ಹೆಸರು ಖರೀದಿ ಕೇಂದ್ರದ ಲಾಭ ರೈತರು ಪಡೆದುಕೊಳ್ಳಿ

| Published : Aug 28 2024, 12:56 AM IST

ಸಾರಾಂಶ

ಬೆಂಬಲ ಬೆಲೆ ಯೋಜನೆಯ ಸದುಪಯೋಗ ರೈತರು ಪಡೆದುಕೊಳ್ಳಲು ಖರೀದಿ ಕೇಂದ್ರದ ಮುಂದೆ ಬ್ಯಾನರ್ ಅಳವಡಿಸಬೇಕು

ಗದಗ: 2024-25ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಹೆಸರು ಹುಟ್ಟುವಳಿ ಖರೀದಿಸಲಾಗುತ್ತಿದ್ದು, ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕ್ರಮ ಕೈ ಗೊಳ್ಳಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದರು.

ಅವರು ನಗರದ ಜಿಲ್ಲಾಧಿಕಾರಿಗಳ ಸಭಾ ಭವನದಲ್ಲಿ ಸೋಮವಾರ 2024-25ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಹೆಸರು ಹುಟ್ಟುವಳಿ ಖರೀದಿಸುವ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೆಂಬಲ ಬೆಲೆ ಯೋಜನೆಯ ಸದುಪಯೋಗ ರೈತರು ಪಡೆದುಕೊಳ್ಳಲು ಖರೀದಿ ಕೇಂದ್ರದ ಮುಂದೆ ಬ್ಯಾನರ್ ಅಳವಡಿಸಬೇಕು. ರೈತರಿಗೆ ಕರ ಪತ್ರ ವಿತರಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇದರ ಲಾಭ ಪಡೆಯುವಂತೆ ಕ್ರಮ ವಹಿಸಬೇಕು ಎಂದರು.

ಸರ್ಕಾರದ ಮಾನದಂಡಗಳನ್ವಯ ಎಫ್.ಎ.ಕ್ಯೂ ಗುಣಮಟ್ಟ ದೃಢೀಕರಿಸಲು ಕ್ರಮ ವಹಿಸಬೇಕು. ಖರೀದಿ ಏಜೆನ್ಸಿಯವರು ತಮ್ಮ ಸಂಸ್ಥೆಯ ಹಿರಿಯ ಅಧಿಕಾರಿಗಳು ಮೇಲುಸ್ತುವಾರಿ ತಪಾಸಣೆ ಕೈಗೊಳ್ಳಬೇಕು. ಎಫ್.ಎ.ಕ್ಯೂ ಗುಣಮಟ್ಟದ ಪರಿಶೀಲನೆಗಾಗಿ ಆಯಾ ಹೋಬಳಿ ವ್ಯಾಪ್ತಿಯ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸಿಬ್ಬಂದಿಗಳನ್ನು ಗ್ರೇಡರ್ ಆಗಿ ನೇಮಕ ಮಾಡಬೇಕು. ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಖರೀದಿಸಿದ ಹೆಸರು ಹುಟ್ಟುವಳಿ ದಾಸ್ತಾನೀಕರಿಸಲು ಜಿಲ್ಲೆಯಲ್ಲಿರುವ ರಾಜ್ಯ ಹಾಗೂ ಕೇಂದ್ರ ಉಗ್ರಾಣಗಳಲ್ಲಿ ಸ್ಥಳ ಕಾಯ್ದಿರಿಸಬೇಕೆಂದು ಸೂಚಿಸಿದರು.

ಸರ್ಕಾರದ ಆದೇಶದನ್ವಯ ಜಿಲ್ಲೆಯ ಪ್ರತಿ ರೈತರಿಂದ ಎಕರೆಗೆ 2 ಕ್ವಿಂಟಲ್ ಗರಿಷ್ಟ ಪ್ರಮಾಣ ಹಾಗೂ ಪ್ರತಿ ರೈತರಿಂದ 10 ಕ್ವಿಂಟಲ್ ಮಾತ್ರ ಖರೀದಿಸಲು ಶಾಖಾ ವ್ಯವಸ್ಥಾಪಕರು, ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಇವರಿಗೆ ಸೂಚಿಸಲಾಗಿದ್ದು, ಖರೀದಿ ಸಂಸ್ಥೆಗಳು ಯಾವುದೇ ರೀತಿಯ ದುರುಪಯೋಗ ಆಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ವಹಿಸಬೇಕೆಂದು ತಿಳಿಸಿದರು.

ಎಫ್.ಎ.ಕ್ಯೂ ಗುಣಮಟ್ಟದ ಹೆಸರು ಹುಟ್ಟುವಳಿಗೆ ಪ್ರತಿ ಕ್ವಿಂಟಲ್‌ಗೆ ₹8682 ರಂತೆ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರದ ಆದೇಶ ಆ. 24ರ ಅನುಸಾರ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಈ ಆದೇಶದ ದಿನಾಂಕದಿಂದ ರೈತರ ನೋಂದಣಿ 45 ದಿನದವರೆಗೆ ಹಾಗೂ ನೋಂದಣಿ ಕಾರ್ಯದ ಜತೆಯಲ್ಲಿಯೇ ಖರೀದಿ ಕಾಲಾವಧಿಯನ್ನು 90 ದಿನಗಳವರೆಗೆ ಜರುಗಿಸಲಾಗುವುದು ಎಂದರು.

ರಾಜ್ಯದಲ್ಲಿ ಮಾರ್ಕಫೆಡ್ ಸಂಸ್ಥೆಯನ್ನು ಕೇಂದ್ರ ಸರ್ಕಾರದ ಖರೀದಿ ಸಂಸ್ಥೆಯನ್ನಾಗಿ ಹಾಗೂ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಬೆಂಗಳೂರು ಮತ್ತು ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ ಕಲಬುರಗಿ ಸಂಸ್ಥೆಗಳನ್ನು ರಾಜ್ಯದ ವತಿಯಿಂದ ಖರೀದಿ ಸಂಸ್ಥೆಯನ್ನಾಗಿ ಗುರುತಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲೆಯ 56 ಕಡೆ ಖರೀದಿ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಯಿತು. ಕೃಷಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ತೋಟಗಾರಿಕೆ ಇಲಾಖೆ, ಸಹಕಾರಿ ಸಂಘಗಳ ಇಲಾಖೆ ಅಧಿಕಾರಿಗಳು, ಕೃಷಿ ಮಾರಾಟ ಇಲಾಖೆ, ಮಾರ್ಕೆಟಿಂಗ್ ಫೆಡರೇಷನ್ ಶಾಖಾ ವ್ಯವಸ್ಥಾಪಕರು, ಎಪಿಎಂಸಿ ಕಾರ್ಯದರ್ಶಿ, ಕೇಂದ್ರ ಹಾಗೂ ರಾಜ್ಯ ಉಗ್ರಾಣ ನಿಗಮದ ಶಾಖಾ ವ್ಯವಸ್ಥಾಪಕರು ಇದ್ದರು.

ಕೇಂದ್ರಗಳು:

ಗದಗ ತಾಲೂಕು: ಪಿಎಸಿಎಸ್ ಮುಳಗುಂದ, ಬಳಗಾನೂರ, ಹರ್ಲಾಪುರ, ಶಿರೋಳ, ಕೋಟುಮಚಗಿ 1, ಹೊಂಬಳ, ಕೋಟುಮಚಗಿ 2, ನೀರಲಗಿ, ಸೊರಟೂರ, ಕದಡಿ, ಲಿಂಗದಾಳ, ಕಣಗಿನಹಾಳ, ಕುರ್ತಕೋಟಿ, ಬಿಂಕದಕಟ್ಟಿ, ನೀಲಗುಂದ, ಶ್ರೀಪ್ರಭುಸ್ವಾಮಿ ಎಫ್.ಪಿ.ಓ ಹೊಂಬಳ, ಟಿ.ಎ.ಪಿ.ಸಿ.ಎಂ.ಎಸ್ ಗದಗ, ಶ್ರಮಜೀವಿ ಎಫ್.ಪಿ.ಓ ಹಿರೇಹಂದಿಗೋಳ, ಗದಗ ಕೋ ಆಪ್ ಕಾಟನ್ ಸೇಲ್ ಸೊಸೈಟಿ ಲಿ.ಗದಗ.

ಶಿರಹಟ್ಟಿ ತಾಲೂಕು: ಪಿಎಸಿಎಸ್ ಶಿರಹಟ್ಟಿ, ಟಿಎಪಿಸಿಎಂಎಸ್ ಶಿರಹಟ್ಟಿ, ಎಫ್.ಪಿ.ಓ ಬೆಳ್ಳಟ್ಟಿ

ಲಕ್ಷ್ಮೇಶ್ವರ ತಾಲೂಕು:ಪಿಎಸಿಎಸ್ ಯಳವತ್ತಿ, ಪಿಎಸಿಎಸ್ ಅಡರಕಟ್ಟಿ

ಮುಂಡರಗಿ ತಾಲೂಕು: ಪಿಎಸಿಎಸ್ ಆಲೂರ, ಪೇಠಾಲೂರ, ಬರದೂರ, ಶಿರೂರ.

ನರಗುಂದ ತಾಲೂಕು: ಪಿಎಸಿಎಸ್ ಚಿಕ್ಕ ನರಗುಂದ, ಸುರಕೋಡ, ಸಂಕದಾಳ, ಶಿರೋಳ, ಕೊಣ್ಣೂರ, ಹಿರೇಕೊಪ್ಪ, ಜಗಾಪುರ, ಖಾನಾಪುರ, ಗಂಗಾಪುರ, ಟಿಎಪಿಸಿಎಂಎಸ್ ನರಗುಂದ.

ರೋಣ ತಾಲೂಕು: ಪಿಎಸಿಎಸ್ ಹೊಸಳ್ಳಿ, ಮಲ್ಲಾಪುರ, ರೋಣ 1, ರೋಣ2, ಅಬ್ಬಿಗೇರಿ, ಯಾವಗಲ್, ಕೌಜಗೇರಿ, ಬೆಳವಣಿಕಿ, ಸವಡಿ, ನಿಡಗುಂದಿ, ಜಕ್ಕಲಿ, ಹೊಳೆಆಲೂರ, ಯಾ.ಸ.ಹಡಗಲಿ, ಟಿಎಪಿಸಿಎಂಎಸ್ ರೋಣ, ಎಫ್‌ಪಿಓ ಸವಡಿ.

ಗಜೇಂದ್ರಗಡ ತಾಲೂಕು: ಟಿಎಪಿಸಿಎಂ ಎಸ್ ನರೇಗಲ್, ಟಿಎಪಿಸಿ ಎಂ.ಎಸ್ ಗಜೇಂದ್ರಗಡ