ಮುನಿರಾಬಾದ್: ಸಿಎಂ ಡಿ.ಕೆ. ಶಿವಕುಮಾರ ಜಲಾಶಯದಿಂದ ಕಾಲುವೆಗೆ ನೀರು ಹರಿಸುವ ವಿಷಯದಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡ ಹಿನ್ನೆಲೆ ಇಂದು ರೈತರು ಬೀದಿಗಿಳಿದು ಪ್ರತಿಭಟನೆ ಮಾಡುವ ಪರಿಸ್ಥಿತಿ ಬಂದಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಆರೋಪಿಸಿದರು.
ಶುಕ್ರವಾರ ಇಲ್ಲಿನ ನೀರಾವರಿ ಕಚೇರಿ ಎದುರು ವಿಜಯನಗರ ಕಾಲದ ಎಡದಂಡೆ ಕಾಲುವೆ ಭಾಗದ ರೈತರ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಸುಮಾರು 2000 ಕ್ಕಿಂತ ಅಧಿಕ ರೈತರು ಭಾಗವಹಿಸಿದ್ದರು.ಎಡದಂಡೆ ಭಾಗದ ವಿಜಯನಗರ ಕಾಲುವೆಗಳಲ್ಲಿ ತಕ್ಷಣದಿಂದ ನೀರು ಹರಿಸಿ ರೈತರನ್ನು ಉಳಿಸಬೇಕು ಎಂದು ಒತ್ತಾಯಿಸಿದರು.
ತುಂಗಭದ್ರಾ ಜಲಾಶಯಕ್ಕೆ ಪ್ರತಿನಿತ್ಯ 15,000ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯಕ್ಕೆ ಒಂದು ದಿನ ಬರುವ ನೀರಿನ ಪ್ರಮಾಣದಲ್ಲಿ ವಿಜಯನಗರ ಎಡದಂಡೆ ಕಾಲುವೆ ಭಾಗದ ರೈತರು ವರ್ಷದ ಬೆಳೆ ತೆಗೆಯುತ್ತಾರೆ. ಇಷ್ಟು ಅಲ್ಪ ಪ್ರಮಾಣದ ನೀರನ್ನು ಎಡದಂಡೆ ಭಾಗದ ವಿಜಯನಗರ ಕಾಲುವೆಗೆ ಹರಿಸಲು ಸರ್ಕಾರ ಏತಕ್ಕೆ ತಾರತಮ್ಯ ಮಾಡುತ್ತಿದೆ ಎಂದು ಪ್ರಶ್ನಿಸಿದರು.ಕಾವೇರಿ ನದಿ ಒಣಗಿ ಹೋದರೂ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ತುಂಗಭದ್ರಾ ಜಲಾಶಯದಲ್ಲಿ ನೀರಿದ್ದರೂ ನಮ್ಮ ರೈತರ ಗದ್ದೆಗೆ ಯಾಕೆ ನೀರನ್ನು ಹರಿಸುತ್ತಿಲ್ಲ ಎಂದು ಪ್ರಶ್ನಿಸಿದರು.
2028ರ ಚುನಾವಣೆಯಲ್ಲಿ ಬಿಜೆಪಿ ಮತ್ತೇ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ವಿಪ ಸದಸ್ಯೆ ಹೇಮಲತಾ ನಾಯಕ್, ವಿಪ ಸದಸ್ಯ ರವಿಕುಮಾರ್, ಮಾಜಿ ಶಾಸಕ ಪರಣ್ಣ ಮನವಳ್ಳಿ, ಬಸವರಾಜ್ ದಡೇಸ್ಗೂರು, ಮಾಜಿ ಸಂಸದ ಶಿವರಾಮೇಗೌಡ, ತಿಪ್ಪೇರುದ್ರಸ್ವಾಮಿ, ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಗುಳಗಣ್ಣವರ, ಬಿಜೆಪಿ ಮುಖಂಡ ಪೀರ ಹುಸೇನ್ ಹೊಸಳ್ಳಿ, ಗಿರಿಗೌಡ, ಗಣೇಶ್ ಹೊರತಟ್ನಾಳ್,ವಿರುಪಾಕ್ಷಪ್ಪ ಸಿಂಗನಾಳ, ಪ್ರದೀಪ್ ಪಲ್ಲೆದ್, ರಘುರಾಜ್ ಪಾಟೀಲ್ ಹಾಗೂ ಇತರರು ವೇದಿಕೆ ಮೇಲೆ ಉಪಸ್ಥಿರಿದ್ದರು.
ಸರ್ಕಾರದಿಂದ ರೈತರನ್ನು ದಿಕ್ಕು ತಪ್ಪಿಸುವ ಕೆಲಸ: ಶಾಸಕ ಜನಾರ್ದನತುಂಗಭದ್ರಾ ಎಡದಂಡೆ ಭಾಗದ ರೈತರ ಗದ್ದೆಗಳಿಗೆ ನೀರು ಹರಿಸುವ ಬದಲು ರೈತರ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಆರೋಪಿಸಿದ್ದರು.
ಅವರು ಮುನಿರಾಬಾದಿನಲ್ಲಿ ಶುಕ್ರವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿ, ತುಂಗಭದ್ರಾ ಜಲಾಶಯದಲ್ಲಿ ನೀರಿನ ಒಳ ಹರಿವಿನ ಪರಿಸ್ಥಿತಿ ಉತ್ತಮವಾಗಿದೆ. ಜಲಾಶಯದಲ್ಲಿ ಇಂದು 38 ಟಿಎಂಸಿ ನೀರು ಶೇಖರಣೆಯಾಗಿದೆ. ಜಲಾಶಯಕ್ಕೆ ನಿತ್ಯ ಒಂದು ಟಿಎಂಸಿ ನೀರು ಹರಿದು ಬರುತ್ತಿದೆ ಆದರೂ ಎಡದಂಡೆ ವಿಜಯನಗರ ಕಾಲುವೆ ಭಾಗದ ರೈತರ ಗದ್ದೆಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ಸರ್ಕಾರ ಮೀನಮೇಷ ಎಣಿಸುತ್ತಿದೆ. ಇದು ಸರ್ಕಾರದ ರೈತ ವಿರೋಧ ಧೋರಣೆ ತೋರಿಸುತ್ತದೆ ಎಂದು ಆರೋಪಿಸಿದರು.ನಾವು ಇಂದು ಬೆಳಗ್ಗೆ ಅಂಜನಾದ್ರಿಯಲ್ಲಿ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಹಿಟ್ನಾಳ ಟೋಲ್‌ಗೇಟ್‌ವರೆಗೆ ಬಂದು ಅಲ್ಲಿಂದ ಮುನಿರಾಬಾದಗೆ ಪಾದಯಾತ್ರೆ ಮಾಡಿದ್ದೇವೆ. ನಮ್ಮೊಂದಿಗೆ 85 ವರ್ಷದ ವಯೋವೃದ್ಧ ರೈತ ಕಾಸೈಯ್ಯಸ್ವಾಮಿ ಪಾದಯಾತ್ರೆ ಮಾಡಿ ರೈತರಲ್ಲಿ ಉತ್ಸಾಹ ಮೂಡಿಸಿದ್ದಾರೆ ಎಂದರು.
ಪ್ರತಿಭಟನಾಕಾರರ ಬಂಧನ: ಶಾಸಕ ಜನಾರ್ದನ ರೆಡ್ಡಿ, ವಿಪ ಸದಸ್ಯೆ ಹೇಮಲತಾ ನಾಯಕ, ರವಿಕುಮಾರ್, ಮಾಜಿ ಸಚಿವ ಶ್ರೀರಾಮುಲು, ಮಾಜಿ ಶಾಸಕರುಗಳಾದ ಪರಣ್ಣ ಮುನವಳ್ಳಿ, ಬಸವರಾಜ್ ದಢೇಸ್ಗೂರು, ಮಾಜಿ ಸಂಸದ ಶಿವರಾಮೇಗೌಡ, ಮಾಜಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಬಿಜೆಪಿ ಮುಖಂಡ ಬಸವರಾಜ್ ಕ್ಯಾವಟರ್, ನೀರಾವರಿ ಕಚೇರಿ ಒಳಗೆ ನುಗ್ಗಲು ಪ್ರಯತ್ನಿಸಿದಾಗ ಅವರನ್ನು ಪೊಲೀಸರು ಬಂಧಿಸಿ ಪೊಲೀಸ್ ವಾಹನದಲ್ಲಿ ಕರೆದೊಯ್ದರು.