ಕನ್ನಡಪ್ರಭ ವಾರ್ತೆ ಹಿರಿಯೂರು

ವಿವಿ ಸಾಗರ ಜಲಾಶಯದಿಂದ ತಾಲೂಕಿನ ಅಚ್ಚುಕಟ್ಟು ಪ್ರದೇಶಕ್ಕೆ ಎಡ ಮತ್ತು ಬಲ ಕಾಲುವೆಗಳಿಂದ ನೀರು ಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ವಿಶ್ವೇಶ್ವರಯ್ಯ ಜಲನಿಗಮ ಹಿರಿಯೂರು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ತಾಲೂಕಿನ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದಿರುವ ತೆಂಗು, ಅಡಕೆ, ಬಾಳೆ, ಪಪ್ಪಾಯಿ, ದಾಳಿಂಬೆ ಮುಂತಾದ ತೋಟಗಾರಿಕೆ ಬೆಳೆಗಳು ಮತ್ತು ಅಲ್ಪಾವಧಿ ಬೆಳೆಗಳು ಒಣಗುತ್ತಿದ್ದು ಸಕಾಲಕ್ಕೆ ಮಳೆಯಾಗದೇ ಅಂತರ್ಜಲ ಕಡಿಮೆಯಾಗಿ ಬೋರ್‌ವೆಲ್‌ಗಳಲ್ಲಿ ನೀರು ಬತ್ತಿರುವುದರಿಂದ ತೋಟಗಾರಿಕೆ ಮತ್ತು ಇತರೆ ಬೆಳೆಗಳಿಗೆ ವಿವಿ ಸಾಗರ ಜಲಾಶಯದಿಂದ ಎಡ ಮತ್ತು ಬಲ ಕಾಲುವೆಗಳ ಮುಖಾಂತರ ನೀರು ಹರಿಸಿ ರೈತರ ನೆರವಿಗೆ ಧಾವಿಸಬೇಕು. ವಿವಿ ಸಾಗರ ಜಲಾಶಯದಲ್ಲಿ ಸುಮಾರು 126.40 ಅಡಿಗಿಂತ ಹೆಚ್ಚು ನೀರು ಇರುವುದರಿಂದ ಜಲಾಶಯದ ನೀರು ಹರಿಸುವುದರಿಂದ ನೀರಿನ ಅಭಾವ ಉಂಟಾಗುವುದಿಲ್ಲವೆಂಬ ಭಾವನೆ ತಾಲೂಕಿನ ರೈತರಲ್ಲಿದೆ. ಹಾಗಾಗಿ ಶೀಘ್ರದಲ್ಲೇ ನೀರು ಹರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆ.ಸಿ.ಹೊರಕೇರಪ್ಪ, ತಾಲೂಕು ಅಧ್ಯಕ್ಷ ಬಿಒ ಶಿವಕುಮಾರ್, ಯುವ ಘಟಕದ ಅಧ್ಯಕ್ಷ ಚೇತನ್ ಯಳನಾಡು, ಎಚ್.ದಸ್ತಗಿರಿಸಾಬ್, ತಿಪ್ಪೇಸ್ವಾಮಿ, ಮೇಟಿಕುರ್ಕೆ, ಲಕ್ಷ್ಮಿಕಾಂತ್, ಮರದ ಮುತ್ತು, ಶಶಿಕಲಾ, ಅಜಯ್, ಶ್ರೀನಿವಾಸ್, ಅನ್ವರ್ ಅಲಿ, ರಮೇಶ್, ಮುನಿಸ್ವಾಮಿ, ಈರದಿಮ್ಮಯ್ಯ, ಈಶ್ವರಪ್ಪ, ಪ್ರಸನ್ನ ಮುಂತಾದವರು ಹಾಜರಿದ್ದರು.