ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕು ಕಚೇರಿಯಲ್ಲಿ ನಿರಂತರ ಶೋಷಣೆ, ನೀರಾವರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ತಾಲೂಕು ರೈತಸಂಘ ಆಗ್ರಹಿಸಿತು.ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ನೀರಾವರಿ ಇಲಾಖೆಯಲ್ಲಿನ ಕಳಪೆ ಕಾಮಗಾರಿ ಮತ್ತು ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಶೀಘ್ರವೇ ರೈತ ಚಳವಳಿ ಸಂಘಟಿಸುವ ಕುರಿತು ರೈತ ಸಂಘದ ಕಾರ್ಯಕರ್ತರು ಚರ್ಚಿಸಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ಭ್ರಷ್ಟಾಚಾರದ ವಿರುದ್ಧ ರೈತಸಂಘ ನಿರಂತರ ಹೋರಾಟ ನಡೆಸುತ್ತಿದ್ದರೂ ಬೇರುಗಳು ಸಡಿಲಗೊಳ್ಳುತ್ತಿಲ್ಲ. ಸೇನೆಯಲ್ಲಿ ಕೆಲಸ ಮಾಡಿದ್ದ ಲೆಫ್ಟಿನೆಂಟ್ ಕರ್ನಲ್ ಡಾ.ಅಶೋಕ್ ತಹಸೀಲ್ದಾರ್ ಆಗಿದ್ದರೂ ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರ ತೊಲಗಿಸಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ತಾಲೂಕು ಕಚೇರಿಯಲ್ಲಿ ಲಂಚವಿಲ್ಲದೆ ಯಾವುದೇ ಕಡತಗಳು ತಹಸೀಲ್ದಾರರ ಸಹಿಗೆ ಹೋಗುತ್ತಿಲ್ಲ. ಟಪಾಲು ಮೂಲಕ ರೈತರು ಸಲ್ಲಿಸಿದ ಅರ್ಜಿಗಳು ಹಣಕೊಡದಿದ್ದರೆ ಟಪಾಲು ಕೇಂದ್ರದಲ್ಲಿಯೇ ಕೊಳೆಯುತ್ತಿವೆ. ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಆರ್.ಐ ಗಳು ರೈತರ ಸುಲಿಗೆ ಮಾಡುತ್ತಿದ್ದಾರೆ. ಅಕ್ರಮ- ಸಕ್ರಮದಡಿ ರೈತರು ಉಳುಮೆ ಮಾಡುತ್ತಿರುವ ಜಮೀನಿನ ಸಾಗುವಳಿ ಚೀಟಿ ಪಡೆಯಲು ಲಕ್ಷಾಂತರ ರು. ಲಂಚ ನೀಡಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಆಸ್ತಿ ಸಂರಕ್ಷಣೆಗೆ ಕ್ರಮ ವಹಿಸುತ್ತಿಲ್ಲ. ತೇಗನಹಳ್ಳಿ ಕೆರೆ ಖಾಸಗಿ ವ್ಯಕ್ತಿ ಪಾಲಾಗಿದ್ದರೂ ಅದನ್ನು ಮರು ಸ್ವಾಧೀನಕ್ಕೆ ಮುಂದಾಗಿಲ್ಲ. ಅಲ್ಲದೆ ನೀರಾವರಿ ಇಲಾಖೆ ಸುಮಾರು 40 ಲಕ್ಷಕ್ಕೂ ಅಧಿಕ ಹಣ ಹಾಕಿ ಅಭಿವೃದ್ದಿ ಪಡಿಸಿದೆ. ಕೆರೆ ಸರ್ಕಾರಿ ದಾಖಲೆಯಲ್ಲಿ ಇಲ್ಲದಿದ್ದರೆ ಅದು ಯಾರಿಗೆ ಸೇರಿದ್ದು, ಇದನ್ನು ಪತ್ತೆ ಹಚ್ಚಬೇಕು. ಖಾಸಗಿ ವ್ಯಕ್ತಿಗೆ ಸೇರಿದ ಕೆರೆಯಾದರೆ ಅದರ ಅಭಿವೃದ್ದಿಗೆ ಹಣ ಹಾಕಿದ ನೀರಾವರಿ ಇಲಾಖೆ ಇಂಜಿನಿಯರ್ ವಿರುದ್ದ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸಿ ಹಣ ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.ಹೇಮಾವತಿ ಎಡದಂಡೆ ಮುಖ್ಯ ನಾಲೆಯ 54ನೇ ವಿತರಣಾ ನಾಲೆಯ ಆಧುನೀಕರಣ ಸುಮಾರು 60 ಕೋಟಿ ಅಂದಾಜು ವೆಚ್ಚದಲ್ಲಿ ನಡೆಯುತ್ತಿದೆ. ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಇದರ ವಿರುದ್ಧ ಸಮಗ್ರ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಆವರಣದ ರಸ್ತೆಯನ್ನು ಮುಚ್ಚಿದ್ದು, ಪರ್ಯಾಯ ರಸ್ತೆ ಜಾಗ ಗುರುತಿಸಿ ಇಲಾಖೆಗೆ ವರದಿ ನೀಡುವಂತೆ ಪತ್ರ ಬರೆದು ಏಳು ತಿಂಗಳು ಕಳೆದಿದ್ದರೂ ತಹಸೀಲ್ದಾರರು ಮಾತ್ರ ರೈತರಿಗೆ ರಸ್ತೆ ಬಿಡಿಸುವ ಸಂಬಂಧ ಕ್ರಮ ವಹಿಸಿಲ್ಲ ಎಂದು ಕಿಡಿಕಾರಿದರು.ಸಭೆಯಲ್ಲಿ ರೈತಸಂಘದ ತಾಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಜಿಲ್ಲಾ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಮುಖಂಡರಾದ ಕೆ.ಆರ್.ಜಯರಾಂ, ಎಲ್.ಬಿ.ಜಗದೀಶ್, ಕರೋಟಿ ತಮ್ಮಯ್ಯ, ಬೂಕನಕೆರೆ ನಾಗರಾಜು, ಮಡುವಿನಕೋಡಿ ಪ್ರಕಾಶ್, ಮುದ್ದುಕುಮಾರ್, ಚೌಡೇನಹಳ್ಳಿ ಕೃಷ್ಣೇಗೌಡ, ಮರಡಹಳ್ಳಿ ರಾಮೇಗೌಡ, ಲಕ್ಷ್ಮೀಪುರ ನಾಗರಾಜು ಸೇರಿ ಹಲವರು ಇದ್ದರು.