ಸಾಗುವಳಿ ಚೀಟಿ ನೀಡುತ್ತಿಲ್ಲ. ಅರಣ್ಯ ಇಲಾಖೆ ಸಾಗುವಳಿ ಚೀಟಿಗೆ ಎನ್‌ಒಸಿ ನೀಡುತ್ತಿಲ್ಲ. ಬಂಡೀಪುರ ಒಳಗೆ ಹಾಗೂ ಹೊರಗಿರುವ ರೆಸಾರ್ಟ್ ಹಾಗೂ ಹೋಂ ಸ್ಟೇಗಳನ್ನು ಕೂಡಲೇ ತೆರವುಗೊಳಿಸಬೇಕು.
ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ
ರೈತರ ಹಾಗೂ ಸಾರ್ವಜನಿಕರ ನಾನಾ ಸಮಸ್ಯೆ ಬಗೆಹರಿಸುವಲ್ಲಿ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಕೆ.ಎಸ್. ಪುಟ್ಟಣ್ಣಯ್ಯ ಬಣದ ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.ಪಟ್ಟಣದ ಪ್ರವಾಸಿ ಮಂದಿರದಿಂದ ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ನೇತೃತ್ವದಲ್ಲಿ ರೈತಸಂಘದ ಕಾರ್ಯಕರ್ತರು ಮೆರವಣಿಗೆ ಆರಂಭಿಸಿ ಜಿಲ್ಲಾಡಳಿತ,ತಾಲೂಕು ಆಡಳಿತ ಹಾಗೂ ಸರ್ಕಾರಗಳ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು.ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ಸಾಗುವಳಿ ಚೀಟಿ ನೀಡುತ್ತಿಲ್ಲ. ಅರಣ್ಯ ಇಲಾಖೆ ಸಾಗುವಳಿ ಚೀಟಿಗೆ ಎನ್‌ಒಸಿ ನೀಡುತ್ತಿಲ್ಲ. ಬಂಡೀಪುರ ಒಳಗೆ ಹಾಗೂ ಹೊರಗಿರುವ ರೆಸಾರ್ಟ್ ಹಾಗೂ ಹೋಂ ಸ್ಟೇಗಳನ್ನು ಕೂಡಲೇ ತೆರವುಗೊಳಿಸಬೇಕು. ಸಫಾರಿ ಮತ್ತೆ ಆರಂಭಿಸಿರುವುದು ಸರಿಯಲ್ಲ. ರಾಜ್ಯ ಸರ್ಕಾರಿ ಸಫಾರಿ ಆರಂಭಿಸಿದ ವಿಷಯ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.
ಕಾಡು ಪ್ರಾಣಿಗಳಿಂದಾಗುವ ಸಾವು, ರೈತರ ಫಸಲಿಗೆ ವೈಜ್ಞಾನಿಕ ಪರಿಹಾರ ನೀಡಬೇಕು. ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಬೇಕು. ಸಕಾಲದಲ್ಲಿ ಪರಿಹಾರ ರೈತರ ಖಾತೆಗೆ ಜಮಾ ಮಾಡಬೇಕು. ಕಾಡು ಪ್ರಾಣಿಗಳಿಂದ ಸಾವನ್ನಪ್ಪಿದ ಕುಟುಂಬದ ವ್ಯಕ್ತಿಗೆ ಸರ್ಕಾರಿ ಉದ್ಯೋಗ ನೀಡಬೇಕು ಹಾಗೂ ರೈತನ ಮಕ್ಕಳಿಗೆ ಓದಿನ ಖರ್ಚು ಸರ್ಕಾರ ಭರಿಸಬೇಕು ಎಂದು ಆಗ್ರಹಿಸಿದರು.ತಾಲೂಕಿನ ಹುತ್ತೂರು ಕೆರೆಯಿಂದ ಮುಂದಿನ ಕೆರೆಗಳಿಗೆ ನೀರು ತುಂಬಿಸದೇ ನಿರ್ಲಕ್ಷ್ಯ ವಹಿಸಿದ ತಾಲೂಕು ಆಡಳಿತದ ವಿರುದ್ಧ ರೈತಸಂಘದ ಧರಣಿ ನಡೆಸಿದಾಗ ಕಳೆದ ಡಿಸೆಂಬರ್ ಮೊದಲ ವಾರದಲ್ಲೇ ನೀರು ತುಂಬಿಸುವುದಾಗಿ ಜಿಲ್ಲಾಡಳಿತ ಭರವಸೆ ನೀಡಿತ್ತು. ಆದರೆ ಇಲ್ಲಿಯ ತನಕ ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಎಂ.ಎಸ್. ತನ್ಮಯ್ ಭೇಟಿ ನೀಡಿ, ಸಮಸ್ಯೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಅಂತ್ಯಗೊಂಡಿತು.ಕೃಷಿ ಸಹಾಯಕ ನಿರ್ದೇಶಕ ಶಶಿಧರ್, ಕಾವೇರಿ ನೀರಾವರಿ ನಿಗಮದ ಎಇಇ ಮಹೇಶ್, ಆರ್‌ಎಫ್‌ಒ ಶಿವಕುಮಾರ್ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ ಮನವಿ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ರೈತಸಂಘದ ಮುಖಂಡರಾದ ರಾಜಶೇಖರ್, ನಾಗರಾಜು, ಪ್ರಕಾಶ್, ಸಿದ್ದರಾಜು, ಬಸಮ್ಮ, ಸಿದ್ದರಾಜು, ಶಿವಣ್ಣ, ಮಹದೇವಸ್ವಾಮಿ, ಪ್ರಸಾದ್, ಮಹೇಂದ್ರ ಸೇರಿದಂತೆ ಹಲವರಿದ್ದರು.---------6ಜಿಪಿಟಿ2
ಗುಂಡ್ಲುಪೇಟೆ ತಾಲೂಕು ಕಚೇರಿ ಮುಂದೆ ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.