ಸಾರಾಂಶ
ಫಸಲ್ ವಿಮಾ ಯೋಜನೆಯಡಿ ನೋಂದಣಿಯಾಗಿದ್ದ ರೈತರಿಗೆ ಶೀಘ್ರವೇ ವಿಮೆ ಕಂತಿನ ಹಣ ಬಿಡುಗಡೆಯಾಗಲಿದೆ. ಯಾವುದೇ ರೈತರು ಅವಸರಪಟ್ಟು ಮಧ್ಯವರ್ತಿಗಳಿಗೆ ಹಣ ನೀಡಬಾರದು ಎಂದು ರೈತ ಮುಖಂಡ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಬಿ.ಕಲ್ಲೇರುದ್ರೇಶ್ ಜಗಳೂರಲ್ಲಿ ಹೇಳಿದ್ದಾರೆ.
ಜಗಳೂರು: ಫಸಲ್ ವಿಮಾ ಯೋಜನೆಯಡಿ ನೋಂದಣಿಯಾಗಿದ್ದ ರೈತರಿಗೆ ಶೀಘ್ರವೇ ವಿಮೆ ಕಂತಿನ ಹಣ ಬಿಡುಗಡೆಯಾಗಲಿದೆ. ಯಾವುದೇ ರೈತರು ಅವಸರಪಟ್ಟು ಮಧ್ಯವರ್ತಿಗಳಿಗೆ ಹಣ ನೀಡಬಾರದು ಎಂದು ರೈತ ಮುಖಂಡ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಬಿ.ಕಲ್ಲೇರುದ್ರೇಶ್ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೨೩ನೇ ಸಾಲಿನ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಡಿ ವಿವಿಧ ಬೆಳೆಗಳಿಗೆ ವಿಮೆ ಪಾವತಿಸಿದ್ದ ರೈತರಿಗೆ ಈಗಾಗಲೇ ಹಣ ಬಂದಿದೆ. ತಾಲೂಕಿನ ದೇವಿಕೆರೆ , ಹಾಲೇಕಲ್, ಗುತ್ತಿದುರ್ಗ, ಬಿಳಿಚೋಡು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರಿಗೆ ವಿಮಾ ಕಂತು ಹಣ ಪಾವತಿ ಆಗಿರಲಿಲ್ಲ. ಈ ಬಗ್ಗೆ ರಾಜ್ಯ ಕೃಷಿ ಸಚಿವಾಲಯ ಹಾಗೂ ಕೇಂದ್ರ ಕೃಷಿ ಸಮಿತಿ ಅಧಿಕಾರಿಗಳು ಸಭೆ ನಡೆಸಿ, ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿದ್ದಾರೆ. ಬಾಕಿ ಹಣ ಶೀಘ್ರವೇ ರೈತರ ಖಾತೆಗೆ ಜಮೆಯಾಗಲಿದೆ. ಯಾವುದೇ ಆತಂಕ ಬೇಡ ಎಂದು ಮನವಿ ಮಾಡಿದರು.ಕಳೆದ ವಾರ ದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವಾಲಯದ ಸರ್ಕಾರದ ಅಧಿಕೃತ ವಿಮಾ ಕಂಪನಿ ಇಲಾಖೆಗೆ ಭೇಟಿ ನೀಡಿ ವಿವರಣಾ ವರದಿ ಪಡೆದುಕೊಂಡಿದ್ದು, ಚುನಾವಣೆ ನೀತಿ ಸಂಹಿತೆಯಿಂದಾಗಿ ತಾಂತ್ರಿಕ ದೋಷಗಳನ್ನು ಸರಿಪಡಿಸಲು ಸಾಧ್ಯವಾಗಿರಲಿಲ್ಲ. ಇನ್ನು ಕೆಲವು ಕಡೆ ಬೆಳೆ ನೋಂದಣಿಯಲ್ಲಿ ಖಾತೆ ನಂಬರ್ ಬದಲಾವಣೆಯಾಗಿದ್ದ ಕಾರಣ ವಿಮಾ ಕಂತು ಪಾವತಿ ಆಗುವಲ್ಲಿ ವಿಳಂಬವಾಗಿದೆ ಎಂದು ರಾಜ್ಯ ಕೃಷಿ ಇಲಾಖೆ ಹಿರಿಯ ಸರ್ಕಾರದ ಉಪ ಕಾರ್ಯದರ್ಶಿ ಅವರಿಂದ ಮಾಹಿತಿ ಲಭ್ಯವಾಗಿದೆ. ಆದಕಾರಣ, ಅನಗತ್ಯವಾಗಿ ರೈತರು ಮಧ್ಯವರ್ತಿಗಳ ಮಾತಿಗೆ ಮರಳಾಗಿ ಹಣ ನೀಡಬೇಡಿ ಎಂದು ಮನವಿ ಮಾಡಿದರು.
ಜೆಡಿಎಸ್ ಮಹಿಳಾ ಘಟಕ ಅಧ್ಯಕ್ಷೆ ಸುನಂದಮ್ಮ ಯಲ್ಲಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಗೌರಮ್ಮನಹಳ್ಳಿ ರಾಜಣ್ಣ, ದೇವಿಕೆರೆ ಬಂಡೇರಾತಿಪ್ಪೇಸ್ವಾಮಿ ಇತರರು ಇದ್ದರು.- - - -16ಜೆಎಲ್.ಆರ್.1: