ಸಾರಾಂಶ
ತುಂತುರು ನೀರಾವರಿ ಘಟಕ ಸ್ಪ್ರಿಂಕ್ಲರ್ ಪೈಪ್ ವಿತರಣೆ ಕಾರ್ಯಕ್ರಮ ಉದ್ಘಾಟನೆ
ಶಿರಹಟ್ಟಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಲಾಭವನ್ನು ರೈತರು ಪಡೆದುಕೊಳ್ಳಬೇಕು. ತುಂತುರು ನೀರಾವರಿ ಯೋಜನೆ ಅಡಿಯಲ್ಲಿ ನೀರಾವರಿ ಹೊಂದಿರುವ ರೈತರು ಸಹಾಯಧನದಲ್ಲಿ ಸ್ಪ್ರಿಂಕ್ಲರ್ ಪೈಪ್‌ಗಳನ್ನು ಪಡೆದುಕೊಂಡು ಹೆಚ್ಚಿನ ಹಣಕ್ಕೆ ಬೇರೊಬ್ಬರಿಗೆ ಮಾರಾಟ ಮಾಡುವುದು ಕಂಡು ಬಂದಿದೆ. ಈ ತರಹದ ಬೆಳವಣಿಗೆ ರೈತರಲ್ಲಿ ಬರಬಾರದು ಎಂದು ಶಾಸಕ ಡಾ. ಚಂದ್ರು ಲಮಾಣಿ ಎಚ್ಚರಿಸಿದರು.ಶನಿವಾರ ಪಟ್ಟಣದ ಕೃಷಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ವಿಶ್ವ ಮಣ್ಣು ದಿನಾಚರಣೆ, ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿ ಘಟಕ ಸ್ಪ್ರಿಂಕ್ಲರ್ ಪೈಪ್ ವಿತರಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆ ಹೆಚ್ಚುತ್ತಲೇ ಇದೆ. ಇದರಿಂದ ಸಹಜವಾಗಿಯೇ ಕೃಷಿ ಯಂತ್ರೋಪಕರಣಗಳ ಬೇಡಿಕೆ ಹೆಚ್ಚುತ್ತಿದೆ. ಅಲ್ಲದೆ ರೈತರು ಕೂಡ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಲು ಉತ್ಸುಕರಾಗಿದ್ದು, ಕೆಲವು ರೈತರು ಹಣದ ಆಸೆಗೆ ಮಾರಾಟ ಮಾಡುವುದು ಸರಿಯಲ್ಲ ಎಂದರು.ಸರ್ಕಾರ ಬರಗಾಲದ ಹಣ ಬಿಡುಗಡೆ ಮಾಡದೇ ಇರುವುದರಿಂದ ನಮ್ಮ ಪಕ್ಷದ ಪರವಾಗಿ ಪ್ರತಿಭಟನೆ ಮಾಡಿ ಗಮನ ಸೆಳೆಯಲಾಗಿದೆ. ಪ್ರತಿಯೊಬ್ಬ ರೈತರಿಗೆ ರು. ೨೫ ಸಾವಿರ ಬರಗಾಲದ ಹಣ ಜಮಾ ಮಾಡಲು ಆಗ್ರಹಿಸಲಾಗಿದೆ. ನಮ್ಮದು ಮೀಸಲು ಮತಕ್ಷೇತ್ರ. ಅಲ್ಲದೇ ಅತ್ಯಂತ ಹಿಂದುಳಿ ತಾಲೂಕಾಗಿದೆ. ಇಲ್ಲಿ ಬಡ ಕೂಲಿ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದ್ದು, ಬ್ಯಾಂಕ್ ಅಧಿಕಾರಿಗಳು ರೈತರ ಬೆಳೆ ವಿಮೆ, ಬೆಳೆ ಪರಿಹಾರದ ಹಣವನ್ನು ಅವರ ಸಾಲದ ಖಾತೆಗೆ ಜಮೆ ಮಾಡಿಕೊಳ್ಳಬಾರದು ಎಂದು ಸೂಚನೆ ನೀಡಿದರು.
ಕೃಷಿ ಇಲಾಖೆಯ ಉಪ ನಿರ್ದೇಶಕಿ ಸ್ಮೃತಿ ಜಿ.ಎಸ್. ಮಾತನಾಡಿ, ಸರ್ಕಾರಗಳು ಕೃಷಿ ಇಲಾಖೆ ವತಿಯಿಂದ ರೈತರಿಗೆ ಸಹಾಯಧನದಡಿ ಬೀಜ, ಗೊಬ್ಬರ, ಲಘು ಫೋಷಕಾಂಶ, ತುಂತುರು ನೀರಾವರಿ ಸೌಲಭ್ಯ ನೀಡುತ್ತಿದ್ದು, ಈ ಬಾರಿ ೮೦೦ ಸೆಟ್ ಸ್ಪ್ರಿಂಕ್ಲರ್ ಪೈಪ್ ವಿತರಣೆ ಗುರಿ ನೀಡಲಾಗಿದೆ. ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.ರೈತರು ೪೬೬೧ ವಂತಿಗೆ ಹಣ ತುಂಬಿ ಸ್ಪ್ರಿಂಕ್ಲರ್ ಸೆಟ್ ಪಡೆಯಬಹುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಪಡೆಯಬಹುದು. ಕೃಷಿ ಯಂತ್ರೋಪಕರಣ, ಬಿತ್ತನೆ ಕೂರಿಗೆ ಸೇರಿದಂತೆ ಸಾಮಾನ್ಯ ರೈತರಿಗೆ ಶೇ. ೫೦ ಸಹಾಯಧನ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಶೇ. ೯೦ರ ಸಹಾಯಧನದಲ್ಲಿ ಪಡೆಯಬಹುದು. ರೈತರು ತಮ್ಮ ಜಮೀನುಗಳ ಉತಾರ ಬೇರೊಬ್ಬರಿಗೆ ನೀಡಿ ಈ ಸೌಲಭ್ಯದಿಂದ ವಂಚಿತರಾಗಬಾರದು ಎಂದು ಕರೆ ನೀಡಿದರು.
ಜಲಾನಯನ ಯೋಜನೆ ಅಡಿಯಲ್ಲಿ ಕೃಷಿ ಹೊಂಡ, ಡೀಸೆಲ್ ಪಂಪ್‌ಸೆಟ್, ತಾಡಪತ್ರಿಗಳನ್ನು ಕೂಡ ನೀಡಲಾಗುತ್ತಿದೆ. ರೈತರು ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆಯಲ್ಲಿ ಸಂಪರ್ಕ ಮಾಡಿ ಸರ್ಕಾರದ ಎಲ್ಲ ಸೌಲಭ್ಯ ಪಡೆದುಕೊಂಡು ಆರ್ಥಿಕವಾಗಿ ಸುಧಾರಣೆ ಹೊಂದಬೇಕು ಎಂದು ಕರೆ ನೀಡಿದರು.ತಾಲೂಕು ಸಹಾಯಕ ಕೃಷಿ ನಿರ್ದೇಶಕ ರೇವಣೆಪ್ಪ ಮನಗೂಳಿ, ಕೃಷಿ ಅಧಿಕಾರಿ ರಮೇಶ ಲಮಾಣಿ, ಯಲ್ಲಪ್ಪ ಬಂಗಾರಿ, ಜಾನು ಲಮಾಣಿ, ತಿಪ್ಪಣ್ಣ ಕೊಂಚಿಗೇರಿ, ಫಕ್ಕೀರೇಶ ರಟ್ಟಿಹಳ್ಳಿ, ಗೂಳಪ್ಪ ಕರಿಗಾರ, ಅಕಬರ ಯಾದಗಿರಿ, ಚಂದ್ರಪ್ಪ ಹೊಸಮನಿ, ಬಸವರಾಜ ನಾವಿ, ನಂದಾ ಪಲ್ಲೇದ, ರಮೇಶ ಕೋಳಿವಾಡ, ಆನಂದ ಕೊಡ್ಲಿ, ಸೌಮ್ಯ ಚಹ್ವಾಣ ಸೇರಿ ಅನೇಕರು ಇದ್ದರು.