ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಸಿದ್ದರಾಮಯ್ಯ ಸರ್ಕಾರ ಬಡವರಿಗೆ ಉಚಿತವಾಗಿ ಅಕ್ಕಿ ಕೊಡಲು, ಕೇಂದ್ರ ಸರ್ಕಾರ 29 ರು.ನಂತೆ ಅಕ್ಕಿ ಕೊಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಯಾವುದೇ ಯೋಜನೆ ಘೋಷಣೆಗೂ ಮುನ್ನ ರೈತರೊಂದಿಗೆ ಎರಡೂ ಸರ್ಕಾರ ಚರ್ಚಿಸಿ, ಬೆಳೆದ ಬೆಳೆಗಳಿಗೆ ಅನುಕೂಲವೇ, ಅನಾನುಕೂಲವೇ ಎಂಬುದನ್ನರಿತು ಘೋಷಣೆಗಳ ಮಾಡಲಿ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಒತ್ತಾಯಿಸಿದ್ದಾರೆ.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೇಂದ್ರವು 29 ರು.ಗೆ ಅಕ್ಕಿ ನೀಡುವ ಯೋಜನೆ ಜಾರಿಗೊಳಿಸಿದ್ದು, ರೈತ ಬೆಳೆದ ಭತ್ತಕ್ಕೆ 2180 ರು. ಬೆಂಬಲ ಬೆಲೆ ಘೋಷಿಸಿದೆ. ಈ ಬೆಂಬಲ ಬೆಲೆಗೆ ಕನಿಷ್ಠ ಬೆಂಬಲ ಬೆಲೆ ಜಾರಿಗೊಳಿಸಿದರೆ ಮಾತ್ರ ರೈತನ ಬದುಕು ಬದುಕಾಗಿ ಉಳಿಯುವುದಕ್ಕೆ ಅವಕಾಶ ಇದೆ ಎಂದರು.
ಕನಿಷ್ಟ ಬೆಂಬಲ ಬೆಲೆಗೆ ಕಾಯ್ದೆ ಮಾಡದೇ ಕೇಂದ್ರ ಸರ್ಕಾರ 29 ರು.ಗೆ ಅಕ್ಕಿ, ರಾಜ್ಯ ಸರ್ಕಾರ ಉಚಿತ ಅಕ್ಕಿ ಘೋಷಣೆ ಮಾಡಿದರೆ, ರೈತ ಯಾವ ದರಕ್ಕೆ ಭತ್ತ ಮಾರಬೇಕು? ಖರೀದಿದಾರರು ಯಾವ ದರಕ್ಕೆ ಖರೀದಿಸಬೇಕೆಂಬುದೇ ಗೊತ್ತಾಗದೇ, ಮಾರುಕಟ್ಟೆಯಲ್ಲಿ ಭತ್ತ ಖರೀದಿದಾರರೇ ಇಲ್ಲದಂತಾಗಿದೆ. ಕಳೆದ ಮುಂಗಾರಿಗೆ ಬೆಳೆದ ಭತ್ತವನ್ನು ಈಗಾಗಲೇ ರೈತರು ಖರೀದಿದಾರರಿಗೆ ಮಾರಾಟ ಮಾಡಿದ್ದು, ಖರೀದಿದಾರರಿಂದ ರೈತರಿಗೆ ಹಣ ಪಾವತಿಯಾಗಿರುವುದಿಲ್ಲ. ಹಣ ಕೇಳಿದರೆ, ಖರೀದಿದಾರರು ನಿಮ್ಮ ಭತ್ತ ಗೋದಾಮಿನಲ್ಲಿ ಇದೆ. ವಾಪಸ್ ಒಯ್ಯಿರಿ ಎಂಬುದಾಗಿ, ಖರೀದಿಸಿದ ಭತ್ತದ ಹಣ ಇಲ್ಲವೆಂದು ವಾಪಾಸ್ಸು ಕಳಿಸುತ್ತಿದ್ದಾರೆ ಎಂದು ದೂರಿದರು.ಕೇಂದ್ರಕ್ಕಿಂದ ಹೆಚ್ಚು ದರದಲ್ಲಿ 3200ರಿಂದ 3300 ರು.ವರೆಗೆ ಭತ್ತ ಖರೀದಿಸಿ, ಈಗ ಖರೀದಿದಾರರೂ ಸಾಲದಲ್ಲಿ ಮುಳುಗಿದ್ದಾರೆ. ಕೇಂದ್ರ ಸರ್ಕಾರ 29 ರು.ಗೆ ಅಕ್ಕಿ ಮಾರುತ್ತಿರುವುದೇ ಇದಕ್ಕೆ ಕಾರಣ. ರೈತರು 1 ಎಕರೆ ಭತ್ತ ಬೆಳೆಯಲು 35 ಸಾವಿರದಿಂದ 40 ಸಾವಿರ ರು.ವರೆಗೆ ಖರ್ಚು ಮಾಡುತ್ತಾರೆ. ರೈತರು ಬೆಳೆದ 1 ಕ್ವಿಂಟಾಲ್ ಭತ್ತಕ್ಕೆ 60 ಕೆಜಿ ಅಕ್ಕಿ, 5 ಕೆಜಿ ನುಚ್ಚು, 5 ಕೆಜಿ ಪಾಲಿಶ್ ತೌಡು, ಗೊಳಲಿ ಸಿಗುತ್ತದೆ. ತಕ್ಷಣವೇ ಕೇಂದ್ರವು 300 ಸಂಘಟನೆಗಳು ದೆಹಲಿಯಲ್ಲಿ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗಾಗಿ ಹೋರಾಟ ನಡೆಸಿದ್ದು, ಕೇಂದ್ರವು ಕನಿಷ್ಟ ಬೆಂಬಲ ಬೆಲೆ ಕಾಯ್ದೆ ಜಾರಿಗೊಳಿಸಲಿ ಎಂದು ತಾಕೀತು ಮಾಡಿದರು.
ಸಂಘಟನೆ ಮುಖಂಡರಾದ ಕೈದಾಳೆ ರವಿಕುಮಾರ, ಯಲೋದಹಳ್ಳಿ ರವಿಕುಮಾರ, ನಿಟುವಳ್ಳಿ ಪೂಜಾರ ಅಂಜಿನಪ್ಪ, ಬಾಲಾಜಿ, ಅಸ್ತಾಫನಹಳ್ಳಿ ಗಂಡುಗಲಿ, ಬಸಣ್ಣ, ಕುಮಾರ, ನಾಗರಾಜ, ಕೃಷ್ಣಮೂರ್ತಿ, ಹನುಮಂತ ಇತರರಿದ್ದರು.ಜಗಳೂರಿನ 80ಕ್ಕೂ ಹೆಚ್ಚು ಗ್ರಾಮದಲ್ಲಿ ನೀರಿನ ಸಮಸ್ಯೆ
ರಾಜ್ಯ ಸರ್ಕಾರ ಫಾರಂ 52, 53, 57ರಲ್ಲಿ ಹಾಕಿರುವ ಬಗರ್ ಹುಕುಂ ಅರ್ಜಿಗಳನ್ನು ತಕ್ಷಣ ಇತ್ಯರ್ಥಗೊಳಿಸಿ, ಹಕ್ಕುಪತ್ರ ನೀಡಬೇಕು. ಚನ್ನಗಿರಿ ತಾಲೂಕಿನಲ್ಲಿ ಎಂಪಿಎಂ ಮಿಲ್‌ಗೆ ಲೀಸ್ ಆದಾರದ ಮೇಲೆ ಭೂಮಿ ನೀಡಲಾಗಿತ್ತು. ಈಗ ಲೀಸ್ ಅವದಿ ಮುಗಿದಿದ್ದು, ಮತ್ತೆ ಲೀಸ್ ಅವಧಿ ಮುಂದುವರಿಸಬಾರದು. ಅದೇ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಬಗರ್ ಹುಕುಂ ಹಕ್ಕುಪತ್ರ ನೀಡಬೇಕು. ಜಗಳೂರು ತಾಲೂಕಿನ 80ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದೆ. ದನಕರುಗಳಿಗೆ ನೀರು, ಮೇವಿನ ಕೊರತೆಯಾಗುತ್ತಿದೆ. ಜಿಲ್ಲಾಡಳಿತ ತಕ್ಷಣವೇ ಕೊಳವೆಬಾವಿ ಕೊರೆಸಿ, ನೀರು ಪೂರೈಸಬೇಕು. ದನ ಕರುಗಳಿಗೆ ಗೋ ಶಾಲೆ ಸ್ಥಾಪಿಸಬೇಕು ಎಂದು ಮಂಜುನಾಥ ಆಗ್ರಹಿಸಿದರು.ನಾಳೆ ನಲ್ಲೂರಿಂದ ಡಿಸಿ ಕಚೇರಿಗೆ ಪಾದಯಾತ್ರೆಅರಣ್ಯಭೂಮಿ ಸಾಗುವಳಿದಾರರು ಅರ್ಜಿ ಸಲ್ಲಿಸಿದ್ದು, ಸಮಿತಿಗಳ ಸಭೆ ಕರೆಯದೇ, ಸಣ್ಣಪುಟ್ಟ ಲೋಪದೋಷವಿದ್ದರೂ ಅರ್ಜಿದಾರರ ಗಮನಕ್ಕೆ ತಾರದೇ, ತಿರಸ್ಕರಿಸಲಾಗಿದೆ. ಈ ಮಾನದಂಡ ಬದಲಾಯಿಸಿ, ಸಣ್ಣಪುಟ್ಟ ಲೋಪದೋಷಗಳನ್ನು ಅರ್ಜಿದಾರರಿಗೆ ಪತ್ರದ ಮುಖಾಂತರ ದಾಖಲೆ ನೀಡಲು ಸೂಚಿಸಬೇಕು. ನಿವೇಶನ ರಹಿತ ಗ್ರಾಮಗಳ ಕುಟುಂಬಗಳಿಗೆ ಸರ್ಕಾರದ ಜಮೀನು ಲಭ್ಯವಿದ್ದು, ನಿವೇಶನಗಳನ್ನು ಮಾಡಿದ್ದರೂ ನಿವೇಶನ ನೀಡಿಲ್ಲ. ಸಾವಿರಾರು ಕುಟುಂಬ ಅತಂತ್ರ ಸ್ಥಿತಿಯಲ್ಲಿವೆ ಆ ಕುಟುಂಬಗಳಿಗೆ ನಿವೇಶನಕ್ಕೆ ಒತ್ತಾಯಿಸಿ ಫೆ.19ರ ಬೆಳಿಗ್ಗೆ 11ಕ್ಕೆ ಚನ್ನಗಿರಿ ತಾಲೂಕು ನಲ್ಲೂರು ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಕೈಗೊಂಡು, ಫೆ.22ರಂದು ಡಿಸಿ ಕಚೇರಿಗೆ ತಲುಪಿ, ಮನವಿ ಸಲ್ಲಿಸಲಾಗುವುದು.
ಹುಚ್ಚವ್ವನಹಳ್ಳಿ ಮಂಜುನಾಥ, ರಾಜ್ಯಾಧ್ಯಕ್ಷ, ರೈತ ಸಂಘ ಮತ್ತು ಹಸಿರು ಸೇನೆ