ಸಾರಾಂಶ
ರೈತರೇ ಎಚ್ಚರದಿಂದಿರಿ, ರೋಗಬಾಧೆಯಿಂದ ತೆಂಗು ಮರಗಳು ಸಾವು ತಪ್ಪುತ್ತಿರುವ ಈ ಸಂದರ್ಭ, ನಾವು ಎಲ್ಲಾ ರೈತರು ಒಟ್ಟಾಗಿ ಧ್ವನಿ ಎತ್ತದೇ ಇದ್ದರೆ, ನಮ್ಮ ಪ್ರಮುಖ ವಾಣಿಜ್ಯ ಬೆಳೆ ಸಂಪೂರ್ಣ ನಾಶವಾಗುತ್ತದೆ.
ಕನ್ನಡಪ್ರಭ ವಾರ್ತೆ ಅರಸೀಕೆರೆ
ತೆಂಗಿನ ಮರಗಳಿಗೆ ತೀವ್ರ ರೋಗಬಾಧೆ ತಗುಲುತ್ತಿರುವ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಜಾಜೂರು ಗ್ರಾಮದಲ್ಲಿ ತಾಂತ್ರಿಕ ಕಾರ್ಯಾಗಾರ ಏರ್ಪಡಿಸಲಾಗಿತ್ತು.ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಅವರು ಮಾತನಾಡಿ, ರೈತರೇ ಎಚ್ಚರದಿಂದಿರಿ, ರೋಗಬಾಧೆಯಿಂದ ತೆಂಗು ಮರಗಳು ಸಾವು ತಪ್ಪುತ್ತಿರುವ ಈ ಸಂದರ್ಭ, ನಾವು ಎಲ್ಲಾ ರೈತರು ಒಟ್ಟಾಗಿ ಧ್ವನಿ ಎತ್ತದೇ ಇದ್ದರೆ, ನಮ್ಮ ಪ್ರಮುಖ ವಾಣಿಜ್ಯ ಬೆಳೆ ಸಂಪೂರ್ಣ ನಾಶವಾಗುತ್ತದೆ. ಸರ್ಕಾರವು ತಕ್ಷಣವೇ ತಾಂತ್ರಿಕ ನೆರವು ಮತ್ತು ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ 1.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯುತ್ತಿದ್ದು, ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಹೆಚ್ಚು ತೆಂಗು ಬೆಳೆಗಾರರಿದ್ದಾರೆ. ಈಗಾಗಲೇ ಸುಮಾರು 56 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೋಗಗಳು ಪತ್ತೆಯಾಗಿವೆ. ಕಾಂಡ ಸೋರುವ ರೋಗ, ಬಿಳಿನೊಣ, ಕಪ್ಪು ಹುಳು, ಅಣಬೆ ಹಾಗೂ ಸುಳಿಕೊಳೆ ರೋಗಗಳು ಉಲ್ಬಣಗೊಂಡಿವೆ.ಕೇಂದ್ರ ಸರ್ಕಾರದ ನಿರ್ಲಕ್ಷ್ಯ:
ತೆಂಗು ಬೆಳೆ ಹಾಳಾಗುತ್ತಿರುವ ಎಚ್ಚರಿಕೆ ಇದ್ದರೂ ಕೂಡ ಕೇಂದ್ರದ ಕೊಕನೆಟ್ ಬೋರ್ಡ್ ನಿರ್ಲಕ್ಷ್ಯ ತೋರಿರುವ ಬಗ್ಗೆ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರವು ಕನಿಷ್ಠ ಐನೂರು ಕೋಟಿ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ನಾವು ರೈತರೊಂದಿಗೆ ಹೋರಾಟಕ್ಕೂ ಸಿದ್ಧ ಎಂದರು.ಅವಶ್ಯಕ ಔಷಧಿ ಸಿಂಪಡಣೆ, ವಿಜ್ಞಾನಿಗಳ ತಂಡದ ಸಮಿತಿಯ ರಚನೆ, ಹಾಗೂ ಕೀಟನಾಶಕ ಕಾರ್ಯಕ್ರಮಗಳ ಅನುಷ್ಠಾನ ಇವು ತಕ್ಷಣವೇ ಪ್ರಾರಂಭವಾಗಬೇಕು. ಅಂತಿಮವಾಗಿ, ನಾವು ಆಂದೋಲನಕ್ಕೂ ತಯಾರಾಗಬೇಕಾಗಬಹುದು ಎಂದು ಹೇಳಿದರು.
ವಿಜ್ಞಾನಿ ಡಾ. ನಾಗೇಂದ್ರ ಅವರು ರೈತರಿಗೆ ತೋಟದಲ್ಲಿ ರೋಗದ ಲಕ್ಷಣಗಳನ್ನು ಗುರುತಿಸುವ ತರಬೇತಿ ನೀಡಿದರು. ಪೋಟ್ಯಾಸ್ ಬಳಕೆ, ಬೇವಿನ ಎಣ್ಣೆ ಸಿಂಪಡಣೆ, ಹಳದಿ ಬಣ್ಣದ ಬಲೆ ಬಳಕೆ, ಪರತಂತ್ರ ಜೀವಿಗಳ ಬಿಡುಗಡೆ ಇವುಗಳ ಬಳಕೆ ರೋಗ ನಿಯಂತ್ರಣಕ್ಕೆ ಸಹಾಯಕಾರಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಹಾಸನ ತೋಟಗಾರಿಕಾ ಉಪನಿದೇಶಕ ಕೆ.ಎಸ್. ಯೋಗೀಶ್, ಸಹಾಯಕ ನಿರ್ದೇಶಕಿ ಸೀಮಾ, ವಿಜ್ಞಾನಿಗಳು ಡಾ. ಜಗದೀಶ್, ಡಾ. ನಾಗರಾಜ್ ಹಾಗೂ ರೈತ ಮುಖಂಡರು ಗಂಜಿಗೆರೆ ಚಂದ್ರಶೇಖರ್, ಕಾಟೀಕೆರೆ ಉಮೇಶ್, ಸಂಕೋಡನಹಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಸಕರು ತೋಟಗಾರಿಕೆ ಇಲಾಖೆಯಿಂದ ನೀಡಲಾಗಿರುವ ಔಷಧಿಗಳನ್ನು ರೈತರಿಗೆ ವಿತರಿಸಿದರು.