ಸಾಲಕ್ಕೆ ಜಮಾ ಮಾಡಿದ್ದ ಹಣ ಕಕ್ಕಿಸಿದ ರೈತ ಸಂಘ!

| Published : May 21 2024, 12:37 AM IST

ಸಾರಾಂಶ

ಸಾಮಾಜಿಕ ನ್ಯಾಯದ ಗೃಹಲಕ್ಷ್ಮಿ, ಅಂಗವಿಕಲರು, ವೃದ್ಧಾಪ್ಯ, ವಿಧವಾ ವೇತನ, ಉದ್ಯೋಗ ಖಾತ್ರಿ ಕೂಲಿ ಹಣ ಸೇರಿದಂತೆ ಸರ್ಕಾರದ ಯಾವುದೇ ಸಬ್ಸಿಡಿ ಹಣವನ್ನು ಸಾಲಕ್ಕೆ ಮುಟ್ಟುಗೋಲು ಹಾಕದಂತೆ ಸೂಚನೆ ಇದೆ. ಹೀಗಿದ್ದರೂ ಬಡವರ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಂಡ ತಾಲೂಕಿನ ಆನಗೋಡು ಗ್ರಾಮದ ವಿಜಯ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಗರದಲ್ಲಿ ಸೋಮವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.

- ರೈತ ಸಂಘ-ಹಸಿರು ಸೇರೆ ಹೋರಾಟಕ್ಕೆ ಜಯ । ಆನಗೋಡು ವಿಜಯ ಬ್ಯಾಂಕ್‌ನಲ್ಲಿ ನಾಗಮ್ಮಗೆ ಆಗಿದ್ದ ಅನ್ಯಾಯ

- ದಾವಣಗೆರೆ ತಾಲೂಕು ಕಚೇರಿ ಎದುರು ಸಂಘಟನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ಪ್ರತಿಭಟನೆ

- - - - ಸಾಮಾಜಿಕ ಭದ್ರತೆ, ಉದ್ಯೋಗ ಖಾತ್ರಿ ಕೂಲಿ, ಸಬ್ಸಿಡಿ ಹಣ ಸಾಲಕ್ಕೆ ಮುಟ್ಟುಗೋಲು ಹಾಕದಂತೆ ತಾಕೀತು - ಲೀಡ್ ಬ್ಯಾಂಕ್ ಅಲ್ಲ, ಆನಗೋಡು ವಿಜಯ ಬ್ಯಾಂಕ್ ವ್ಯವಸ್ಥಾಪಕರೇ ಹಣ ತರಲೆಂದು ರೈತರ ಪಟ್ಟು

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಸಾಮಾಜಿಕ ನ್ಯಾಯದ ಗೃಹಲಕ್ಷ್ಮಿ, ಅಂಗವಿಕಲರು, ವೃದ್ಧಾಪ್ಯ, ವಿಧವಾ ವೇತನ, ಉದ್ಯೋಗ ಖಾತ್ರಿ ಕೂಲಿ ಹಣ ಸೇರಿದಂತೆ ಸರ್ಕಾರದ ಯಾವುದೇ ಸಬ್ಸಿಡಿ ಹಣವನ್ನು ಸಾಲಕ್ಕೆ ಮುಟ್ಟುಗೋಲು ಹಾಕದಂತೆ ಸೂಚನೆ ಇದೆ. ಹೀಗಿದ್ದರೂ ಬಡವರ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಂಡ ತಾಲೂಕಿನ ಆನಗೋಡು ಗ್ರಾಮದ ವಿಜಯ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಗರದಲ್ಲಿ ಸೋಮವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.

ತಾಲೂಕು ಕಚೇರಿ ಎದುರು ಸಂಘಟನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಇತರರ ನೇತೃತ್ವದಲ್ಲಿ ಬ್ಯಾಂಕ್‌ಗಳಿಂದ ಬಾಧಿತರಾದ ರೈತರು, ಗ್ರಾಮೀಣರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಬ್ಯಾಂಕ್‌ ವ್ಯವಸ್ಥಾಪಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಹಸೀಲ್ದಾರ್ ಡಾ. ಅಶ್ವತ್ಥ್‌ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಅರ್ಪಿಸಿದರು.

ಹಣ ಮುಟ್ಟುಗೋಲಿಗೆ ಕಿಡಿ:

ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿ, ದಾವಣಗೆರೆ ತಾಲೂಕು ಹೊನ್ನೂರು ಗ್ರಾಮದ ನಾಗಮ್ಮ ರಮೇಶ ಎಂಬುವರು ಅಂಗವಿಕಲರ ಕಲ್ಯಾಣ ಇಲಾಖೆಯಿಂದ ₹35 ಸಾವಿರ ಸಹಾಯಧನ, ₹65 ಸಾವಿರ ಸಾಲ ಸೇರಿ ₹1 ಲಕ್ಷ ಪಡೆದಿದ್ದರು. ಈಗಾಗಲೇ ₹50 ಸಾವಿರ ಸಾಲ ಮರು ಪಾವತಿಸಿದ್ದಾರೆ. ಉಳಿದ ₹15 ಸಾವಿರ ಕಾರಣಾಂತರದಿಂದ ಕಟ್ಟಲಾಗಿರಲಿಲ್ಲ. ಈಗ ₹15 ಸಾವಿರ ಬಾಕಿಗೆ ಗೃಹಲಕ್ಷ್ಮಿ, ಉದ್ಯೋಗ ಖಾತ್ರಿ, ಅಂಗವಿಕಲರ ವೇತನ ಇತರೆ ಎಲ್ಲ ಬಗೆ ಯೋಜನೆಗಳ ಸಬ್ಸಿಡಿ ಹಣವನ್ನೂ ಆನಗೋಡು ವಿಜಯ ಬ್ಯಾಂಕ್ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಆರೋಪಿಸಿದರು.

ಬ್ಯಾಂಕ್ ವ್ಯವಸ್ಥಾಪಕ 6 ತಿಂಗಳಿಂದಲೂ ಗ್ರಾಹಕರು, ಸಾರ್ವಜನಿಕರೊಂದಿಗೆ ಉದ್ಧಟತನದ ವರ್ತನೆ ತೋರುತ್ತಿದ್ದಾರೆ. ಗ್ರಾಹಕರು ತಿಳಿ ಹೇಳಿದ್ದರೂ ವರ್ತನೆ ತಿದ್ದಿಕೊಳ್ಳುತ್ತಿಲ್ಲ. ಇಂತಹ ಅಧಿಕಾರಿ ವಿರುದ್ಧ ರಾಜ್ಯ ಸರ್ಕಾರ ಮೊದಲು ಕ್ರಮ ಜರುಗಿಸಲಿ ಎಂದು ತಾಕೀತು ಮಾಡಿದರು.

ಹಣ ಖಾತೆಗೆ ಜಮಾ:

ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ತಹಸೀಲ್ದಾರ್ ಡಾ.ಅಶ್ವತ್ಥ್ ಅವರು ಲೀಡ್ ಬ್ಯಾಂಕ್ ವ್ಯವಸ್ಥಾಪಕರನ್ನು ಸ್ಥಳಕ್ಕೆ ಕರೆಸಿ, ಹೊನ್ನೂರಿನ ನಾಗಮ್ಮ ಅವರ ಖಾತೆಯಿಂದ ಮುಟ್ಟುಗೋಲು ಹಾಕಿಕೊಂಡ ಹಣವನ್ನು ತಕ್ಷಣ ಅವರ ಖಾತೆಗೆ ಜಮಾ ಮಾಡಬೇಕು. ಯಾವುದೇ ಬಗೆಯ ಯೋಜನೆ ಅಥವಾ ಸಬ್ಸಿಡಿ ಹಣ ಗ್ರಾಹಕರ ಸಾಲದ ಖಾತೆಗೆ ಜಮಾ ಮಾಡದಂತೆ ತಕ್ಷಣವೇ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಮೌಖಿಕವಾಗಿ ಸೂಚಿಸಿದರು.

₹35 ಸಾವಿರ ವಾಪಸ್‌:

ನಾಗಮ್ಮ ಅವರ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡುವಂತೆ ತಹಸೀಲ್ದಾರ್ ನೀಡಿದ ಸೂಚನೆಗೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಸಮ್ಮತಿಸಿದರು. ಆಗ, ಆಕ್ಷೇಪಿಸಿದ ರೈತರು, ಆನಗೋಡು ವಿಜಯ ಬ್ಯಾಂಕ್‌ ವ್ಯವಸ್ಥಾಪಕರೇ ಸ್ಥಳಕ್ಕೆ ಬಂದು, ನಾಗಮ್ಮನಿಗೆ ಹಣ ನೀಡಬೇಕೆಂದು ಪಟ್ಟುಹಿಡಿದರು. ಕಡೆಗೆ ಬ್ಯಾಂಕ್ ಮ್ಯಾನೇಜರ್‌ಗೆ ಸ್ಥಳಕ್ಕೆ ಕರೆಸಿ, ₹35 ಸಾವಿರವನ್ನು ನಾಗಮ್ಮ ಅವರಿಗೆ ನೀಡಲಾಯಿತು. ನಂತರವಷ್ಟೇ ಪ್ರತಿಭಟನಾಕಾರರು ಹೋರಾಟ ಹಿಂಪಡೆದರು.

ರೈತರಾದ ಹೊನ್ನೂರು ನಾಗಮ್ಮ ರಮೇಶ, ರೈತ ಮುಖಂಡರಾದ ಆಲೂರು ಪರಶುರಾಮ, ಗಂಡುಗಲಿ, ಯರವ ನಾಗತಿಹಳ್ಳಿ ಪೂಜಾರ ಪರಮೇಶ್ವರಪ್ಪ, ಗುಮ್ಮನೂರು ರುದ್ರೇಶ, ಭೀಮೇಶ, ಶಿವಪುರ ಕೃಷ್ಣಮೂರ್ತಿ, ಚಿಕ್ಕಮಲ್ಲನಹೊಳೆ ಚಿರಂಜೀವಿ ಇತರರು ಇದ್ದರು.

- - -

ಕೋಟ್‌

ಸ್ವತಃ ಸಿಎಂ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಸಹ ಬಡವರ ಸಾಲದ ಖಾತೆಗೆ ಯಾವುದೇ ಯೋಜನೆ ಹಣವನ್ನು ಜಮಾ ಮಾಡದಂತೆ ಹೇಳಿದ್ದಾರೆ. ಆದರೂ, ರಾಜ್ಯದ ಬಹುತೇಕ ಬ್ಯಾಂಕ್‌ಗಳು ಸ್ಪಂದಿಸುತ್ತಿಲ್ಲ. ಬ್ಯಾಂಕ್‌ಗಳಿಂದ ಬಾಧಿತರಾದವರ ಪರವಾಗಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹೋರಾಟಕ್ಕೆ ಸಜ್ಜಾಗಿದೆ

- ಹುಚ್ಚವ್ವನಹಳ್ಳಿ ಮಂಜುನಾಥ, ರಾಜ್ಯಾಧ್ಯಕ್ಷ, ರೈತ ಸಂಘ-ಹಸಿರು ಸೇನೆ

- - -

-20ಕೆಡಿವಿಜಿ3, 4:

ದಾವಣಗೆರೆ ತಾಲೂಕು ಕಚೇರಿ ಎದುರು ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಡಾ.ಅಶ್ವತ್ಥ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.