ಗಮನ ಸೆಳೆಯುತ್ತಿದೆ ಶೆಲ್‌ ಇಂಡಿಯಾ ಸೈಲೆಂಟ್‌ ಶಿಫ್ಟ್‌!

| Published : Aug 28 2024, 12:56 AM IST

ಸಾರಾಂಶ

ಶೆಲ್‌ ಇಂಡಿಯಾ ತನ್ನ ಪೆಟ್ರೋಲ್‌ ಬಂಕ್‌ಗಳಲ್ಲಿ ಕಿವುಡ, ಮೂಕರನ್ನು ಬಳಸಿಕೊಂಡು ಸೈಲೆಂಟ್‌ ಶಿಫ್ಟ್‌ ಎಂಬ ಕಾರ್ಯಕ್ರಮ ರೂಪಿಸಿ ಅವರಿಗೆ ಭದ್ರತೆ ಒದಗಿಸಿದೆ. ಈ ಕಾರ್ಯಕ್ರಮ ಶುರುವಾಗಿ ಒಂದು ವರ್ಷವಾಗಿರುವ ಹಿನ್ನೆಲೆಯಲ್ಲಿ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಶೆಲ್‌ ಪೆಟ್ರೋಲ್‌ ಬಂಕ್‌ಗಳಲ್ಲಿ ವರ್ಷಾಚರಣೆ ಆಚರಿಸಲಾಯಿತು.

ಧಾರವಾಡ:

ಸಾಮಾನ್ಯವಾಗಿ ವಿಕಲಚೇತನರು ಅದರಲ್ಲೂ ಕಿವುಡ ಹಾಗೂ ಮೂಗರನ್ನು ನೌಕರಿ ವಿಷಯದಲ್ಲಿ ಉದ್ಯೋಗ ಸಂಸ್ಥೆಗಳು ಗಮನಕ್ಕೆ ತೆಗೆದುಕೊಳ್ಳುವುದು ಅಷ್ಟಕಷ್ಟೇ. ಇಂತಹ ಸಂದರ್ಭದಲ್ಲಿ ದೇಶದ ಪ್ರತಿಷ್ಠಿತ ಇಂಧನ ಕಂಪನಿಯಾಗಿರುವ ಶೆಲ್‌ ಇಂಡಿಯಾ ಸಂಸ್ಥೆಯು ಇವರಿಗಾಗಿಯೇ ಸೈಲೆಂಟ್‌ ಶಿಫ್ಟ್‌ (ನಿಶಬ್ದ ಪಾಳಿ) ಎಂಬುದನ್ನು ಆರಂಭಿಸಿ ಯಶಸ್ವಿಯಾಗಿದೆ.

ಶೆಲ್‌ ಇಂಡಿಯಾ ತನ್ನ ಪೆಟ್ರೋಲ್‌ ಬಂಕ್‌ಗಳಲ್ಲಿ ಕಿವುಡ, ಮೂಕರನ್ನು ಬಳಸಿಕೊಂಡು ಸೈಲೆಂಟ್‌ ಶಿಫ್ಟ್‌ ಎಂಬ ಕಾರ್ಯಕ್ರಮ ರೂಪಿಸಿ ಅವರಿಗೆ ಭದ್ರತೆ ಒದಗಿಸಿದೆ. ದೇಶದ ವಿವಿಧ ರಾಜ್ಯಗಳ ಪೈಕಿ ಪೂನಾ, ಧಾರವಾಡ ಹಾಗೂ ಬೆಂಗಳೂರಿನ ಶೆಲ್‌ ಪೆಟ್ರೋಲ್‌ ಬಂಕ್‌ಗಳಲ್ಲಿ ಕಳೆದ ಒಂದು ವರ್ಷದಿಂದ ಕಿವುಡ, ಮೂಕ ಸಿಬ್ಬಂದಿಗಳು ಎಂಟು ತಾಸುಗಳ ಪಾಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕಾರ್ಯಕ್ರಮ ಶುರುವಾಗಿ ಒಂದು ವರ್ಷವಾಗಿರುವ ಹಿನ್ನೆಲೆಯಲ್ಲಿ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಶೆಲ್‌ ಪೆಟ್ರೋಲ್‌ ಬಂಕ್‌ಗಳಲ್ಲಿ ವರ್ಷಾಚರಣೆ ಆಚರಿಸಲಾಯಿತು.

ಈ ಬಂಕ್‌ನಲ್ಲಿ ಕಸ್ಟಮರ್‌ ಚಾಂಪಿಯನ್‌ ಆಗಿರುವ ಮಧುಸೂಧನ ಹೊಂಗಲ, ಸವಿತಾ, ಮಲ್ಲಿಕಾರ್ಜುನ ಹಾಗೂ ವಿನಾಯಕ ಎಂಬುವರು ಸಮರ್ಥನಂ ಸಂಸ್ಥೆಯಿಂದ ತರಬೇತಿ ಪಡೆದು ಒಂದು ವರ್ಷದಿಂದ ಸೈಲೆಂಟ್‌ ಶಿಫ್ಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೈ ಮತ್ತು ಬಾಯಿ ಸನ್ನೆ ಮೂಲಕ ಗ್ರಾಹಕರ ಬೇಡಿಕೆ ಈಡೇರಿಸುತ್ತಿರುವ ಇವರು, ಪೆಟ್ರೋಲ್‌ ಅಥವಾ ಡೀಸೆಲ್‌ ಬೇಕೋ, ರಿಯಾಯ್ತಿ ಇದೆ, ಪೂರ್ಣ ಟ್ಯಾಂಕ್‌ ಬೇಕಾ? ಏರ್‌ (ಚಕ್ರಕ್ಕೆ ಗಾಳಿ) ಬೇಕಾ? ಅಂತಹ ಪ್ರಶ್ನೆಗಳ ಫಲಕ ಹಿಡಿದು ಸನ್ನೆ ಮೂಲಕ ಗ್ರಾಹಕರನ್ನು ನಿಭಾಯಿಸುತ್ತಿದ್ದಾರೆ.

ಇಲ್ಲಿ ಒಂದು ವರ್ಷ ಕಾಲ ಸೇವೆ ಸಲ್ಲಿಸುತ್ತಿದ್ದು ಗ್ರಾಹಕರು ತಮ್ಮ ಚಿಹ್ನೆಗಳನ್ನು ಅರಿತು ಸ್ಪಂದಿಸುತ್ತಾರೆ. ಸಾಮಾನ್ಯ ಸಿಬ್ಬಂದಿಗಿಂತ ಹೆಚ್ಚು ತಮಗೆ ಸ್ಪಂದಿಸುತ್ತಿದ್ದು ಖುಷಿ ತಂದಿದೆ. ಜತೆಗೆ ಸಂಸ್ಥೆಯು ತಮಗೆ ಜೀವನದ ದಾರಿ ಮಾಡಿಕೊಟ್ಟಿದ್ದು ಧನ್ಯವಾದ ಎಂದು ಮಧುಸೂದನ ಹೊಂಗಲ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದರು.

ಸೈಲೆಂಟ್ ಶಿಫ್ಟ್ ಸಿಬ್ಬಂದಿಗೆ ಗ್ರಾಹಕ ಸೇವೆಗಳಲ್ಲಿ, ಸಂಪನ್ಮೂಲಗಳ ಬಳಕೆಯಲ್ಲಿ, ಸುರಕ್ಷತಾ ನಿಯಮಗಳ ಪಾಲನೆಯಲ್ಲಿ ವಿಶೇಷವಾದ ತರಬೇತಿ ನೀಡಲಾಗಿದೆ. ವಿಕಲಚೇತನರಿಗೆ ಮಾತ್ರವಲ್ಲದೇ ಕೆಲವೆಡೆ ಪ್ರತ್ಯೇಕ ಮಹಿಳಾ ತಂಡ ಸಹ ರಚಿಸಿ ಯಶಸ್ವಿಯಾಗಿದ್ದೇವೆ. ನಮ್ಮ ಪ್ರಯತ್ನ ಇತರರಿಗೂ ಮಾದರಿಯಾಗಿದೆ. ಈ ಶಿಫ್ಟ್‌ ಗ್ರಾಹಕರಿಗೆ ಯಾವುದೇ ತೊಂದರೆ ಆಗಿಲ್ಲ. ಬದಲಾಗಿ ಸುಮಧುರ ಅನುಭವ ಒದಗಿಸುತ್ತದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಈ ತಂಡವು ಸಹಸ್ರಾರು ಮಂದಿ ಗ್ರಾಹಕರಿಗೆ ಸೇವೆ ಒದಗಿಸಿದೆ. ಸೇವೆಗಳನ್ನು ಒದಗಿಸುತ್ತಲೇ ಈ ತಂಡವು ತಾನೂ ಬೆಳೆಯುತ್ತಿದೆ ಎನ್ನುತ್ತಾರೆ ಶೆಲ್‌ ಮೊಬೈಲಿಟಿ ಇಂಡಿಯಾದ ನಿರ್ದೇಶಕ ಸಂಜಯ ವರ್ಕೆ.

ಶೆಲ್ ಇಂಡಿಯಾ ಕಂಪನಿಯು ಈಗ 350ಕ್ಕೂ ಹೆಚ್ಚಿನ ಇಂಧನ ಮಾರಾಟ ಕೇಂದ್ರಗಳನ್ನು ಹೊಂದಿದೆ. ಈ ಕೇಂದ್ರಗಳು ಇಂಧನ, ಕೆಫೆ, ಆಹಾರ ಮತ್ತು ಪಾನೀಯ ಉತ್ಪನ್ನಗಳನ್ನು ಮಾರಾಟ ಮಾಡುವ ಮಳಿಗೆ, ವಿದ್ಯುತ್ ಚಾಲಿತ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯ ಹೊಂದಿವೆ. ಇವೆಲ್ಲವನ್ನೂ ಈ ತಂಡವು ಯಾವುದೇ ಸಮಸ್ಯೆ ಇಲ್ಲದೇ ನಿರ್ವಹಿಸುತ್ತಿದ್ದು, ಸಾಮಾನ್ಯ ಸಿಬ್ಬಂದಿಗೆ ಇರುವ ಸಂಬಳ ಹಾಗೂ ಇತರೆ ಸೇವೆಗಳನ್ನು ಇವರಿಗೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.