ಸಾರಾಂಶ
ಗದಗ: ಬಗರಹುಕುಂ ಸಾಗುವಳಿದಾರ ರೈತರು ಹಕ್ಕು ಪತ್ರಗಳಿಗಾಗಿ ಆಗ್ರಹಿಸಿ ಶನಿವಾರ ಉರಿ ಬಿಸಿಲಿನಲ್ಲಿ ಉರುಳು ಸೇವೆ ಮಾಡುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಗದಗ ನಗರದ ಮುಳಗುಂದ ನಾಕಾದಿಂದ ಪ್ರಾರಂಭವಾದ ಉರುಳು ಸೇವೆ ಜಿಲ್ಲಾಡಳಿತ ಭವನದವರೆಗೆ ನಡೆಯಿತು.ರೈತರು ಹಾಗೂ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ, ಸುಡುವ ದಾರಿಯ ಮೇಲೆ ಮಲಗಿ ಉರುಳುತ್ತಾ, ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರ ವಿರುದ್ಧ ಘೋಷಣೆ ಕೂಗಿ, ಜಿಲ್ಲಾಡಳಿತ ಭವನದವರೆಗೆ ಪಾದಯಾತ್ರೆ ನಡೆಸಿದರು.
ಬಗರಹುಕುಂ ಸಾಗುವಳಿದಾರರು ಹಾಗೂ ಅರಣ್ಯ ಅವಲಂಬಿತ ರೈತರಿಗೆ ಹಕ್ಕು ಪತ್ರ ನೀಡಬೇಕು, ನಾಗಾವಿ ಆರ್‌ಡಿಪಿಆರ್ ವಿಶ್ವವಿದ್ಯಾಲಯಕ್ಕೆ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ಅಥವಾ ಪರ‍್ಯಾಯ ಜಮೀನು ನೀಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹೋರಾಟಗಾರರು, ಜಿಲ್ಲೆಯ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ವಾರಕ್ಕೊಮ್ಮೆ ಜಿಲ್ಲೆಗೆ ಬಂದು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಇಪ್ಪತ್ತು ದಿನಗಳಿಂದ ರೈತರು ಮನೆಯಿಂದ ದೂರವಿದ್ದು, ತೀವ್ರ ಬಿಸಿಲಿನಲ್ಲಿ ಧರಣಿ ಕುಳಿತಿರುವ ವಿಚಾರ ಅವರ ಗಮನಕ್ಕೆ ಬರುತ್ತಿಲ್ಲವೇ ? ಕಳೆದ ಬಾರಿ ನಮ್ಮ ಸಮಸ್ಯೆ ಪರಿಹರಿಸುತ್ತೇನೆಂದು ಭರವಸೆ ನೀಡಿದರೂ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ರೈತರ ಸಂಕಷ್ಟವನ್ನು ಕಡೆಗಣಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ, ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಪಾಲ್ಗೊಂಡು ಬೆಂಬಲ ಸೂಚಿಸಿದರು.ಈ ಸಂದರ್ಭದಲ್ಲಿ ರಮೇಶ ಮಜ್ಜೂರ, ಚಂಬಣ್ಣ ಪರಸಾಪೂರ, ಶಾಂತವ್ವ ನಾಗಾವಿ, ಸೋಮನಾಥ ಜಾಧವ, ನಾಮದೇವ ಮಾಂಡ್ರೆ, ನಬಿಸಾಬ ನದಾಫ, ಈಶಪ್ಪ ಕಡಕೋಳ, ದ್ಯಾಮಣ್ಣ ಲಮಾಣಿ, ಫಿರೋಜ್ ನದಾಫ್, ಖಾದೀರ್ ಸಾಬ್, ಮಹಮ್ಮದ್ ಶಲವಡಿ ಸೇರಿದಂತೆ ನಾಗಾವಿ, ಬೆಳಧಡಿ, ಶಿರಹಟ್ಟಿ, ಲಕ್ಷ್ಮೇಶ್ವರ, ಎಲ್ಲಾಪೂರ, ಮುರುಡಿ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ರೈತರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.