ಸಾರಾಂಶ
ಕಡೂರಿನ ಎಪಿಎಂಸಿ ಆವರಣದಲ್ಲಿರುವ ಕೊಬ್ಬರಿ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಸಲು ಸರತಿ ಸಾಲಿನಲ್ಲಿ ರಾತ್ರಿಯಿಡೀ ರೈತರು ಕಾದು ಕುಳಿತು, ಕ್ಯೂ ನಿಂತಲೇ ಜಾಗವಿರಿಸಿ ನಿದ್ದೆ ಮಾಡಿದರು.
ಕನ್ನಡಪ್ರಭ ವಾರ್ತೆ ಕಡೂರು
ಕೊಬ್ಬರಿ ಮಾರಾಟಕ್ಕೆ ನೋಂದಣಿ ಮಾಡಿಸಲು ಬಂದ ರೈತರು ಕ್ಯೂನಲ್ಲಿ ನಿಂತರು, ರಾತ್ರಿ ಅದೇ ಜಾಗದಲ್ಲಿ ಮಲಗಿದರು. ಬೆಳಗಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ಮತ್ತಷ್ಟು ಸಂಖ್ಯೆಯಲ್ಲಿ ರೈತರು ಬಂದಿದ್ದರಿಂದ ಖರೀದಿ ಕೇಂದ್ರದ ಮುಂದೆ ನೂಕು ನುಗ್ಗಲು ಉಂಟಾಯಿತು. ಜನರನ್ನು ಪೊಲೀಸರು ಚದುರಿಸಿದರು.ಈ ಎಲ್ಲಾ ಬೆಳವಣಿಗೆ ಆಗಿದ್ದು ಮಂಗಳವಾರ ಎಪಿಎಂಸಿಯ ಆವರಣದಲ್ಲಿರುವ ಕೊಬ್ಬರಿ ಖರೀದಿ ಕೇಂದ್ರದ ಎದುರು.ಕೊಬ್ಬರಿ ಖರೀದಿಗಾಗಿ ಜಿಲ್ಲೆಯ ತರೀಕೆರೆ, ಕಡೂರು, ಬೀರೂರು, ಅಜ್ಜಂಪುರ ಮತ್ತು ಪಂಚನಹಳ್ಳಿ ಹಾಗೂ ಚಿಕ್ಕಮಗಳೂರಿನಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ. ಸರ್ಕಾರದ ಬೆಂಬಲ ಬೆಲೆಯಡಿ ಕೊಬ್ಬರಿ ಮಾರಾಟ ಮಾಡಲು ಇಚ್ಛಿಸುವ ರೈತರು ಮೊದಲು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನಂತರದಲ್ಲಿ ಖರೀದಿ ಮಾಡಬೇಕು.ನೋಂದಣಿ ಕಾರ್ಯ ಸೋಮವಾರ ಆರಂಭಗೊಂಡಿತು. ಆದರೆ, ಸರ್ವರ್ ಪ್ರಾಬ್ಲಮ್‌ನಿಂದ ನಿರೀಕ್ಷಿತ ಮಟ್ಟದಲ್ಲಿ ನೋಂದಣಿ ಆಗಲಿಲ್ಲ. ಹಾಗಾಗಿ ರೈತರು ಸಂಜೆಯ ನಂತರ ಕ್ಯೂ ನಿಂತಲೇ ಮಲಗಿದರು.ಮಂಗಳವಾರ ಬೆಳಗಾಗುತ್ತಿದ್ದಂತೆ ಹಳ್ಳಿಗಳಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಆರಂಭಿಸಿದ್ದಾಗ ನೋಡು ನೋಡುತ್ತಿದ್ದಂತೆ ರೈತರ ಸಂಖ್ಯೆ ಹೆಚ್ಚಳಾಯಿತು. ಆಗ ರಾತ್ರಿ ಇಡೀ ಸ್ಥಳದಲ್ಲಿಯೇ ಕ್ಯೂನಲ್ಲಿದ್ದ ರೈತರ ಹಾಗೂ ಬೆಳಿಗ್ಗೆ ಬಂದ ರೈತರ ನಡುವೆ ನೂಕಾಟ, ತಳ್ಳಾಟ ನಡೆಯಿತು. ಪರಿಸ್ಥಿತಿ ಬೇರೆ ಸ್ವರೂಪ ಪಡೆಯುತ್ತಿದ್ದಂತೆ ಕಡೂರು ಎಪಿಎಂಸಿ ಅಧಿಕಾರಿಗಳು ಈ ವಿಷಯ ಪೊಲೀಸ್ ಇಲಾಖೆಯ ಗಮನಕ್ಕೆ ತರುತ್ತಿದ್ದಂತೆ ಪಿಎಸ್ಐ ನವೀನ್ ಮತ್ತು ಸಿಬ್ಬಂದಿಗಳ ಸ್ಥಳಕ್ಕೆ ಆಗಮಿಸಿ ರೈತರನ್ನು ನಿಯಂತ್ರಿಸಿ ಸಾಲಿನಲ್ಲಿ ಬರುವಂತಹ ಕ್ರಮ ಕೈಗೊಂಡರು. ನೋಂದಣಿಗೆ ನಾಲ್ಕು ಕೌಂಟರ್ ಮಾಡಿದ್ದರೂ ಕೂಡ ರೈತರ ಸಂಖ್ಯೆ ಇಳಿಮುಖವಾಗಿರಲಿಲ್ಲ. ಸಂಜೆಯ ವರೆಗೆ ಇದೇ ಒತ್ತಡ ಕಂಡು ಬರುತ್ತಿತ್ತು. ಸೋಮವಾರ ಒಂದೇ ದಿನ 2234 ರೈತರು ನೋಂದಣಿ ಮಾಡಿಕೊಂಡಿದ್ದರೆ, ಮಂಗಳವಾರ 2725 ಮಂದಿ ರೈತರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ.ಜಿಪಂ ಮಾಜಿ ಉಪಾಧ್ಯಕ್ಷರಾದ ವಿಜಯಕುಮಾರ್ ಮಾತನಾಡಿ, ಕೊಬ್ಬರಿ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಳ್ಳಲು ಬರುವ ರೈತರಿಗೆ ಮೂಲಭೂತ ಸವಲತ್ತಿನ ವ್ಯವಸ್ಥೆಯನ್ನು ಸರ್ಕಾರ ಮಾಡಿಲ್ಲ. ಕುಡಿಯುವ ನೀರಿಲ್ಲ, ರಾತ್ರಿ ರೈತರು ಸೊಳ್ಳೆಯಿಂದ ಕಚ್ಚಿಸಿಕೊಂಡು ಕಳೆದಿದ್ದಾರೆ. ಮಧ್ಯಾಹ್ನ ಸುಡು ಬಿಸಿಲಿದ್ದು ಶಾಮಿಯಾನದ ವ್ಯವಸ್ಥೆ ಮಾಡಿಲ್ಲ. ರೈತರನ್ನ ಈ ರೀತಿಯಲ್ಲಿ ಸರ್ಕಾರ ನಡೆಸಿಕೊಂಡಿರುವುದು ವಿಪರ್ಯಾಸ ಎಂದರು.ಬಿಸಿಲಿನಲ್ಲಿ ನಿಂತಿರುವ ರೈತರಿಗೆ ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು, ಆದರೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಇದ್ದರಿಂದ ಮತ್ತಷ್ಟು ಶಾಮಿಯಾನವನ್ನು ಹಾಕಲು ಸಿಬ್ಬಂದಿಗೆ ಸೂಚಿಸಲಾಯಿತು. ಕುಡಿಯುವ ನೀರಿನ ವ್ಯವಸ್ಥೆ ಸಹ ಮಾಡಲಾಗಿದೆ. ಓರ್ವ ರೈತ 15 ಕ್ವಿಂಟಲ್ ಕೊಬ್ಬರಿ ನೀಡಬಹುದು.ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೆಂಬಲ ಬೆಲೆ ಸೇರಿ ಕ್ವಿಂಟಲ್‌ಗೆ 13,000 ರು.ಗಳಿಗೆ ಖರೀದಿ ಮಾಡಲಾಗುವುದು ಎಂದು ರಾಜ್ಯ ಸಹಕಾರ ಮಾರಾಟ ಮಂಡಳಿ ವ್ಯವಸ್ಥಾಪಕ ಪ್ರಶಾಂತ್ ಹೇಳಿದರು.