ಮೆಕ್ಕೆಜೋಳ ಬಿತ್ತನೆ ಬೀಜಕ್ಕೆ ಏಕರೂಪದ ದರ ನಿಗದಿ ಮಾಡುವಂತೆ, ರಸಗೊಬ್ಬರ ಪೂರೈಕೆಗೆ ಎಫ್‌ಐಡಿ ಕಡ್ಡಾಯಗೊಳಿಸಿರುವುದನ್ನು ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು, ರೈತರು ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಹಾವೇರಿ: ಮೆಕ್ಕೆಜೋಳ ಬಿತ್ತನೆ ಬೀಜಕ್ಕೆ ಏಕರೂಪದ ದರ ನಿಗದಿ ಮಾಡುವಂತೆ, ರಸಗೊಬ್ಬರ ಪೂರೈಕೆಗೆ ಎಫ್‌ಐಡಿ ಕಡ್ಡಾಯಗೊಳಿಸಿರುವುದನ್ನು ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು, ರೈತರು ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ಹಾವೇರಿ ಗೋಲಿಬಾರ್‌ನಲ್ಲಿ ಮೃತಪಟ್ಟ ರೈತರ ಸ್ಮರಣೆಗಾಗಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬುಧವಾರ ರೈತ ಹುತಾತ್ಮ ದಿನವನ್ನು ರೈತರ ಹೋರಾಟ ದಿನವನ್ನಾಗಿ ಆಚರಿಸುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಕೃಷಿ ಪ್ರಧಾನ ಹಾವೇರಿ ಜಿಲ್ಲೆಯಲ್ಲಿ ಯಾವುದೇ ಕೈಗಾರಿಗಳು ಇಲ್ಲ. ನೂರಕ್ಕೆ ನೂರರಷ್ಟು ರೈತರು ಭೂಮಿ, ನೀರು ನಂಬಿಕೊಂಡು ಒಕ್ಕಲುತನ ಮಾಡುತ್ತಿದ್ದು, ಇವರಿಗೆ ಭದ್ರತೆ ಇಲ್ಲದಾಗಿದೆ. ಅತಿವೃಷ್ಟಿ, ಅನಾವೃಷ್ಟಿಯಿಂದ ರೈತ ಕುಲ ತತ್ತರಿಸಿ ಹೋಗಿದೆ. ರಾಜ್ಯದಲ್ಲಿ ಅತೀ ಹೆಚ್ಚು ಆತ್ಮಹತ್ಯೆ ಮಾಡಿಕೊಂಡ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಜಿಲ್ಲೆಯಲ್ಲಿ ನಾಲ್ಕು ನದಿಗಳು ಇದ್ದರೂ ಸಮರ್ಪಕ ನೀರಾವರಿ ಸೌಲಭ್ಯ ಒದಗಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿದೆ. ಬೀಜ, ಗೊಬ್ಬರ, ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ಬೆಲೆ ಏರಿಕೆಯಿಂದ ರೈತರು ಕಂಗಾಲಾಗಿದ್ದಾರೆ. ಅನ್ನದಾತರ ನೆರವಿಗೆ ಬರಬೇಕಿದ್ದ ಸರ್ಕಾರ ಅಧಿಕಾರ ಹಂಚಿಕೆ ಮಾಡುವಲ್ಲಿ ಮುಳಗಿದೆ ಎಂದು ಕಿಡಿಕಾರಿದರು.ಕಾಂಪ್ಲೆಕ್ಸ್ ಗೊಬ್ಬರಕ್ಕೆ ನಿಗದಿತ ದರಕ್ಕಿಂತ ಹೆಚ್ಚಾಗಿ ಖಾಸಗಿ ಅಂಗಡಿಗಳು ಹಣ ವಸೂಲಿ ಮಾಡುತ್ತಿದ್ದು, ನಿಗದಿತ ದರಕ್ಕೆ ಗೊಬ್ಬರ ಮಾರಾಟ ಮಾಡಬೇಕು. ಡಿಎಪಿ, ಯೂರಿಯಾ ಗೊಬ್ಬರ ನೀಡುವಾಗ ಅನವಶ್ಯಕ ಲಿಂಕ್‌ಗಳನ್ನು ಪಡೆಯುವಂತೆ ಒತ್ತಡ ಹೇರುತ್ತಿದ್ದು, ಅಂತಹ ಅಂಗಡಿಗಳ ಲೈಸೆನ್ಸ್ ರದ್ದುಗೊಳಿಸಬೇಕು. ಅಕ್ರಮ ಲಿಂಕ್ ಪದ್ಧತಿ, ಎಫ್‌ಐಡಿ ಕಡ್ಡಾಯ ಮಾಡಿರುವುದನ್ನು ಕೈಬಿಡಬೇಕು. ಬಿತ್ತನೆ ಮೆಕ್ಕೆಜೋಳಕ್ಕೆ ಕಂಪನಿಗಳು ಮನಬಂದಂತೆ ದರ ನಿಗದಿ ಮಾಡುತ್ತಿದ್ದು, ಏಕರೂಪದ ದರ ನಿಗದಿ ಮಾಡಬೇಕು. ಹುಬ್ಬಳ್ಳಿ ಹೆಸ್ಕಾಂನ್ನು ಟಾಟಾ ಪವರ್‌ನಂತಹ ಕಂಪನಿಗೆ ಒಪ್ಪಿಸಿ ವಿದ್ಯುತ್ ಖಾಸಗೀಕರಣ ಮಾಡುತ್ತಿದ್ದಾರೆ. ಇದರಿಂದ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಬಹಳಷ್ಟು ತೊಂದರೆಯಾಗಲಿದ್ದು, ಈ ಕೂಡಲೇ ಖಾಸಗೀಕರಣ ಮಾಡುವುದನ್ನು ಕೈಬಿಡಬೇಕೆಂದು ಆಗ್ರಹಿಸಿದರು. ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ವರದಾ-ಬೇಡ್ತಿ ನೀರಾವರಿ ಯೋಜನೆ ಅನುಷ್ಠಾನ ಕಾರಣಾಂತರದಿಂದ ಯಾವ ಹಂತದಲ್ಲಿ ನಿಂತಿದೆಯೋ, ಅದನ್ನು ಸರಿಪಡಿಸಿ ಯೋಜನೆ ಅಂಗೀಕಾರ ಮಾಡಬೇಕು. ಸವಣೂರು ತಾಲೂಕಿಗೆ ಬರಬೇಕಾದ 60-80 ಕೋಟಿ ಬೆಳೆ ವಿಮೆ ಹಣ ಬಿಡುಗಡೆಗೊಳಿಸಬೇಕು. ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಆರಂಭಿಸಬೇಕು. ಅರಣ್ಯ ಭೂಮಿ, ಬಗರ್‌ಹುಕುಂ ಸಾಗುವಳಿದಾರರು ಎಫ್‌ಐಡಿ ಸಿಗದ ಕಾರಣ ಬೀಜಗೊಬ್ಬರದಿಂದ ವಂಚಿತರಾಗುತ್ತಿದ್ದಾರೆ. ಹಳೆಯ ಪದ್ಧತಿಯಂತೆ ಪಹಣಿ ನೋಡಿ ಗೊಬ್ಬರ ಬೀಜ ವಿತರಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಎಚ್.ಎಚ್ ಮುಲ್ಲಾ, ಶಿವಬಸಪ್ಪ ಗೋವಿ, ಗಂಗಣ್ಣ ಎಲಿ, ಮಹ್ಮದಗೌಸ ಪಾಟೀಲ, ರುದ್ರಗೌಡ ಕಾಡನಗೌಡ್ರ, ಶಿವಯೋಗಿ ಹೊಸಗೌಡ್ರ, ಮರಿಗೌಡ ಪಾಟೀಲ, ಚನ್ನಪ್ಪ ಮರಡೂರ, ಸುರೇಶ ಚಲವಾದಿ, ರಾಜು ತರ್ಲಘಟ್ಟ, ಮುತ್ತು ಗುಡಗೇರಿ, ಶಂಕರಗೌಡ ಶಿರಗಂಬಿ, ದಿಳ್ಳೆಪ್ಪ ಮಣ್ಣೂರ, ಸುರೇಶ ಹೊನ್ನಪ್ಪನವರ, ಬಸನಗೌಡ ಗಂಗಪ್ಪನವರ, ಗುಡ್ಡನಗೌಡ ಪ್ಯಾಟಿಗೌಡ್ರ, ಪ್ರಭಾಕರ ಪ್ಯಾಟಿ, ಜಾನ್ ಪುನೀತ್, ಸುಭಾಸ್ ಬನ್ನಿಹಟ್ಟಿ, ರುದ್ರಪ್ಪ ಅಣ್ಣಿ, ಮಾಲತೇಶ ಪರಪ್ಪನವರ, ಷಣ್ಮುಖಪ್ಪ ಅಂದಲಗಿ, ಅಬ್ದುಲ್‌ಖಾದರ ಬುಡಂದಿ ಸೇರಿದಂತೆ ರೈತರು ಉಪಸ್ಥಿತರಿದ್ದರು.ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಅಭಾವ ಆಗಿದ್ದರೂ ಕೃಷಿ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಎಫ್‌ಐಡಿ ಮೂಲಕ ಬೀಜ, ಗೊಬ್ಬರ ವಿತರಿಸಿದರೆ, ಹೊಲ ಲಾವಣಿ ಮಾಡಿಕೊಂಡು ಕೃಷಿ ಕೈಗೊಳ್ಳುವ ರೈತರಿಗೆ ಅನ್ಯಾಯವಾಗುತ್ತಿದೆ. ಇಂತಹ ಅವೈಜ್ಞಾನಿಕ ಎಫ್‌ಐಡಿ ಪ್ರಕ್ರಿಯೆ ರದ್ದುಗೊಳಿಸಿ, ಪಹಣಿ ನೋಡಿ ಮುಂಚೆ ವಿತರಿಸುತ್ತಿದ್ದ ಪ್ರಕ್ರಿಯೆಯನ್ನು ಜಾರಿಗೆ ತರಬೇಕು ಎಂದು ರಾಜ್ಯ ಸಮಿತಿ ಸದಸ್ಯ ಮಾಲತೇಶ ಪೂಜಾರ ಹೇಳಿದರು.ರೈತರು ಎದುರಿಸುತ್ತಿರುವ ಸಮಸ್ಯೆಗಳು ನಮ್ಮ ಅರಿವಿನಲ್ಲಿವೆ. ಜಿಲ್ಲಾಡಳಿತ ಹಂತದಲ್ಲಿರುವ ಸಮಸ್ಯೆಗಳನ್ನು ರೈತರ ಜತೆಗೆ ಚರ್ಚಿಸಿ ಬಗೆಹರಿಸುವ ಕೆಲಸ ಮಾಡುತ್ತೇನೆ. ಸರ್ಕಾರದ ಹಂತದಲ್ಲಿರುವ ಸಮಸ್ಯೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.