಳೆಗಳನ್ನು ಬೆಳೆಯುತ್ತಿದ್ದರು. ಈಗಿನ ಕಾಲದಲ್ಲೂ ಸಹ ವಿಶಿಷ್ಟ ಗುಣಗಳಿಂದ ಕೂಡಿದ ಭೂಮಿಯಲ್ಲಿ ಸಿರಿಧಾನ್ಯ ಬೆಳೆಗಳನ್ನು ಬೆಳೆಯಬಹುದೆಂದು ಜಂಟಿ ಕೃಷಿ ನಿರ್ದೇಶಕಿ ಜಾವೀದಾ ನಸೀಮಾ ಖಾನಂ ತಿಳಿಸಿದರು. ಗುರುವಾರ ಚಿಂತಾಮಣಿ ತಾಲೂಕಿನ ಕಾಗತಿ ಗ್ರಾಮದಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ 2023-24ನೇ ಸಾಲಿನ ಆತ್ಮಯೋಜನೆ ಹಾಗೂ ರಾಷ್ಟ್ರೀಯ ಆಹಾರ ಮತ್ತು ಪೌಷ್ಠಿಕ ಭದ್ರತಾ ಯೋಜನೆಯಡಿ ಗುರುವಾರ ಆಯೋಜಿಸಿದ್ದ, ಅಂತರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳದ ಅಂಗವಾಗಿ “ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ”ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲಿ ಬೇಕಾದರೂ ಬೆಳೆಯಬಹುದು
ಜಗತ್ತಿನಾದ್ಯಂತ ಸಾವಿರಕ್ಕೂ ಹೆಚ್ಚು ವಿಧವಿಧವಾದ ಧಾನ್ಯಗಳನ್ನು ಬೆಳೆಯಲಾಗುತ್ತದೆ. ಸಿರಿಧಾನ್ಯ ಬೆಳೆಗಳನ್ನು ಬೆಳೆಯುವ ದೇಶಗಳಲ್ಲಿ ನಮ್ಮ ಭಾರತ ದೇಶ ಅಗ್ರಸ್ಥಾನದಲ್ಲಿದೆ. ಅಕ್ಕಿ, ಗೋಧಿಗಿಂತಲೂ ನವಣೆ, ಸಜ್ಜೆಯ ಸೇವನೆಯೇ ಹೆಚ್ಚಾಗಿತ್ತು. ಮಳೆ ಕಡಿಮೆಯಾಗಲಿ, ಬಿಸಿಲು ಹೆಚ್ಚಾಗಲಿ ಯಾವ ಸಮಯದಲ್ಲಾದರೂ ಸಿರಿಧಾನ್ಯಗಳನ್ನು ಬೆಳೆಯಬಹುದು ಎಂದರು.
ಚಿಂತಾಮಣಿ ಉಪ ವಿಭಾಗದ ಉಪ ಕೃಷಿ ನಿರ್ದೇಶಕಿ ಮಂಜುಳಾ ಮಾತನಾಡಿ, ಸಿರಿಧಾನ್ಯಗಳನ್ನು ಕಡಿಮೆ ಖರ್ಚಿನಲ್ಲಿ ಬೆಳೆಯಬಹುದು ಮತ್ತು ರೈತರು ಕೊಟ್ಟಿಗೆ ಗೊಬ್ಬರ, ತರಗೆಲೆ ಗೊಬ್ಬರ ಬಳಸಿ ಸಿರಿಧಾನ್ಯಗಳನ್ನು ಬೆಳೆಯುವುದರಿಂದ ಲಾಭ ಗಳಿಸಬಹುದು ಜೊತೆಗೆ ರಸಗೊಬ್ಬರ ಬಳಸದಿರುವುದರಿಂದ ಕೀಟಗಳ ತೊಂದರೆಯ ಪ್ರಶ್ನೆಯೇ ಇರುವುದಿಲ್ಲ ಎಂದು ತಿಳಿಸಿದರು.ಸಮತೋಲನ ಆಹಾರ
ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸ್ನೇಹಲ್ ಗಿರಿಲಾಲ್ ಮಾತನಾಡಿ, ಸರ್ವ ರೋಗಕ್ಕೂ ರಾಮಬಾಣ ಸಿರಿಧಾನ್ಯ. ಸಿರಿಧಾನ್ಯದೊಂದಿಗೆ ನಿಮ್ಮ ಆರೋಗ್ಯಕರ ಜೀವನ ಪ್ರಾರಂಭಿಸಿ, ಇತ್ತೀಚಿಗೆ ಬದಲಾದ ಜೀವನ ಶೈಲಿಯಿಂದ ಮನುಷ್ಯರಿಗೆ ಕಾಡುತ್ತಿರುವ ಹೃದಯದ ಸಮಸ್ಯೆಗಳು, ಪಾರ್ಶ್ವವಾಯು, ರಕ್ತದೊತ್ತಡ, ಮಧುಮೇಹ ಹೀಗೆ ದೀರ್ಘಕಾಲ ಕಾಡುವ ಕಾಯಿಲೆಗಳಿಂದ ಜನರು ನಿಶಕ್ತರಾಗಿದ್ದಾರೆ. ಹಾಗಾಗಿ ಈ ಸಂದಂರ್ಭದಲ್ಲಿ ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಸಿರಿಧಾನ್ಯದ ಅವಶ್ಯಕತೆ ಜನರಿಗಿದೆ ಎಂದರು. ಕುರುಬೂರು ಕೆ.ವಿ.ಕೆ ತಾಂತ್ರಿಕ ಅಧಿಕಾರಿ ಡಾ.ಆರ್. ಅರುಣಾಜಿ ಮಾತನಾಡಿ, ಸಿರಿಧಾನ್ಯಗಳಲ್ಲಿ ಬಹಳಷ್ಟು ಹೆಚ್ಚಿನ ಪ್ರಮಾಣದ ಪೌಷ್ಠಿಕ ಸತ್ವಗಳಾದ ಮೇಗ್ನಿಷಿಯಂ, ತಾಮ್ರ, ಪಾಸ್ಪರಸ್ ಮತ್ತು ಮ್ಯಾಂಗನೀಸ್ ಅಂಶಗಳು ಸೇರಿವೆ. ನಾವು ಪ್ರತಿ ದಿನ ಸೇವಿಸುವ ಆಹಾರ ಪದಾರ್ಥಗಳಿಗೆ ಹೊಲಿಸಿದರೆ ಸಿರಿಧಾನ್ಯಗಳಲ್ಲಿ ಸಿಗುವ ಪೌಷ್ಠಿಕಾಂಶಗಳ ಲಾಭವೇ ಹೆಚ್ಚು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕಿ ಪಿ. ಮಂಜುರಾಣಿ, ಡಿ.ಎ.ಟಿ.ಸಿ ಕಾಗತಿ ಸಹಾಯ ಕೃಷಿ ನಿರ್ದೇಶಕಿ ಚೇತನಾ, ಕುರುಬೂರು ಕೆ.ವಿ.ಕೆಯ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಪಾಪಿರೆಡ್ಡಿ, ವಿಜ್ಞಾನಿ ವಿಶ್ವನಾಥ್, ಉಪ ಯೋಜನಾ ನಿರ್ದೇಶಕರು(ಆತ್ಮ) ಸತೀಶ್ ಕುಮಾರ್, ಕಂಪ್ಯೂಟರ್ ಪ್ರೋಗ್ರಾಮರ್ ನಟರಾಜು.ಎಸ್, ಆತ್ಮ ಸಿಬ್ಬಂದಿಗಳು, ಡಿ.ಎ.ಟಿ.ಸಿ ಕಾಗತಿ ಸಿಬ್ಬಂದಿಗಳು, ರೈತ ಮತ್ತು ರೈತ ಮಹಿಳೆಯರು ಭಾಗವಹಿಸಿದ್ದರು.