ಕೃಷಿಯಲ್ಲಿ ರೈತರು ಕೇವಲ ಬೆಳೆಗಾರರಾಗಿ ಉಳಿಯದೆ ವಿಜ್ಞಾನಿಗಳು ಹಾಗೂ ಸಂಶೋಧಕರಾಗುತ್ತಿದ್ದು, ಇಂದಿನ ದಿನಗಳಲ್ಲಿ ಕೃಷಿ ಲಾಭದಾಯಕವಾಗಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಂತಹ ಆಧುನಿಕ ತಂತ್ರಜ್ಞಾನಗಳ ಬಳಕೆ ಅತ್ಯಗತ್ಯ ಎಂದು ಶಾಸಕ ಟಿ.ಬಿ. ಜಯಚಂದ್ರ ತಿಳಿಸಿದರು.
ಕನ್ನಡಪ್ರಭ ವಾರ್ತೆ ಶಿರಾ
ಕೃಷಿಯಲ್ಲಿ ರೈತರು ಕೇವಲ ಬೆಳೆಗಾರರಾಗಿ ಉಳಿಯದೆ ವಿಜ್ಞಾನಿಗಳು ಹಾಗೂ ಸಂಶೋಧಕರಾಗುತ್ತಿದ್ದು, ಇಂದಿನ ದಿನಗಳಲ್ಲಿ ಕೃಷಿ ಲಾಭದಾಯಕವಾಗಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಂತಹ ಆಧುನಿಕ ತಂತ್ರಜ್ಞಾನಗಳ ಬಳಕೆ ಅತ್ಯಗತ್ಯ ಎಂದು ಶಾಸಕ ಟಿ.ಬಿ. ಜಯಚಂದ್ರ ತಿಳಿಸಿದರು.ಅವರು ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯಲ್ಲಿ ಮಂಗಳವಾರ ಕೃಷಿ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೂತನ ರೈತ ಸಂಪರ್ಕ ಕೇಂದ್ರ ಕಚೇರಿ ಕಟ್ಟಡದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಜಗತ್ತಿನಲ್ಲಿ ರೈತನೇ ನಿಜವಾದ ದೇವರು. ಹೀಗಾಗಿ ರೈತರಿಗೆ ಅನುಕೂಲವಾಗಲು ಕೃಷಿ, ತೋಟಗಾರಿಕೆ, ಮೀನುಗಾರಿಕೆ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಒಂದೇ ಸೂರಿನಡಿ ಸಿಗುವಂತಾಗಲು ರಾಜ್ಯದ ೭೪೫ ಹೋಬಳಿಗಳಲ್ಲಿ ಏಕಕಾಲಕ್ಕೆ ರೈತ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಅದಕ್ಕೆ ರೈತ ಸಂಪರ್ಕ ಕೇಂದ್ರ ಎಂದು ನಾಮಕರಣ ಮಾಡಿದ್ದು ಅಂದಿನ ಸಿಎಂ ಎಸ್. ಎಂ. ಕೃಷ್ಣ ಎಂದು ಸ್ಮರಿಸಿದರು.
ನನ್ನ ೫೦ ವರ್ಷಗಳ ಶಾಸಕತ್ವದ ಅವಧಿಯಲ್ಲಿ ಇಂತಹ ಭೀಕರ ಬರಗಾಲ ನೋಡಿರಲಿಲ್ಲ ಎಂದ ಜಯಚಂದ್ರ ಅವರು, ನೀರು ಬಂದ ಮೇಲೆ ಈ ಭಾಗದಲ್ಲಿ ಶೇಂಗಾ ಬೆಳೆಯುವ ಬದಲು ೬೦,೦೦೦ ಎಕರೆಯಷ್ಟು ಅಡಿಕೆ, ತೆಂಗು ಬಂದಿದೆ. ನಾನು ಕೃಷಿ ಮಂತ್ರಿಯಾಗಿದ್ದಾಗ ಪರಿಚಯಿಸಿದ ಬಿ.ಟಿ. ಕಾಟನ್ (ಹತ್ತಿ) ಇಂದು ಹುಕುಂಟೆ ಮತ್ತು ದವಳಗೆರೆ ಹೋಬಳಿಯಲ್ಲಿ ೪೦,೦೦೦ ಎಕರೆಯಷ್ಟು ಬೆಳೆಯಲಾಗುತ್ತಿದ್ದು, ರೈತರು ಆರ್ಥಿಕವಾಗಿ ಸದೃಢರಾಗಿದ್ದಾರೆ ಎಂದರು.ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಎಚ್.ನಾಗರಾಜ್, ಕಳ್ಳಂಬೆಳ್ಳ ಹೋಬಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರುಕ್ಮಿಣಿ, ಕೃಷಿಕ ಸಮಾಜ ಅಧ್ಯಕ್ಷ ಮಂಜುನಾಥ್, ಬಗರ್ ಹುಕುಂ ಕಮಿಟಿ ಸದಸ್ಯ ನವೀನ್, ತೋಟಗಾರಿಕೆ ಇಲಾಖೆ ಸಹಾಯ ನಿರ್ದೇಶಕ ಸುಧಾಕರ್, ಪ್ರಕಾಶ್ ಬಾಲೇನಹಳ್ಳಿ, ಪ್ರಚಾರ ಸಮಿತಿ ಅಧ್ಯಕ್ಷ ಕಲಾವಿದ ರಾಜಣ್ಣ, ಮಾಜಿ ಜಿ.ಪಂ ಸದಸ್ಯ ಪರ್ವತಪ್ಪ, ಕಾಳಪ್ಪ ಚನ್ನಮಲ್ಲಪ್ಪ, ಡಾ. ಮನು ಪಾಟೀಲ್. ರಾಕೇಶ್, ಸೇರಿದಂತೆ ಹಲವರು ಹಾಜರಿದ್ದರು.