ಪೋಷಕಾಂಶ ಕೊರತೆಯಿಂದ ತಾಮ್ರ ರೋಗ ಅಥವಾ ಹಳದಿ ರೋಗಬಾಧೆಗೆ ಕಡಲೆ ಬೆಳೆ ತುತ್ತಾಗುವುದು. ಕಡಲೆಗೆ ಬೇಕಾದ ಲಘು ಪೋಶಕಾಂಶ ಕೊಡಬೇಕು.

ರೋಣ: ಸಾವಯವ ಕೃಷಿ ಮೂಲಕ ಸತ್ವಯುತ ಆಹಾರ ಉತ್ಪಾದನೆಯಲ್ಲಿ ರೈತರು ತೊಡಗಬೇಕು. ಅಂದಾಗ ಆರೋಗ್ಯಯುತ ಸಮಾಜ, ಸದೃಢ ದೇಶ ನಿರ್ಮಾಣ ಸಾಧ್ಯವಾಗುವುದು ಎಂದು ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದರು.

ತಾಲೂಕಿನ ಬಾಸಲಾಪುರ ಗ್ರಾಮದ ರೈತ ಶಿವಯೋಗಿ ನಡುವಿನಮನಿ ಅವರ ಜಮೀನಿನಲ್ಲಿ ತಾಪಂ, ಕೃಷಿ ಇಲಾಖೆ ಸಹಯೋಗದಲ್ಲಿ 2025- 26ನೇ ಸಾಲಿನ ಆತ್ಮ ಯೋಜನೆ ಹಾಗೂ ರಾಷ್ಟ್ರೀಯ ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆಯಡಿ ಬಿ15 ಹಾಗೂ ಬಿಜಿಡಿ 111-1 ಕಡಲೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೃಷಿಕರು ಹಳೇ ಕೃಷಿ ಪದ್ಧತಿಯ ವ್ಯವಸಾಯವನ್ನು ಕೈ ಬಿಡದೆ ಮುಂದುವರಿಸಬೇಕು. ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಆಹಾರ ವಿಷಪೂರಿತವಾಗುವುದು. ಸಾವಯವ ಕೃಷಿ ಉತ್ತಮ ಆರೋಗ್ಯಕ್ಕೆ ಇಂದಿನ ಅಗತ್ಯವಾಗಿದ್ದು, ನಮ್ಮ ನಾಡಿನ ಪ್ರತಿ ಕೃಷಿಕರ ಹಬ್ಬದ ಹಿಂದೆಯೂ ಒಂದೊಂದು ವೈಜ್ಞಾನಿಕ ಕಾರಣವಿದೆ.

ಪೋಷಕಾಂಶ ಕೊರತೆಯಿಂದ ತಾಮ್ರ ರೋಗ ಅಥವಾ ಹಳದಿ ರೋಗಬಾಧೆಗೆ ಕಡಲೆ ಬೆಳೆ ತುತ್ತಾಗುವುದು. ಕಡಲೆಗೆ ಬೇಕಾದ ಲಘು ಪೋಶಕಾಂಶ ಕೊಡಬೇಕು. ಜತೆಗೆ ಬೀಜೋಪಚಾರ ಮಾಡಬೇಕು. ಅಂದಾಗ ಬೆಳೆಗೆ ಯಾವದೇ ರೋಗಬಾಧೆ ಕಾಡುವುದಿಲ್ಲ. ಪೋಷಕಾಂಶ ಕೊರತೆಯಿಂದ ಇಳುವರಿ ಕಡಿಮೆಯಾಗುವುದು. ಭೂಮಿಗೆ ಬೇಕಾದ ಸತ್ವಗಳ ಬಗ್ಗೆ ರೈತರಲ್ಲಿ ತಿಳಿವಳಿಕೆ ಅತೀ ಮುಖ್ಯವಾಗಿದೆ ಎಂದರು.

ಕೃಷಿ ಸಂಪನ್ಮೂಲ ವ್ಯಕ್ತಿ ಸುರೇಶಗೌಡ ಪಾಟೀಲ ಮಾತನಾಡಿ, ನಾಡಿನ ರೈತರು ರಸಗೊಬ್ಬರಗಳಿಗಾಗಿ ಸರ್ಕಾರ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಮೇಲೆ ಅವಲಂಬಿತರಾಗುವ ಜತೆಗೆ ಸಾಲದ ಸುಳಿಗೆ ಸಿಲುಕಿಕೊಳ್ಳದೆ ಸಾವಯವ ಪದ್ಧತಿ ಅಳವಡಿಸಿಕೊಳ್ಳಬೇಕು. ಕೃಷಿಯಲ್ಲಿ ಆದಾಯದ ಏರುಪೇರು ಅಪೌಷ್ಟಿಕತೆ ಜಗತ್ತಿನಾದ್ಯಂತ ಪಸರಿಸುತ್ತಿದ್ದು, ಸದೃಢ ಆರೋಗ್ಯ ಹಾಗೂ ಸುಸ್ಥಿರ ಆರ್ಥಿಕತೆಗಾಗಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ. ಬಿತ್ತಿದ ದಿನದಿಂದಲೇ ಕೃಷಿ ಚಟುವಟಿಕೆ ಪ್ರಾರಂಭಿಸಿ ಪ್ರತಿ ಹಂತದಲ್ಲಿಯೂ ರೈತರು ಎಚ್ಚರಿಕೆ ತೆಗೆದುಕೊಳ್ಳಬೇಕು. ಕುಲಾಂತರಿ ತಳಿಗಳನ್ನು ಬೆಳೆಯದೆ ಜವಾರಿ ತಳಿಗಳ ಕಡೆ ರೈತರು ಮನಸ್ಸು ಮಾಡಬೇಕಿದೆ. ಸತ್ವಯುತ ಬೆಳೆಗಳಿಗಾಗಿ ಗೊಮೂತ್ರ, ಪಂಚಾಮೃತ ಬಳಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ರೋಣ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್. ತಹಶೀಲ್ದಾರ, ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಶಿವಪ್ಪ ಅರಹುಣಸಿ, ಹನುಮಂತಪ್ಪ ಪಟ್ಟೇದ, ಅಡಿವೆಪ್ಪ ಗಡಗಿ, ಹೊಳೆಆಲೂರ ಕೃಷಿ ಅಧಿಕಾರಿ ಸಾವಿತ್ರಿ ಶಿವನಗೌಡ್ರ, ಮೇಘರಾಜ ಬಾವಿ, ಬಸನಗೌಡ ಪ್ಯಾಟಿಗೌಡ್ರ, ಶಿವನಗೌಡ ಪಾಟೀಲ, ಸುವರ್ಣ ಪರಡ್ಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.