ರೈತರ ಜೀವನಾಡಿ ಕೆಆರ್‌ಎಸ್ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣಕ್ಕೆ ರೈತ ಸಂಘ ವಿರೋಧ

| Published : Jan 19 2025, 02:20 AM IST / Updated: Jan 19 2025, 09:09 AM IST

ರೈತರ ಜೀವನಾಡಿ ಕೆಆರ್‌ಎಸ್ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣಕ್ಕೆ ರೈತ ಸಂಘ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಅಮ್ಯೂಸ್‌ಮೆಂಟ್ ಪಾರ್ಕ್ ಸಂಬಂಧಿಸಿದಂತೆ ಅಣೆಕಟ್ಟೆ, ಪರಿಸರ, ರೈತರಿಗೆ, ಅಣೆಕಟ್ಟಿನ ವ್ಯಾಪ್ತಿ ಗ್ರಾಮಗಳಿಗೆ ಧಕ್ಕೆಯಾಗುವುದರ ಜೊತೆಗೆ ಗ್ರಾಮಗಳ ಪರಿಸರ, ಕೃಷಿ ಬದುಕು ಪಲ್ಲಾಟವಾಗುತ್ತದೆ. ಈ ಯೋಜನೆಯಿಂದ ಕೆ.ಆರ್.ಎಸ್. ಪ್ರದೇಶದ ಯುವ ಸಮೂಹಗಳ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

 ಮಂಡ್ಯ : ರೈತರ ಜೀವನಾಡಿ ಕೆಆರ್‌ಎಸ್ ತಳದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ ವಿರೋಧಿಸಿ ರೈತರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ರೈತರು ಮತ್ತು ಸಂಘಟನೆಗಳ ಹಾಗೂ ಜಿಲ್ಲಾ ರೈತಹಿತ ರಕ್ಷಣಾ ಸಮಿತಿ ಪದಾಧಿಕಾರಿಗಳು ರಾಜ್ಯ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿ ಡೀಸಿ ಮೂಲಕ ಮನವಿ ಸಲ್ಲಿಸಿದರು.

ಜಿಲ್ಲಾ ರೈತಹಿತ ರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ, ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ, ಯೋಜನೆಗೆ ರೈತರ 24 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಸಭೆ ನಡೆಸಿ ತೀರ್ಮಾನಿಸಿರುವುದಕ್ಕೆ ತೀವ್ರವಾಗಿ ವಿರೋಧಿಸಿದರು.

ಕೆಆರ್‌ಎಸ್ ಡ್ಯಾಂ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಿಸಲು ವಾಹನಗಳ ಪಾರ್ಕಿಂಗ್‌ಗೆ 24 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಸಂಬಂಧ ರೈತರ ಜೊತೆ ಸಭೆ ಮಾಡಲಾಗಿದೆ. ಇದು ಸರಿಯಲ್ಲ. ಈ ಯೋಜನೆ ವಿರೋಧಿಸಿ ಸಂಬಂಧಪಟ್ಟವರಿಗೆ ಜಿಲ್ಲಾಧಿಕಾರಿಗಳ ಮೂಲಕ 2024ರ ಸೆ.2ರಂದು ಪತ್ರ ನೀಡಿ ಮನವಿ ಮಾಡಲಾಗಿದೆ ಎಂದರು.

ಅಮ್ಯೂಸ್‌ಮೆಂಟ್ ಪಾರ್ಕ್ ಸಂಬಂಧಿಸಿದಂತೆ ಅಣೆಕಟ್ಟೆ, ಪರಿಸರ, ರೈತರಿಗೆ, ಅಣೆಕಟ್ಟಿನ ವ್ಯಾಪ್ತಿ ಗ್ರಾಮಗಳಿಗೆ ಧಕ್ಕೆಯಾಗುವುದರ ಜೊತೆಗೆ ಗ್ರಾಮಗಳ ಪರಿಸರ, ಕೃಷಿ ಬದುಕು ಪಲ್ಲಾಟವಾಗುತ್ತದೆ. ಈ ಯೋಜನೆಯಿಂದ ಕೆ.ಆರ್.ಎಸ್. ಪ್ರದೇಶದ ಯುವ ಸಮೂಹಗಳ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 120 ವರ್ಷಗಳ ಅಣೆಕಟ್ಟಿನ ಭದ್ರತೆಗೆ ನೇರ ಪರಿಣಾಮ ಎದುರಾಗುತ್ತದೆ. ಕೃಷಿ ಬದುಕು ನಾಶವಾಗುತ್ತದೆ. ಪ್ರವಾಸೋದ್ಯಮದ ಹೆಸರಿನಲ್ಲಿ ಅನೇಕ ಕೆಟ್ಟ ಪರಿಣಾಮಗಳು ಉಂಟಾಗುತ್ತದೆ ಎಂದು ಎಚ್ಚರಿಸಿದರು.

ಅಣೆಕಟ್ಟಿನ ಬಳಿ ದಟ್ಟಣೆಯ ಸಾರ್ವಜನಿಕ ಚಟುವಟಿಕೆಗಳು ನಡೆಯಬಾರದು. ವಾಹನಗಳ ಪ್ರವೇಶದಿಂದ ಅಮ್ಲಜನಕ ಉತ್ಪಾದನೆಗೆ ತಡೆಯಾಗುತ್ತದೆ. ಹಸಿರು ವಲಯ ನಾಶವಾಗುತ್ತದೆ. ಈ ಯೋಜನೆ ಕೈಬಿಡಲು ಒತ್ತಾಯಿಸುತೇವೆ ಎಂದು ಆಗ್ರಹಿಸಿದರು.

ಜೂನ್ ಮೊದಲ ಮೈಷುಗರ್ ಆರಂಭವಾಗಲಿ:

ರೈತರ ಆರ್ಥಿಕ ಜೀವನಾಡಿ ಮೈಷುಗರ್ ಕಾರ್ಖಾನೆಯನ್ನು 2025ನೇ ಸಾಲಿನ ಜೂನ್ ಮೊದಲ ವಾರವೇ ಆರಂಭಮಾಡಿ ರೈತರ ಕಬ್ಬನ್ನು ಸಮರ್ಪಕವಾಗಿ ನುರಿಸಬೇಕು. ಯಾವುದೇ ತೊಂದರೆ ಆಗದಂತೆ ರೈತರ ಹಿತಕಾಯಬೇಕು ಎಂದು ಜಿಲ್ಲಾಧಿಕಾರಿಗಳಿಗೆ ರೈತರು ಒತ್ತಾಯಿಸಿದರು.

ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇವೆ. ಜೂನ್ ಕೊನೆ ವಾರದಲ್ಲಿ ಕಾರ್ಖಾನೆ ಆರಂಭವಾಗಬಹುದು ಎಂದು ಹೇಳಿದ್ದಾರೆ. ಸರ್ಕಾರದೊಂದಿಗೆ ಮಾತನಾಡುತೇವೆ ಎಂದು ಹೇಳಿದ್ದಾರೆ ಎಂದು ಸುನಂದಾ ಜಯರಾಂ ತಿಳಿಸಿದರು.

ಮೈಶುಗರ್ ವ್ಯಾಪ್ತಿಯಲ್ಲಿ ಹೆಚ್ಚು ಕಬ್ಬನ್ನು ಬೆಳೆಯಲಾಗಿದೆ. ರೈತರ ಅನುಕೂಲಕ್ಕಾಗಿ ಬಹುಬೇಗ ಕಾರ್ಖಾನೆ ಆರಂಭವಾಗಿ, ಕಬ್ಬು ನುರಿಸಲಿ, ವಿಳಂಭನೀತಿ ಅನುಸರಿಬಾರದು ಎಂದು ಒತ್ತಾಯಿಸುತ್ತೇವೆ ಎಂದರು.

ಕಳೆದ ಬಾರಿ 2 ಸಾಲಿನಲ್ಲಿ ಕಬ್ಬು ಆರೆಯುವಿಕೆ ವಿಳಂಭವಾದ ಕಾರಣ ರೈತರಿಗೆ ಸಾಕಷ್ಟು ನಷ್ಟವಾಗಿದೆ. ರೈತರು ಮತ್ತು ಸಂಘಟನೆ ಮುಖಂಡರು ಕಾರ್ಖಾನೆಗೆ ಬಂದು ಅಧ್ಯಕ್ಷರೊಂದಿಗೆ ಚರ್ಚಿಸುತ್ತೇವೆ. ಕಾರ್ಖಾನೆಯನ್ನು ವೀಕ್ಷಣೆ ಮಾಡಿ ಪರಿಶೀಲಿಸಲಿದ್ದೇವೆ. ಈ ವಿಚಾರದಲ್ಲಿ ಅಧ್ಯಕ್ಷರು ವಿಳಂಬ ಮಾಡಬಾರದು ಎಂದು ಸಲಹೆ ನೀಡಿದರು.

ಟನ್ ಕಬ್ಬಿಗೆ 4500 ರು. .ನೀಡುವಂತೆ ಹಲವು ವರ್ಷಗಳಿಂದ ಒತ್ತಾಯಿಸಿಕೊಂಡು ಬರುತ್ತಿದ್ದೇವೆ, ರಾಜ್ಯ ಸರ್ಕಾರ ಇದರತ್ತ ಗಮನ ನೀಡಬೇಕು. ಸ್ವಾಮಿನಾಥನ್ ವರದಿ ಪ್ರಕಾರ ಬೆಲೆ ನಿಗದಿ ಮಾಡಲಿ ಎಂದು ಆಗ್ರಹಿಸಿದರು.

ಈ ವೇಳೆ ರೈತ ಮುಖಂಡರಾದ ಇಂಡವಾಳು ಚಂದ್ರಶೇಖರ್, ಬೋರಯ್ಯ, ಎಂ.ವಿ.ಕೃಷ್ಣ, ಮುದ್ದೇಗೌಡ, ಶಿವಳ್ಳಿ ಚಂದ್ರಶೇಖರ್, ಬಾಲಚಂದ್ರ, ಪ್ರಕಾಶ್, ನಾಗರಾಜು, ನಾರಾಯಣಸ್ವಾಮಿ, ಕಮಲಾ, ತನುಜಾ, ಸತ್ಯಭಾಮ, ಕೃಷ್ಣೇಗೌಡ ಮತ್ತಿತರರಿದ್ದರು.