ಮಾಗಡಿ: ಕಸಬಾ ಮತ್ತು ಮಾಡಬಾಳ್ ಹೋಬಳಿಗೆ ಸಂಬಂಧಪಟ್ಟ ತಾಲೂಕು ಕಚೇರಿಯಲ್ಲಿ ಜ.20ರಂದು ಮಂಗಳವಾರ ಕಂದಾಯ ಹಾಗೂ ಸರ್ವೆ ಅದಾಲತ್ ನಡೆಸುತ್ತಿದ್ದು ಸಾರ್ವಜನಿಕರು ಸಮಸ್ಯೆಗಳಿಗೆ ಅರ್ಜಿ ಸಲ್ಲಿಸಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ಮಾಗಡಿ: ಕಸಬಾ ಮತ್ತು ಮಾಡಬಾಳ್ ಹೋಬಳಿಗೆ ಸಂಬಂಧಪಟ್ಟ ತಾಲೂಕು ಕಚೇರಿಯಲ್ಲಿ ಜ.20ರಂದು ಮಂಗಳವಾರ ಕಂದಾಯ ಹಾಗೂ ಸರ್ವೆ ಅದಾಲತ್ ನಡೆಸುತ್ತಿದ್ದು ಸಾರ್ವಜನಿಕರು ಸಮಸ್ಯೆಗಳಿಗೆ ಅರ್ಜಿ ಸಲ್ಲಿಸಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ತಾಲೂಕಿನ ಮತ್ತಿಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸಾರ್ವಜನಿಕರು ಸಮಸ್ಯೆಗಳ ಅರ್ಜಿಯಲ್ಲಿ ವಿಳಾಸ, ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ನಮೂದಿಸಿ ಆಯಾ ವೃತ್ತದ ವ್ಯಾಪ್ತಿಯ ಗ್ರಾಮ ಲೆಕ್ಕಿಗರ ಬಳಿ ನೀಡಬೇಕು. ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಒಂದು ತಿಂಗಳು ಅವಕಾಶ ಮಾಡಿಕೊಡುತ್ತೇವೆ. ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ನಂತರ ಜಿಲ್ಲಾಧಿಕಾರಿಗಳನ್ನು ಮಾಗಡಿಗೆ ಕರೆಸಿ ಸಮಸ್ಯೆ ಬಗೆಹರಿಸಲಾಗುತ್ತದೆ. ಕುದೂರು ಹಾಗೂ ತಿಪ್ಪಸಂದ್ರ ಹೋಬಳಿ ಕೇಂದ್ರಗಳಲ್ಲಿ ಒಂದೊಂದು ದಿನ ನಿಗದಿ ಮಾಡಲಿದ್ದು ನಾನು ಹಾಗೂ ಅಧಿಕಾರಿಗಳು ಅಲ್ಲಿಯೇ ಇರುತ್ತೇವೆ. ಸಹಾಯಕ ಉಪ ಭೂ ನಿರ್ದೇಶಕರು ಹಾಗೂ ತಹಸೀಲ್ದಾರರು ಸಹ ಸ್ಥಳದಲ್ಲಿಯೇ ಇದ್ದು ಸಮಸ್ಯೆಗಳನ್ನು ಅಲ್ಲಿಯೇ ಬಗೆಹರಿಸಲಾಗುವುದು ಎಂದು ಹೇಳಿದರು.ಸಮಸ್ಯೆ ಆಲಿಸಲು ಗ್ರಾಮಗಳಿಗೆ ಭೇಟಿ: ಶಾಸಕರು ಗ್ರಾಮಗಳಿಗೆ ಭೇಟಿ ನೀಡುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದು ಅಲ್ಲಿನ ಮೂಲ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದು, ಅಲ್ಲಿಯೇ ಬಗೆಹರಿಸಲಾಗುವುದು. ಮತ್ತಿಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ₹ 6 ಕೋಟಿ ವೆಚ್ಚದಲ್ಲಿ ಅನೇಕ ಕಾಮಗಾರಿಗಳಿಗೆ ಗುದ್ದಲಿಪೂಜೆ ಮಾಡಲಾಗುವುದು. ವೈ.ಜಿ.ಗುಡ್ಡ ಜಲಾಶಯದಿಂದ ಚಕ್ರಬಾವಿ ಹಾಗೂ 35ಕ್ಕೂ ಹೆಚ್ಚು ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶೀಘ್ರದಲ್ಲಿ ಶಂಕುಸ್ಥಾಪನೆ ಮಾಡಲಾಗುತ್ತದೆ. ಉಪಮುಖ್ಯಮಂತ್ರಿ ಸೇರಿದಂತೆ ಅನೇಕ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಬಾಲಕೃಷ್ಣ ತಿಳಿಸಿದರು.
ಈ ವೇಳೆ ತಹಸೀಲ್ದಾರ್ ಶರತ್ ಕುಮಾರ್, ತಾಪಂ ಇಒ ಜೈಪಾಲ್, ದಿಶಾ ಸಮಿತಿ ಮಾಜಿ ಸದಸ್ಯ ಜೆ.ಪಿ.ಚಂದ್ರೇಗೌಡ, ಕಾಂಗ್ರೆಸ್ ಮುಖಂಡರಾದ ಪೂಜಾರಿಪಾಳ್ಯ ಕೃಷ್ಣಮೂರ್ತಿ, ಸೀಗೆಕುಪ್ಪೆ ಶಿವಣ್ಣ, ಲೋಕೇಶ್, ಕೋರಮಂಗಲ ಶ್ರೀನಿವಾಸ್, ಕೆಂಪೇಗೌಡ, ಚಕ್ರಬಾವಿ ದೀಪಕ್, ಗಟ್ಟಿಪುರ ಶ್ರೀನಿವಾಸ್, ಮಹದೇವ್, ಕೃಷಿ ಇಲಾಖೆ ವಿಜಯಾ ಸವಣೂರು, ಅರಣ್ಯ ಇಲಾಖೆ ಚೈತ್ರ ಇತರರು ಭಾಗವಹಿಸಿದ್ದರು.(ಫೋಟೋ ಕ್ಯಾಪ್ಷನ್)
ಮಾಗಡಿ ತಾಲೂಕಿನ ಮತ್ತಿಕೆರೆಯಲ್ಲಿ ಗ್ರಾಪಂ ಕಟ್ಟಡ ಕಾಮಗಾರಿಗೆ ಶಾಸಕ ಎಚ್.ಸಿ.ಬಾಲಕೃಷ್ಣ ಗುದ್ದಲಿಪೂಜೆ ನೆರವೇರಿಸಿದರು. ದಿಶಾ ಸಮಿತಿ ಮಾಜಿ ಸದಸ್ಯ ಜೆ.ಪಿ.ಚಂದ್ರೇಗೌಡ ಹಾಗೂ ಇತರರಿದ್ದರು.