ಗುಂಡ್ಲುಪೇಟೆಯಲ್ಲಿ ಕ್ರಷರ್‌ ಅನುಮತಿ ಖಂಡಿಸಿ ರೈತರ ಅಹೋರಾತ್ರಿ ಧರಣಿ

| Published : Nov 11 2024, 01:16 AM IST

ಗುಂಡ್ಲುಪೇಟೆಯಲ್ಲಿ ಕ್ರಷರ್‌ ಅನುಮತಿ ಖಂಡಿಸಿ ರೈತರ ಅಹೋರಾತ್ರಿ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಅಗತಗೌಡನಹಳ್ಳಿ ಗ್ರಾಮದ ಬಳಿ ಫಲವತ್ತಾದ ಭೂಮಿ ಮಧ್ಯೆ ಕ್ರಷರ್‌ ಹಾಗೂ ಎಂ.ಸ್ಯಾಂಡ್‌ ಘಟಕ ವಿರೋಧಿಸಿ ಸಾಮೂಹಿಕವಾಗಿ ರೈತಸಂಘದ ಕಾರ್ಯಕರ್ತರು ಅಹೋರಾತ್ರಿ ಪ್ರತಿಭಟನೆ ಆರಂಭಿಸಿದರು.

ಜಿಲ್ಲಾಡಳಿತ ವಿರುದ್ಧ ಹೋರಾಟ । ಸ್ಥಳ ಪರಿಶೀಲನೆ ನಡೆಸದೆ ಕ್ರಷರ್‌ಗೆ ಅನುಮತಿ ಆರೋಪ। ಆದೇಶ ರದ್ದಾಗುವ ತನಕ ಪ್ರತಿಭಟನೆ ಎಚ್ಚರಿಕೆ ನೀಡಿದ ರೈತಸಂಘ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಅಗತಗೌಡನಹಳ್ಳಿ ಗ್ರಾಮದ ಬಳಿ ಫಲವತ್ತಾದ ಭೂಮಿ ಮಧ್ಯೆ ಕ್ರಷರ್‌ ಹಾಗೂ ಎಂ.ಸ್ಯಾಂಡ್‌ ಘಟಕ ವಿರೋಧಿಸಿ ಸಾಮೂಹಿಕವಾಗಿ ರೈತಸಂಘದ ಕಾರ್ಯಕರ್ತರು ಅಹೋರಾತ್ರಿ ಪ್ರತಿಭಟನೆ ಆರಂಭಿಸಿದರು.

ತಾಲೂಕಿನ ಅಗತಗೌಡನಹಳ್ಳಿ ಗ್ರಾಮದ ಮಧುಸೂದನ್‌ಗೆ ಸೇರಿದ ಕ್ರಷರ್‌ ಜಾಗದ ಬಳಿಕ ಧರಣಿ ಆರಂಭಿಸಿದ ರೈತಸಂಘದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಜಿಲ್ಲಾಡಳಿತದ ವಿರುದ್ಧ ದಿಕ್ಕಾರ ಕೂಗಿದರು.

ರೈತಸಂಘದ ಮುಖಂಡ ವೀರನಪುರ ನಾಗಪ್ಪ ಮಾತನಾಡಿ, ಕ್ರಷರ್‌ ಘಟಕ ಅಭಿವೃದ್ಧಿಯ ಒಂದು ಭಾಗ ನಿಜ. ಆದರೆ ಫಲವತ್ತಾದ ಕೃಷಿ ಭೂಮಿಯ ನಡುವೆ ಕ್ರಷರ್‌ ಆರಂಭಕ್ಕೆ ಅನುಮತಿ ನೀಡಿದ್ದೇ ಅಕ್ರಮವಾಗಿದೆ ಎಂದು ಆರೋಪಿಸಿದರು.

ಕ್ರಷರ್‌ ಆರಂಭಕ್ಕೆ ವಿವಿಧ ಇಲಾಖೆಗಳ ಮುಖ್ಯಸ್ಥರು ಸ್ಥಳ ಪರಿಶೀಲನೆ ನಡೆಸಿಲ್ಲ. ರೈತರ ಗಮನಕ್ಕೂ ತಂದಿಲ್ಲ. ರೈತರು ಭೂಮಿ ನಂಬಿ ಜೀವನ ಸಾಗಿಸುವ ಕೃಷಿ ಜಮೀನಿನ ಮಧ್ಯೆ ಕ್ರಷರ್‌ ಆರಂಭಿಸಿದರೆ ಧೂಳಿನಿಂದ ಬೆಳೆ, ಜನ, ಜಾನುವಾರುಗಳಿಗೆ ತೊಂದರೆ ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಕ್ರಷರ್‌ ಸಮೀಪ ಪ್ರೌಢ ಶಾಲೆ,ಹಾಸ್ಟೆಲ್‌ ಇವೆ. ಜತೆಗೆ ಕ್ರಷರ್‌ ಸುತ್ತಲೂ ಫಲವತ್ತಾದ ಕೃಷಿ ಭೂಮಿ ಇದೆ. ಆದರೂ ಕ್ರಷರ್‌ ಆರಂಭಕ್ಕೆ ಅನುಮತಿ ನೀಡಿದ್ದಾರೆ. ಇದು ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ಎಂದು ದೂರಿದರು.

ಪರಿಸರ ಉಳಿಸಬೇಕು ಹಾಗೂ ರೈತರು ಇದ್ದಷ್ಟು ಜಮೀನಿನಲ್ಲಿ ಕೃಷಿ ನಡೆಸಬೇಕು. ಸ್ಥಳ ಪರಿಶೀಲನೆ ನಡೆಸದೆ ಕ್ರಷರ್‌ ಅನುಮತಿ ನೀಡಿದ್ದಾರೆ. ಕೂಡಲೇ ಪರಿಸರ ಮಾಲಿನ್ಯ ಇಲಾಖೆ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.

ಕ್ರಷರ್‌ ಹಾಗೂ ಎಂ.ಸ್ಯಾಂಡ್‌ ಘಟಕಕ್ಕೆ ನೀಡಿರುವ ಅನುಮತಿಯನ್ನು ಜಿಲ್ಲಾಧಿಕಾರಿಗಳು ಟಾಸ್ಕ್‌ ಪೋಸ್ಟ್‌ ಸಮಿತಿಯಲ್ಲಿ ರದ್ದು ಪಡಿಸಬೇಕು. ಇಲ್ಲದಿದ್ದರೆ ಅನುಮತಿ ರದ್ದಾಗುವ ತನಕ ಪ್ರತಿಭಟನೆ ನಿರಂತರವಾಗಿ ನಡೆಯಲಿದೆ ಎಂದು ಎಚ್ಚರಿಸಿದರು.

ಗ್ರಾಪಂ ಸದಸ್ಯ ರಾಜೇಶ್‌ ಮಾತನಾಡಿ, ಕ್ರಷರ್‌ ಆರಂಭಿಸುತ್ತಾರೆಂಬ ಮಾಹಿತಿ ತಿಳಿದು ೨೦೨೧ರಲ್ಲೇ ರೈತರು ತಹಸೀಲ್ದಾರ್‌ಗೆ ದೂರು ಸಲ್ಲಿಸಿದ್ದರು. ಆದರೂ ಕ್ರಷರ್‌ ಘಟಕದ ಸುತ್ತಲಿನ ರೈತರಿಗೆ ಮಾಹಿತಿ ನೀಡಿದೆ ಅನುಮತಿ ನೀಡಿರುವುದು ಖಂಡನೀಯ ಎಂದರು.

ದಬ್ಬಾಳಿಕೆ ಆದ್ರೆ ಪೊಲೀಸರೇ ಹೊಣೆ

ಪ್ರತಿಭಟನೆ ವೇಳೆ ರೈತ ಸಂಘದ ನಾಗಪ್ಪ ಮಾತನಾಡಿ, ಕ್ರಷರ್‌ ವಿರೋಧಿಸಿ ರೈತರು ನಡೆಸುವ ಪ್ರತಿಭಟನೆಯಲ್ಲಿ ರೈತರ ಮೇಲೆ ಕ್ರಷರ್‌ ಮಾಲೀಕರು ದಬ್ಬಾಳಿಕೆ, ಗೂಂಡಾಗಿರಿ ಮಾಡಿಸಲು ಪ್ರಯತ್ನಿಸಿದ್ದಾರೆ. ಒಂದು ವೇಳೆ ಅನಾಹುತ ಸಂಭವಿಸಿದರೆ ಪೊಲೀಸರೇ ಹೊಣೆ ಎಂದು ಗುಡುಗಿದರು.

ಗ್ರಾಪಂ ಸದಸ್ಯ ರಾಜೇಶ್‌, ರೈತಸಂಘದ ಮುಖಂಡರಾದ ಜಗದೀಶ್‌, ರಾಘವಾಪುರ ಮಹೇಶ್‌, ಪಡಗೂರು ಮಹದೇವಸ್ವಾಮಿ, ನಾಗೇಂದ್ರ, ಪುಟ್ಟೇಗೌಡ, ಗೌರೀಶ್‌, ಪ್ರಸಾದ್‌ಕಮರಹಳ್ಳಿ, ಗುರುಸ್ವಾಮಿ, ಗ್ರಾಮಸ್ಥರಾದ ಉಮೇಶ್‌, ಸ್ವಾಮಿ, ಸಿದ್ದರಾಜು, ಮಂಜುನಾಥ್‌, ನಂಜುಂಡಯ್ಯ, ನಾಗೇಶ್‌, ಮಹೇಶ್‌, ಶಿವಪ್ಪ, ಸಂತೋಷ್, ರಾಜಪ್ಪ, ಮೂರ್ತಿ, ಸಾಗರ್‌, ಮೋಹನ್‌ ದಾಸ್‌, ಪುನೀತ್‌, ಮಾದಪ್ಪ ಇದ್ದರು.