ಅಮ್ಯೂಸ್‌ಮೆಂಟ್ ಯೋಜನೆ ರದ್ದುಗೊಳಿಸಲು ರೈತಸಂಘ ಆಗ್ರಹ

| Published : May 18 2025, 02:07 AM IST

ಅಮ್ಯೂಸ್‌ಮೆಂಟ್ ಯೋಜನೆ ರದ್ದುಗೊಳಿಸಲು ರೈತಸಂಘ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರವು ಕಬ್ಬಿಗೆ ಎಫ್‌ಆರ್‌ಪಿ ದರ ನಿಗದಿಪಡಿಸುವಾಗ ಶೇ.೮.೫ ರಷ್ಟು ಇಳುವರಿ ಆಧಾರದ ಮೇಲೆ ದರ ನಿಗದಿಪಡಿಸಬೇಕು. ರಾಜ್ಯ ಸರ್ಕಾರವು ಟನ್ ಕಬ್ಬಿಗೆ ಕನಿಷ್ಠ ೫೦೦ ರು. ಪ್ರೋತ್ಸಾಹಧನ ನೀಡಬೇಕು. ರೈತ ವಿರೋಧಿ ಮೂರು ಕಾಯ್ದೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಾಶ್ವತವಾಗಿ ವಾಪಸ್ ಪಡೆಯಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಕೃಷ್ಣರಾಜಸಾಗರದಲ್ಲಿ ಪ್ರಾರಂಭಿಸಲು ಹೊರಟಿರುವ ಅಮ್ಯೂಸ್‌ಮೆಂಟ್ ಪಾರ್ಕ್ ರದ್ದುಪಡಿಸಬೇಕು, ಕಾವೇರಿ ಆರತಿ ಯೋಜನೆ ಕೈಬಿಟ್ಟು ಅದಕ್ಕೆ ಮೀಸಲಿಟ್ಟಿರುವ ೯೨ ಕೋಟಿ ರು. ಹಣವನ್ನು ಕೆಆರ್‌ಎಸ್ ಅಚ್ಚುಕಟ್ಟು ವಿತರಣಾ ನಾಲೆಗಳ ಆಧುನೀಕರಣಕ್ಕೆ ಬಳಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರ ನೇತೃತ್ವದಲ್ಲಿ ಸೇರಿದ ರೈತ ಸಂಘದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರವು ಕಬ್ಬಿಗೆ ಎಫ್‌ಆರ್‌ಪಿ ದರ ನಿಗದಿಪಡಿಸುವಾಗ ಶೇ.೮.೫ ರಷ್ಟು ಇಳುವರಿ ಆಧಾರದ ಮೇಲೆ ದರ ನಿಗದಿಪಡಿಸಬೇಕು. ರಾಜ್ಯ ಸರ್ಕಾರವು ಟನ್ ಕಬ್ಬಿಗೆ ಕನಿಷ್ಠ ೫೦೦ ರು. ಪ್ರೋತ್ಸಾಹಧನ ನೀಡಬೇಕು. ರೈತ ವಿರೋಧಿ ಮೂರು ಕಾಯ್ದೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಾಶ್ವತವಾಗಿ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಕಾಯಂ ಆಗಿ ಭತ್ತ ಹಾಗೂ ರಾಗಿ ಕೇಂದ್ರಗಳನ್ನು ತೆರೆದು ರೈತರಿಂದ ಮಿಲ್ ಪಾಯಿಂಟ್‌ನಲ್ಲಿ ಭತ್ತವನ್ನು ಖರೀದಿಸಬೇಕು. ಕೆಆರ್‌ಎಸ್ ಹಾಗೂ ಹೇಮಾವತಿ ಜಲಾಶಯಗಳಿಂದ ಹಾಲಿ ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಪೂರೈಸಬೇಕು. ಈಗಾಗಲೇ ಘೋಷಿಸಿರುವಂತೆ ೧೫೦ ರು. ಕಬ್ಬಿನ ಬಾಕಿ ಪಾವತಿಸಲು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ರಂಗರಾಜನ್ ವರದಿಯಂತೆ ಪ್ರತಿವರ್ಷವೂ ಕಬ್ಬಿನ ಉಪ ಉತ್ಪನ್ನಗಳಲ್ಲಿ ಬರುವ ಲಾಭಾಂಶದಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಶೇ.೭೦ ರಷ್ಟು ಲಾಭಾಂಶವನ್ನು ನೀಡುವಂತೆ ಸರ್ಕಾರವು ಆಯಾ ಸಕ್ಕರೆ ಕಾರ್ಖಾನೆಗಳಿಗೆ ನಿರ್ದೇಶನ ನೀಡಬೇಕು. ಕೃಷಿ ಪಂಪ್‌ಸೆಟ್‌ಗಳ ಅಕ್ರಮ ಸಕ್ರಮಕ್ಕೆ ನಿಗದಿಪಡಿಸಿರುವ ೨೫ ಸಾವಿರ ರು. ಹಣವನ್ನು ರೈತರಿಂದ ಜಮಾ ಮಾಡಿಕೊಂಡು ಉಳಿದ ಎಲ್ಲ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎಸ್.ಲಿಂಗಪ್ಪಾಜಿ, ಕೋಶಾಧ್ಯಕ್ಷ ಎಸ್.ಕೆ.ರವಿಕುಮಾರ್, ರಾಜ್ಯ ವಿಭಾಗೀಯ ಉಪಾಧ್ಯಕ್ಷ ಬೋರಾಪುರ ಶಂಕರೇಗೌಡ, ಮುಖಂಡರಾದ ದೇವರಾಜ್, ಶಿವರುದ್ರ, ವಿನೋದ್ಬಾಬು ತೂಬಿನಕೆರೆ, ಮಂಜು ಕೋಣನಹಳ್ಳಿ, ರಘುಗೌಡ ಮಳವಳ್ಳಿ, ವಿಜಯ್‌ಕುಮಾರ್, ಅಣ್ಣಯ್ಯ, ರುದ್ರೇಶ್, ಮಮತಾ, ರಾಣಿ, ಲೀಲಾ ಭಾಗವಹಿಸಿದ್ದರು.