ಅರಣ್ಯ ಇಲಾಖೆ ಕಚೇರಿ ಮುಂದೆ ರೈತರ ಧರಣಿ

| Published : Jun 28 2024, 12:46 AM IST

ಸಾರಾಂಶ

ರಾಮನಗರ: ಕಾಡಾನೆಗಳನ್ನು ಹಿಮ್ಮಟ್ಟಿಸುವಲ್ಲಿ ವಿಫಲರಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳ ಧೋರಣೆ ಖಂಡಿಸಿ ರೈತರು ನಗರದ ಹೊರ ವಲಯದಲ್ಲಿರುವ ಅರಣ್ಯಇಲಾಖೆ ಕಚೇರಿ ಆವರಣದಲ್ಲಿ ಗುರುವಾರ ಧರಣಿ ಸತ್ಯಾಗ್ರಹ ನಡೆಸಿದರು.

ರಾಮನಗರ: ಕಾಡಾನೆಗಳನ್ನು ಹಿಮ್ಮಟ್ಟಿಸುವಲ್ಲಿ ವಿಫಲರಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳ ಧೋರಣೆ ಖಂಡಿಸಿ ರೈತರು ನಗರದ ಹೊರ ವಲಯದಲ್ಲಿರುವ ಅರಣ್ಯಇಲಾಖೆ ಕಚೇರಿ ಆವರಣದಲ್ಲಿ ಗುರುವಾರ ಧರಣಿ ಸತ್ಯಾಗ್ರಹ ನಡೆಸಿದರು.

ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ಹಾಗೂ ಸಮಾನ ಮನಸ್ಕರ ಸಹಭಾಗಿತ್ವದಲ್ಲಿ ಕಾಡಾನೆಗಳ ದಾಳಿಯಿಂದ ಬಾಧಿತರಾದ ರೈತರು ಧರಣಿ ಸತ್ಯಾಗ್ರಹ ನಡೆಸಿ ಕಾಡಾನೆಗಳನ್ನು ಹಿಮ್ಮಟ್ಟಿಸುವುದು, ವೈಜ್ಞಾನಿಕ ಬೆಳೆ ಪರಿಹಾರ ವಿತರಿಸುವುದು ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಕಳೆದ 13 ವರ್ಷಗಳಿಂದ ದಾಳಿ ಇಡುತ್ತಿರುವ ಆನೆಗಳ ಪರಿಣಾಮ ರೈತರ ಒಂದು ಸಾವಿರ ಕೋಟಿಗೂ ಹೆಚ್ಚು ಕಿಮ್ಮತ್ತಿನ ಬೆಳೆ ಬದುಕು ಶಾಶ್ತತವಾಗಿ ನಾಶವಾಗಿದೆ. ಬೆಳೆ ಹಾನಿಯ ಶೇಕಡ 10 ಪ್ರಮಾಣದ ನಷ್ಟವನ್ನು ರೈತರಿಗೆ ನೀಡದಿರುವುದು ಅರಣ್ಯ ಇಲಾಖೆಯ ರೈತ ವಿರೋಧಿ ಧೋರಣೆಯನ್ನು ತೋರಿಸುತ್ತದೆ. ಬೆಳೆ ಹಾನಿ ಪರಿಹಾರ ಎಂಬುದು ಕೇವಲ ಕಣ್ಣು ಒರೆಸುವ ತಂತ್ರವಾಗಿದೆ. ವೈಜ್ಞಾನಿಕ ಬೆಳೆ ಪರಿಹಾರ ಲೆಕ್ಕ ಹಾಕುವಲ್ಲಿ ಅರಣ್ಯ ನೀತಿ ಅಡ್ಡ ನಿಂತಿದೆ. ಒಂದು ಕ್ವಿಂಟಾಲ್ ರಾಗಿ ಫಸಲು ನಷ್ಟವಾದರೆ ಕೇವಲ 2400 ರು.ಗಳನ್ನು ನೀಡುತ್ತಿರುವುದು ರೈತರಿಗೆ ಮಾಡುತ್ತಿರುವ ಅಪಮಾನ. ಅಲ್ಲದೆ, ಕವಡೆ ಕಾಸಿನ ಪರಿಹಾರಕ್ಕೆ ವರ್ಷಾನುಗಟ್ಟಲೆ ಕಾಯಬೇಕಾದ ಪರಿಸ್ಥಿತಿಯಿದೆ ಎಂದು ಟೀಕಿಸಿದರು.ನಾಲ್ಕಾರು ದಶಕಗಳಿಂದ ಬೆಳೆಸಲಾಗಿದ್ದ ಮಾವು, ತೆಂಗು, ಹಲಸು ಮುಂತಾದ ಧೀರ್ಘಾವಧಿ ಬೆಳೆಗಳು ಹಾಗೂ ಅಲ್ಪಾವಧಿ ಹಣ್ಣು , ತರಕಾರಿ ಬೆಳೆಗಳು ಜಿಲ್ಲಾದ್ಯಂತ 6 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಭೂ ಪ್ರದೇಶದಲ್ಲಿ ಆನೆಗಳ ಆಹಾರವಾಗಿದೆ. ಸಹಸ್ರಾರು ಸಂಖ್ಯೆಯಲ್ಲಿ ಫಲ ಭರಿತ ಮಾವು, ತೆಂಗಿನ ಮರಗಳು, ಗೊನೆ ಬಂದ ಬಾಳೆ ಗಿಡಗಳನ್ನು ಬುಡ ಸಮೇತ ಉರುಳಿಸಿವೆ. ರೈತರ ಮನಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸದ ಅರಣ್ಯ ಇಲಾಖೆ ತನ್ನ ಅವಿವೇಕವನ್ನೇ ಮುಂದುವರೆಸುತ್ತಿದೆ ಎಂದು ಕಿಡಿಕಾರಿದರು.

ಜಿಲ್ಲೆಯ ಮೂರು ನಾಲ್ಕು ಕಡೆ ಅಳವಡಿಸಿರುವ ಸೋಲಾರ್ ತಂತಿ ಬೇಲಿಯನ್ನು ಲೆಕ್ಕಿಸದೆ ದಾಂಗುಡಿ ಇಡುತ್ತಿರುವ ಆನೆಗಳಿಗೆ ಲೆಕ್ಕ ಇಲ್ಲದಂತಾಗಿದೆ. ಆನೆಗಳ ಸಂತತಿ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದೆ. ಮುತ್ತತ್ತಿ - ಬನ್ನೇರುಘಟ್ಟ, ಮಲೆ ಮಹದೇಶ್ವರ ಬೆಟ್ಟದಿಂದ ದಾಳಿಯಿಟ್ಟು ನಾಲ್ಕಾರು ತಾಲೂಕುಗಳಲ್ಲಿ ಸುತ್ತುತ್ತಿವೆ. ಹೀಗಾಗಿ ಅನೇಕ ಭಾಗಗಳಲ್ಲಿ ಬೆಳೆ ಬೆಳೆಯಲಾಗದೆ ಭೂಮಿಯನ್ನು ತೆಕ್ಕಲು ಬಿಟ್ಟಿದ್ದಾರೆ. ಇಷ್ಟೇ ಅಲ್ಲದೆ, ಚಿರತೆಗಳು ಹಸು, ಕುರಿ, ಮೇಕೆಗಳ ರಕ್ತದ ರುಚಿ ಉಂಡಿದ್ದು, ನಿರಂತರ ಜಾನುವಾರುಗಳನ್ನು ಬೇಟೆಯಾಡುತ್ತಿವೆ. ಕಾಡು ಹಂದಿಗಳು ಎಲ್ಲಾ ಬೆಳೆಗಳನ್ನು ಮುಕ್ಕುತ್ತಿವೆ. ಕರಡಿಗಳ ಹಾವಳಿ, ನವಿಲುಗಳ ದಾಂಗುಡಿ, ಜಿಂಕೆಗಳ ಉಪಟಳ ಹೇಳತೀರಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಬೇಡಿಕೆಗಳನ್ನು ಹಂತ ಹಂತವಾಗಿ ಮೂರರಿಂದ ನಾಲ್ಕು ತಿಂಗಳಲ್ಲಿ ಬಗೆಹರಿಸುವುದಾಗಿ ಪಿಸಿ ಸಿಎಫ್ , ಸಿಸಿಎಫ್, ಡಿಸಿಎಫ್, ವನ್ಯಜೀವಿ ಕಾವೇರಿ ಮತ್ತು ಬನ್ನೇರುಘಟ್ಟ ವನ್ಯಧಾಮಗಳ ಅಧಿಕಾರಿಗಳ ಭರವಸೆ ನೀಡಿದ್ದರು. ಆದರೆ, ಯಾವ ಒತ್ತಾಯಗಳು ಈಡೇರಿಲ್ಲ. ಕಾಡಾನೆಗಳ ಹಿಂಡುಗಳ ದಾಳಿಯನ್ನು ತಡೆಗಟ್ಟಿ ರೈತರ ಬೆಳೆ ಬದುಕನ್ನು ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಧರಣಿನಿರತರು ದೂರಿದರು.

ಸ್ಥಳಕ್ಕಾಗಮಿಸಿದ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು, ಜಿಲ್ಲೆಯಲ್ಲಿ 39 ಕಾಡಾನೆಗಳು ಬೀಡು ಬಿಟ್ಟಿತ್ತು. ಅದರಲ್ಲಿ 20 ಆನೆಗಳನ್ನು ಅದರ ವಾಸ ಸ್ಥಾನಕ್ಕೆ ಹಿಮ್ಮಟ್ಟಲಾಗಿದ್ದು, ಉಳಿದ 9 ಆನೆಗಳು ಚದುರಿ ಹೋಗಿವೆ. ಶೀಘ್ರದಲ್ಲಿಯೇ ಆ ಕಾಡಾನೆಗಳನ್ನು ಹಿಮ್ಮಟ್ಟಿಸಲು ಕ್ರಮ ವಹಿಸಲಾಗುವುದು.

ಕಾಡಂಚಿನಲ್ಲಿ ರೇಲ್ವೆ ಬ್ಯಾರಿಕೇಟ್ ಹಾಗೂ ಸೋಲಾರ್ ತಂತಿ ಅಳವಡಿಸಿ ವನ್ಯಜೀವಿಗಳ ದಾಳಿಯನ್ನು ತಡೆ ಹಿಡಿಯಲಾಗುವುದು. ಇದಕ್ಕೆ ನಾಲ್ಕೈದು ತಿಂಗಳು ಬೇಕಾಗಿದ್ದು, ರೈತರು ಸಹಕಾರ ನೀಡುವಂತೆ ಮನವಿ ಮಾಡಿದರು. ಅಧಿಕಾರಿಗಳ ಮಾತನ್ನು ಒಪ್ಪದ ರೈತರು ಧರಣಿ ಮುಂದುವರೆಸಿದರು.

ಧರಣಿಯಲ್ಲಿ ರೈತಸಂಘ ಮತ್ತು ಹಸಿರು ಸೇನೆ ಮುಖಂಡರಾದ ಸಿ.ಪುಟ್ಟಸ್ವಾಮಿ, ನದೀಮ್ ಪಾಷಾ, ಚಿಕ್ಕಪುಟ್ಟೇಗೌಡ, ರುದ್ರಪ್ಪ, ರಾಜೇಶ್, ಸುಜೇಂದ್ರ ಕುಮಾರ್, ಕುಳ್ಳಪ್ಪ, ನಂದೀಶ್, ಹೊಂಬಾಳೇಗೌಡ, ಕುಮಾರಸ್ವಾಮಿ, ರವೀಂದ್ರ, ರಾಮಕೃಷ್ಣ, ನಂದಿ, ಪುಟ್ಟರಾಜು, ರಾಮಲಿಂಗೇಗೌಡ, ರಂಗಸ್ವಾಮಿ, ಧನಂಜಯ್ಯ, ಮಲ್ಲಿಕಾರ್ಜುನಗೌಡ, ವೆಂಕಟೇಶ್, ತೇಜಸ್ವಿನಿ, ಜಯಮ್ಮ ಮತ್ತಿತರರು ಭಾಗವಹಿಸಿದ್ದರು.

27ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಅರಣ್ಯ ಇಲಾಖೆ ಕಚೇರಿ ಎದುರು ರೈತರು ಧರಣಿ ಸತ್ಯಾಗ್ರಹ ನಡೆಸಿದರು.