ತಾಲೂಕಿನ ಮಲಪ್ರಭಾ ಜಲಾಶಯ ಕಾಲುವೆಗಳಿಗೆ ಹೊಂದಿಕೊಂಡಿರುವ ಜಮೀನುಗಳಲ್ಲಿ ರೈತರು ಹೆಚ್ಚು ಬಿಳಿಜೋಳ ಬಿತ್ತನೆ ಮಾಡುವುದಿಲ್ಲ. ಹೀಗಾಗಿ ಖುಷ್ಕಿ ಜಮೀನುಗಳಲ್ಲಿ ಬಿತ್ತನೆ ಮಾಡಿದ ಅಲ್ಪಸ್ವಲ್ಪ ಬಿಳಿಜೋಳ ಮೇವಿಗೆ ಬಹಳ ಬೇಡಿಕೆ ಬಂದಿದೆ.
ನರಗುಂದ: ತಾಲೂಕಿನ ಹಲವು ರೈತರು ಸಾಕಿದ ಜಾನುವಾರುಗಳಿಗೆ ಮೇವಿನ ಕೊರತೆ ಎದುರಿಸುತ್ತಿದ್ದು, ಹೀಗಾಗಿ ಎಲ್ಲೆಲ್ಲೆ ಮೇವು ಸಿಗುತ್ತದೆಯೋ ಅಲ್ಲಿ ಮೇವು ಖರೀದಿಸತೊಡಗಿದ್ದಾರೆ.
ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ವಿಪರೀತ ಮಳೆ ಸುರಿದಿದ್ದರಿಂದ ಗೋವಿನ ಜೋಳ, ಜೋಳದ ಬೆಳೆ ಸಂಪೂರ್ಣ ಹಾನಿಯಾಯಿತು. ಇದರಿಂದ ಬೇಡಿಕೆಗೆ ತಕ್ಕಷ್ಟು ಮೇವು ಸಿಗುತ್ತಿಲ್ಲ. ಹೀಗಾಗಿ ರೈತರು ಹಿಂಗಾರು ಹಂಗಾಮಿನಲ್ಲಿ ಬೆಳೆದ ಬಿಳಿಜೋಳ, ಗೋವಿನ ಜೋಳದ ಮೇವು, ಗೋದಿ ಹೊಟ್ಟನ್ನು ಅಲ್ಲಲ್ಲಿ ಖರೀದಿಸಿ ಸಂಗ್ರಹಿಸುತ್ತಿದ್ದಾರೆ.ತಾಲೂಕಿನ ಮಲಪ್ರಭಾ ಜಲಾಶಯ ಕಾಲುವೆಗಳಿಗೆ ಹೊಂದಿಕೊಂಡಿರುವ ಜಮೀನುಗಳಲ್ಲಿ ರೈತರು ಹೆಚ್ಚು ಬಿಳಿಜೋಳ ಬಿತ್ತನೆ ಮಾಡುವುದಿಲ್ಲ. ಹೀಗಾಗಿ ಖುಷ್ಕಿ ಜಮೀನುಗಳಲ್ಲಿ ಬಿತ್ತನೆ ಮಾಡಿದ ಅಲ್ಪಸ್ವಲ್ಪ ಬಿಳಿಜೋಳ ಮೇವಿಗೆ ಬಹಳ ಬೇಡಿಕೆ ಬಂದಿದೆ.
ಜಾನುವಾರುಗಳ ವಿವರ: ತಾಲೂಕಿನಲ್ಲಿ 2021ರ ಜಾನುವಾರುಗಳ ಗಣತಿ ಪ್ರಕಾರ 12756 ಜಾನುವಾರುಗಳಿವೆ. ಈ ಪೈಕಿ ಎಮ್ಮೆಗಳ ಸಂಖ್ಯೆ 5283 ರಷ್ಟಿದೆ. ಇವುಗಳಿಗೆ ಪ್ರತಿ ವಾರಕ್ಕೆ ಅಂದಾಜು 992 ಮೆಟ್ರಿಕ್ ಟನ್ ಮೇವು ಬೇಕು. ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಮೇವು 43387 ಮೆಟ್ರಿಕ್ ಟನ್ ಸಂಗ್ರಹವಿದೆ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ತಿಳಿಸಿದರು.ಈ ಮೊದಲು ಜಮೀನುಗಳನ್ನು ಉಳುಮೆ ಮಾಡಲು ಎತ್ತು ಸಾಕಾಣಿಕೆ ಮಾಡುವ ಸಮಯದಲ್ಲಿ ಮೇವು ಬಹಳಷ್ಟು ಸಂಗ್ರಹ ಮಾಡಿಕೊಳ್ಳಬೇಕಾಗುತಿತ್ತು. ಆದರೆ ಈಗ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುತ್ತಿದ್ದೇವೆ. ಇದರಿಂದ ಮೇವು ಸಂಗ್ರಹಿಸುವುದನ್ನು ಕಡಿಮೆ ಮಾಡಿದ್ದೇವೆ ಎಂದು ರೈತ ಚಳಪ್ಪ ನಾಯ್ಕರ ತಿಳಿಸಿದರು.
ಈ ವರ್ಷ ಜಾನುವಾರುಗಳಿಗೆ ಬೇಕಾಗುವ ಮೇವನ್ನು ರೈತರು ಸಂಗ್ರಹ ಮಾಡಿಕೊಳ್ಳುತ್ತಿದ್ದಾರೆ. ತಾಲೂಕಿನಲ್ಲಿರುವ ಜಾನುವಾರುಗಳಿಗೆ ಆಗುವಷ್ಟು ಮೇವಿನ ಸಂಗ್ರಹವಿದೆ. ಮುಂದಿನ 2 ತಿಂಗಳ ಕಳೆದರೆ ಮುಂಗಾರು ಮಳೆ ಪ್ರಾರಂಭಗೊಂಡ ನಂತರ ಜಮೀನಿನ ಬದುಗಳಲ್ಲಿ ಹುಲ್ಲು ಬೆಳೆಯುವುದರಿಂದ ಮೇವಿನ ಕೊರತೆ ಆಗುವುದಿಲ್ಲವೆಂದು ಪಶು ಸಂಗೋಪನಾ ಇಲಾಖೆಯ ಅಧಿಕಾರಿ ಡಾ. ಸಂತೋಷ ಕರೆಭರಮಣ್ಣವರ ತಿಳಿಸಿದರು.