ತೀವ್ರ ಬರಗಾಲದಿಂದ ರಾಜ್ಯ ತತ್ತರಿಸಿ ಹೋಗುತ್ತಿದೆ. ಕಾವೇರಿ ಕೊಳ್ಳದ ಜಲಾಶಯಗಳು ಇನ್ನೂ ಭರ್ತಿಯಾಗಿಲ್ಲ. ನಮ್ಮ ಬೆಳೆಗಳು ಒಣಗಿ ಹೋಗಿವೆ. ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಹಲವು ನಗರ ಪ್ರದೇಶಗಳಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಲಿದೆ. ಈ ಸಮಯದಲ್ಲಿ ತಮಿಳುನಾಡಿಗೆ ನೀರು ಹರಿಸುವ ನಿರ್ದೇಶನ ಸರಿಯಲ್ಲ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಮಿಳುನಾಡಿಗೆ ಪ್ರತಿನಿತ್ಯ 3,500 ಕ್ಯುಸೆಕ್ ಕಾವೇರಿ ನೀರು ಹರಿಸುವಂತೆ ನಿರ್ದೇಶನ ನೀಡಿರುವ ಕಾವೇರಿ ನೀರು ನಿರ್ವಹಣಾ ಸಮಿತಿ ಹಾಗೂ ಪ್ರಾಧಿಕಾರದ ವಿರುದ್ಧ ರಾಜ್ಯ ರೈತ ಸಂಘ(ಮೂಲ ಸಂಘಟನೆ)ಯ ಕಾರ್ಯಕರ್ತರು ಪಟ್ಟಣದಲ್ಲಿ ಶನಿವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.ತಾಲೂಕಿನ ಟಿ.ಕಾಗೇಪುರ ಬಳಿ ರಾಜ್ಯ ಹೆದ್ದಾರಿ ತಡೆದ ಕಾರ್ಯಕರ್ತರು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡಬಾರದು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ರಾಮಲಿಂಗೇಗೌಡ ಮಾತನಾಡಿ, ತೀವ್ರ ಬರಗಾಲದಿಂದ ರಾಜ್ಯ ತತ್ತರಿಸಿ ಹೋಗುತ್ತಿದೆ. ಕಾವೇರಿ ಕೊಳ್ಳದ ಜಲಾಶಯಗಳು ಇನ್ನೂ ಭರ್ತಿಯಾಗಿಲ್ಲ. ನಮ್ಮ ಬೆಳೆಗಳು ಒಣಗಿ ಹೋಗಿವೆ. ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಹಲವು ನಗರ ಪ್ರದೇಶಗಳಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಲಿದೆ. ಈ ಸಮಯದಲ್ಲಿ ತಮಿಳುನಾಡಿಗೆ ನೀರು ಹರಿಸುವ ನಿರ್ದೇಶನ ಸರಿಯಲ್ಲ ಎಂದು ಕಿಡಿಕಾರಿದರು.ರಾಜ್ಯ ಸರ್ಕಾರ ನೀರು ಹರಿಸಲು ಮುಂದಾದರೆ ನಮ್ಮ ಹೋರಾಟದ ಸ್ವರೂಪವೇ ಬದಲಾಗಲಿದೆ. ಭಾನುವಾರದ ಸರ್ವಪಕ್ಷ ಸಭೆಯಲ್ಲಿ ನೀರು ಹರಿಸದಂತೆ ಕೇಂದ್ರದ ಮೇಲೆ ಒತ್ತಡ ಹೇರುವ ನಿರ್ಣಯ ಕೈಕೊಳ್ಳಬೇಕು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರೈತರ ಹಿತಕಾಯದಿದ್ದರೆ ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಮುಖಂಡ ಸೊ.ಸಿ.ಪ್ರಕಾಶ್ ಮಾತನಾಡಿ, ಕೆಆರ್ ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಲ್ಲಿ ಒಟ್ಟು 36 ಟಿಎಂಸಿ ನೀರಿದೆ. ಆದರೆ, ಅದನ್ನು ಗಮನಿಸದ ಪ್ರಾಧಿಕಾರ ಏಕಪಕ್ಷೀಯವಾಗಿ ತಮಿಳುನಾಡಿಗೆ ನೀರು ಹರಿಸಿ ಎನ್ನುವುದು ಸರಿಯಲ್ಲ, ಬಂಗಾರಪ್ಪ ಅವರಂತೆ ಡಿ.ಕೆ.ಶಿವಕುಮಾರ್ ಸಹ ಕಠಿಣ ನಿಲುವು ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು.ತಾಲೂಕು ಅಧ್ಯಕ್ಷ ದೇವಿಪುರ ಬಸವರಾಜು ಮಾತನಾಡಿ, ಇದು ಸಾಂಕೇತಿಕ ಹೋರಾಟವಾಗಿದೆ. ಏನಾದರೂ ತಮಿಳುನಾಡಿಗೆ ನೀರು ಬಿಟ್ಟರೆ ರೈತರ ಶಕ್ತಿ ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಗ್ರಾಮಾಂತರ ಸಿಪಿಐ ಬಸವರಾಜು ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿತ್ತು.
ಪ್ರತಿಭಟನೆಯಲ್ಲಿ ಮುಖಂಡರಾದ ಪ್ರಭುಲಿಂಗು, ಶಿವನಂಜು, ಭೂಮಿಗೌಡ, ಚೌಡೇಗೌಡ, ಮಲ್ಲೇಶ್, ಗಿರೀಶ್, ಹನುಮಂತ, ಕೃಷ್ಣ, ಲಿಂಗಪಟ್ಟಣ ಬಸವರಾಜು, ಮಹೇಶ್ ಪಾಲ್ಗೊಂಡಿದ್ದರು.