ಸಾರಾಂಶ
ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡುಬಿದಿರೆ ಆಶ್ರಯದಲ್ಲಿ ಸಮಾಜ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಹಣ್ಣಿನ ಬೆಳೆಯಲ್ಲಿ ಸುಧಾರಿತ ಕ್ರಮ’ ವಿಷಯದ ಕುರಿತು ಎಸ್.ವಿ.ಎಸ್. ಕಾಲೇಜು ಬಂಟ್ವಾಳದ ಉಪನ್ಯಾಸಕ ಪ್ರೊ.ವಿನಾಯಕ ಕೆ.ಎಸ್. ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಹವಾಮಾನ ವೈಪರೀತ್ಯ, ಮಣ್ಣಿನ ಫಲವತ್ತತೆಯನ್ನು ನೋಡಿಕೊಂಡು ಮೌಲ್ಯವರ್ಧಿತ ಬೆಳೆಗಳನ್ನು ಬೆಳೆಸಬೇಕು. ಕೇವಲ ಕೂಲಿ ಕಾರ್ಮಿಕರನ್ನು ನೆಚ್ಚಕೊಳ್ಳದೆ, ಮನೆಯವರು ಕೂಡ ಕೃಷಿಯಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡಾಗ ಕೃಷಿಯನ್ನು ಲಾಭದಾಯಕ ಉದ್ಯೋಗವಾಗಿಸಿಕೊಳ್ಳಬಹುದು ಎಂದು ಎಸ್.ವಿ.ಎಸ್. ಕಾಲೇಜು ಬಂಟ್ವಾಳದ ಉಪನ್ಯಾಸಕ ಪ್ರೊ.ವಿನಾಯಕ ಕೆ.ಎಸ್. ಹೇಳಿದರು.ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡುಬಿದಿರೆ ಆಶ್ರಯದಲ್ಲಿ ಸಮಾಜ ಮಂದಿರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ‘ಹಣ್ಣಿನ ಬೆಳೆಯಲ್ಲಿ ಸುಧಾರಿತ ಕ್ರಮ’ ವಿಷಯದ ಕುರಿತು ಮಾತನಾಡಿದರು.
ಹಲಸು, ಮಾವು, ಡ್ರ್ಯಾಗನ್, ಲಿಂಬು, ಪಪ್ಪಾಯ ಜಿಲ್ಲೆಯ ಪ್ರಮುಖ ಹಣ್ಣಿನ ಬೆಳೆಗಳಾಗಿದ್ದು, ರೈತ ಸೂಕ್ತ ಮಾರುಕಟ್ಟೆ ನೋಡಿಕೊಂಡು ಇವುಗಳನ್ನು ಮಾರಾಟ ಮಾಡಿ ಲಾಭಗಳಿಸಬಹುದು ಎಂದರು.ಅಧ್ಯಕ್ಷತೆ ವಹಿಸಿದ ಎಂಸಿಎಸ್ ಸೊಸೈಟಿ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ಕೃಷಿಯಲ್ಲಿ ಸುಧಾರಿತ ಬೆಳೆಗಳು ಹಾಗೂ ತಂತ್ರಜ್ಞಾನದ ಬಳಕೆ ಆಗಬೇಕು. ಕೃಷಿ ಬಗ್ಗೆ ರೈತರಿಗೆ ಸೂಕ್ತ ಸಮಯದಲ್ಲಿ ಸರಿಯಾದ ಮಾಹಿತಿ ಸಿಗಬೇಕು ಎಂದರು. ಕೃಷಿ ವಿಚಾರ ವಿನಿಮಯ ಕೇಂದ್ರದ ಮಾಜಿ ಅಧ್ಯಕ್ಷ ರಾಜವರ್ಮ ಬೈಲಂಗಡಿ ಮಾತನಾಡಿ, ಮೂಡುಬಿದಿರೆಯಲ್ಲಿ ಅನೇಕ ಅನನಾಸು ಕೃಷಿಕರಿದ್ದಾರೆ. ಅನನಾಸು ಹಾಗೂ ಅದರ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ಮೂಡುಬಿದಿರೆಯಲ್ಲಿ ‘ಅನನಾಸು ಉಪ ಉತ್ಪನ್ನ ಕೇಂದ್ರ’ ತೆರೆಯುವ ಚಿಂತನೆ ಇದೆ ಎಂದು ಹೇಳಿದರು.ಧಾರವಾಡಕ್ಕೆ ವರ್ಗಾವಣೆಯಾದ ಇಲ್ಲಿನ ತೋಟಗಾರಿಕೆ ಅಧಿಕಾರಿ ಯುಗೇಂದ್ರ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಕೃಷಿಕ ಧನಕೀರ್ತಿ ಬಲಿಪ ಸನ್ಮಾನ ಪತ್ರ ವಾಚಿಸಿದರು.ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಅಭಯ ಕುಮಾರ್, ರೈತಜನ್ಯ ಫಾರ್ಮರ್ ಪ್ರೊಡ್ಯೂಸರ್ ಕಂಪನಿಯ ಅಧ್ಯಕ್ಷ ಲಿಯೋ ವಾಲ್ಟರ್ ನಜ್ರೆತ್ ಉಪಸ್ಥಿತರಿದ್ದರು. ಸದಾನಂದ ನಾರಾವಿ ನಿರೂಪಿಸಿದರು. ಸಂದೀಪ್ ವಂದಿಸಿದರು.