ರೈತರು ರಾಗಿ ಉತ್ಪಾದನೆ ಹೆಚ್ಚಳಕ್ಕೆ ಮುಂದಾಗಬೇಕು: ಎಸ್.ದಯಾನಂದಕುಮಾರ್

| Published : Jan 03 2025, 12:31 AM IST

ರೈತರು ರಾಗಿ ಉತ್ಪಾದನೆ ಹೆಚ್ಚಳಕ್ಕೆ ಮುಂದಾಗಬೇಕು: ಎಸ್.ದಯಾನಂದಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಇಲಾಖೆ ತನ್ನ ಯೋಜನೆ ಅಡಿ ಬಿತ್ತನೆ ಬೀಜ ಪೂರೈಕೆ, ಕೃಷಿಯಂತ್ರೀಕರಣ, ಸೂಕ್ಷ್ಮ ನೀರಾವರಿ ಯೋಜನೆ, ದ್ವಿತೀಯ ಕೃಷಿ ನವೋದ್ಯಮ, ಸಸ್ಯ ಸಂರಕ್ಷಣಾ ಯೋಜನೆ, ಕೃಷಿ ಭಾಗ್ಯ ಮುಂತಾದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ರಾಗಿ ಬೆಳೆ ಉತ್ಪಾದನೆ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ರೈತರು ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ರಾಗಿ ಉತ್ಪಾದನೆ ಹೆಚ್ಚಳಕ್ಕೆ ಮುಂದಾಗಬೇಕು ಎಂದು ಕೃಷಿ ಅಧಿಕಾರಿ ಎಸ್.ದಯಾನಂದ ಕುಮಾರ್ ಹೇಳಿದರು.

ತಾಲೂಕಿನ ಹರಕನಹಳ್ಳಿಯಲ್ಲಿ ಕೃಷಿ ಇಲಾಖೆ 2024- 25ನೇ ಸಾಲಿನಲ್ಲಿ ಆಹಾರ ಮತ್ತು ಪೌಷ್ಟಿಕತೆ ಭದ್ರತಾ ಯೋಜನೆಯಡಿ ನಡೆದ ರಾಗಿ ಸಾಲು ಬಿತ್ತನೆ ತರಬೇತಿ ಕ್ಷೇತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ರಾಗಿ ಉತ್ಪಾದನೆ ಹೆಚ್ಚಳಕ್ಕೆ ಕೃಷಿ ಪರಿಕರಗಳಾದ ಜಿಂಕ್ ಸಲ್ಫೇಟ್, ಬೋರಾಕ್ಸ್, ಲಘು ಪೋಷಕಾಂಶಗಳ ಮಿಶ್ರಣ, ಎರೆಹುಳು ಗೊಬ್ಬರ, ಕೀಟನಾಶಕ ಹಾಗೂ ಮುಂತಾದ ಕೃಷಿ ಪರಿಕರಗಳನ್ನು ಬಳಸಿಕೊಂಡು ನೂತನ ತಾಂತ್ರಿಕತೆಯೊಂದಿಗೆ ರಾಗಿ ಉತ್ಪಾದನೆ ಹೆಚ್ಚಳ ಸಾಧ್ಯವಾಗುವ ಜೊತೆಗ ರೈತರ ಆರ್ಥಿಕತೆ ಉತ್ತಮವಾಗುತ್ತದೆ ಎಂದರು.

ಕೃಷಿ ಇಲಾಖೆ ತನ್ನ ಯೋಜನೆ ಅಡಿ ಬಿತ್ತನೆ ಬೀಜ ಪೂರೈಕೆ, ಕೃಷಿಯಂತ್ರೀಕರಣ, ಸೂಕ್ಷ್ಮ ನೀರಾವರಿ ಯೋಜನೆ, ದ್ವಿತೀಯ ಕೃಷಿ ನವೋದ್ಯಮ, ಸಸ್ಯ ಸಂರಕ್ಷಣಾ ಯೋಜನೆ, ಕೃಷಿ ಭಾಗ್ಯ ಮುಂತಾದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ರೈತರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಟಿ.ಕೆ.ಸತೀಶ, ಕೃಷಿಕರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಬೇಕು ಎಂದು ಸಲಹೆ ನೀಡಿದರು. ಕೃಷಿ ಇಲಾಖೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಕೆ.ಎಸ್.ವಿಜಯಕುಮಾರ್, ಮಲ್ಲನಕುಪ್ಪೆ ಗ್ರಾಪಂ ಸದಸ್ಯ ಗಂಗರಾಜು, ರೈತ ಮುಖಂಡರಾದ ಪುಟ್ಟೇಗೌಡ, ಜಗದೀಶ, ಕೆಂಪರಾಜು ಸೇರಿದಂತೆ ನೂರಾರು ರೈತರು ಪಾಲ್ಗೊಂಡು ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು.