ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರರೈತರು ಬೆವರು ಸುರಿಸಿ ಬೆಳೆದ ಬೆಳೆಗಳನ್ನು ಖರೀದಿಸುವ ವ್ಯಾಪಾರಿ ಬೆಲೆ ನಿಗದಿ ಮಾಡುವಂತಾಗಿರುವುದು ದುರಂತ, ಇದು ಸರಿಹೋಗಲು ರೈತರು ಆರ್ಥಿಕವಾಗಿ ಸದೃಢರಾಗಬೇಕು ಅದಕ್ಕಾಗಿ ಉಪ ಕಸುಬುಗಳನ್ನು ಅವಲಂಬಿಸಬೇಕು ಎಂದು ರಾಜ್ಯ ಸಹಕಾರ ಸಚಿವ ಕೆ.ಎನ್.ರಾಜಣ್ಣ ಕರೆ ನೀಡಿದರು.ನಗರದ ಜ್ಯೋತಿ ಎಜುಕೇಷನ್ ಟ್ರಸ್ಟ್ ಆವರಣದಲ್ಲಿನ ಜನೋಪಕಾರಿ ದೊಡ್ಡಣ್ಣ ರಂಗಮಂದಿರದಲ್ಲಿ ಜ್ಯೋತಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನೂತನ ಕಟ್ಟಡ ಉದ್ಘಾಟನೆ, ಸರ್ವಸದಸ್ಯರ ಸಭೆಗೆ ಚಾಲನೆ ನೀಡಿ ಮಾತನಾಡಿ, ರೈತರು ಆರ್ಥಿಕವಾಗಿ ಸದೃಢವಾಗದ ಹೊರತೂ ಶೋಷಣೆ ತಪ್ಪದು ಎಂದರು.ಕೃಷಿಯ ಜತೆಗೆ ಉಪಕಸುಬಾಗಿ ಹೈನುಗಾರಿಕೆ ಹೈನುಗಾರಿಕೆ ಪಿತಾಮಹ ಕುರಿಯನ್, ಬಣಕರ್, ಎಂ.ವಿ.ಕೆ. ಅವರು ಪರಿಚಯಿಸಿ ಅಭಿವೃದ್ದಿ ಪಡಿಸದಿದ್ದರೆ ಇಂದು ನಮ್ಮ ರೈತರ ಸ್ಥಿತಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿತ್ತು ಎಂದರು.ಸಾಲ ಮರುಪಾವತಿ ಜವಾಬ್ದಾರಿ ಯಾವುದೇ ಸಹಕಾರಿ ಸಂಸ್ಥೆಗಳನ್ನು ಪ್ರಾರಂಭಿಸುವುದು ಸುಲಭ, ಆದರೆ ಮುನ್ನೆಡೆಸುವುದು ಸುಲಭವಲ್ಲ ಎಚ್ಚರಿಕೆ ಅತ್ಯಗತ್ಯ, ಸ್ವಲ್ಪ ಲೋಪ ದೋಷಗಳಾದರೂ ನಷ್ಟಕ್ಕೆ ತುತ್ತಾಗುವ ಸಾಧ್ಯತೆಗಳಿದೆ, ಸಹಕಾರಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ಪ್ರಾಮಾಣಿಕತೆ ಹಾಗೂ ಜವಾಬ್ದಾರಿ ಇರಬೇಕು. ಸಾಲ ಪಡೆಯುವ ಹಕ್ಕು ಇರುವಂತೆ ಮರು ಪಾವತಿಸುವಂತ ಜವಾಬ್ದಾರಿಯು ಇರಬೇಕು. ಸಹಕಾರ ಸಂಸ್ಥೆಯು ಸದೃಢವಾಗಿ ಬೆಳೆಯಬೇಕಾದರೆ ಪ್ರಾಮಾಣಿಕ ಪ್ರಯತ್ನಗಳು ಅತ್ಯಗತ್ಯ ಎಂದರು.
ಸೊಸೈಟಿಯ ಕಾವಲುಗಾರಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸೊಸೈಟಿಯಲ್ಲಿ ನಾನು ಯಾವುದೇ ಆಡಳಿತ ಹುದ್ದೆಯಲ್ಲಿ ಇರದಿದ್ದರೂ ಸೊಸೈಟಿಗೆ ಕಾವಲುಗಾರನಾಗಿದ್ದು, ಮಾರ್ಗದರ್ಶನ ನೀಡುವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೊತ್ತೂರು ಡಾ.ಜಿ.ಮಂಜುನಾಥ್ ಮಾತನಾಡಿ, ಸಿದ್ದರಾಮಯ್ಯ ಸಿಎಂ ಆದ ಮೇಲೆ ರೈತರು ಪಡೆದ ಸಾಲ ಅಸಲು ಕಟ್ಟಿದರೆ ಬಡ್ಡಿ ಮನ್ನಾ ಮಾಡಿದರು, ಈ ಸಂದರ್ಭದಲ್ಲಿ ಮುಳಬಾಗಿಲು ಪಿ.ಎಲ್.ಡಿ. ಬ್ಯಾಂಕಿನ ೩೫ ಲಕ್ಷ ರು. ಅಸಲು ನಾನೇ ಕಟ್ಟಿ ಆ ಸಂಸ್ಥೆ ರೈತರಿಗಾಗಿ ಉಳಿಸಿದೆ ಎಂದರು.₹೧೩.೫ ಲಕ್ಷ ಶೇರು ಸಂಗ್ರಹ
ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಈ ಸಂಸ್ಥೆಯ ಸಂಸ್ಥಾಪಕ ವಿ.ಆರ್.ಸುದರ್ಶನ್ ಅವರು ಸುಮಾರು ೧೩.೫ ಲಕ್ಷ ರೂ ಶೇರುಗಳನ್ನು ಸಂಗ್ರಹಿಸಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಲ್ಲಿ ಠೇವಣಿ ಇರಿಸಿದ್ದಾರೆ ಎಂದರು.ಸೊಸೈಟಿಯ ಅಧ್ಯಕ್ಷ ಎಂ.ಜಿ.ಮಧುಸೂಧನ್ ಸ್ವಾಗತಿಸಿದರು. ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಸಹಾಯಕ ಕಮೀಷನರ್ ಡಾ.ಮೈತ್ರಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪೈರೋಜ್ ಖಾನ್, ಸಹಾಯಕ ನಿಬಂಧಕ ನವೀನ್ ಕುಮಾರ್, ಅಖಿಲ ಕರ್ನಾಟಕ ಗಾಣಿಗರ ಸಂಘದ ಅಧ್ಯಕ್ಷ ರಾಜಶೇಖರ್, ಕೃಷ್ಣ, ಸೊಸೈಟಿ ಉಪಾಧ್ಯಕ್ಷ ವಿ.ಸತೀಶ್‌ಮೂರ್ತಿ ಮತ್ತಿತರರು ಇದ್ದರು.