ಮಗನಿಗೆಂದು ಗುರಿಯಿಟ್ಟ ಕೋವಿಗೆ ಪತ್ನಿ ಬಲಿ ; ಆಸಿಡ್ ಸೇವಿಸಿ ಹೆದರಿದ ಪತಿಯೂ ಆತ್ಮಹತ್ಯೆ

| Published : Jan 19 2025, 02:20 AM IST / Updated: Jan 19 2025, 09:13 AM IST

ಸಾರಾಂಶ

ಮಗನಿಗೆಂದು ಗುರಿಯಿಟ್ಟ ಕೋವಿಗೆ ಪತ್ನಿ ಬಲಿಯಾದ ಹಾಗೂ ಇದರಿಂದ ಹೆದರಿದ ಪತಿ ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ನೆಲ್ಲೂರು ಕಮ್ರಾಜೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

 ಸುಳ್ಯ :  ಮಗನಿಗೆಂದು ಗುರಿಯಿಟ್ಟ ಕೋವಿಗೆ ಪತ್ನಿ ಬಲಿಯಾದ ಹಾಗೂ ಇದರಿಂದ ಹೆದರಿದ ಪತಿ ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ನೆಲ್ಲೂರು ಕಮ್ರಾಜೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ನಿವಾಸಿ , ಕೃಷಿಕ ರಾಮಚಂದ್ರ ಗೌಡ ( 54 ) ಹಾಗೂ ಅವರ ಪತ್ನಿ ವಿನೋದಾ (43 ) ಮೃತಪಟ್ಟ ದಂಪತಿ. ರಾಮಚಂದ್ರ ಗೌಡ ಇತ್ತೀಚೆಗೆ ಕುಡಿದು ಬಂದು ಮನೆಯಲ್ಲಿ ಜಗಳವಾಡುತ್ತಿದ್ದರು. ಅವರಿಗೆ ಅಡಕೆ, ರಬ್ಬರ್ ಹೀಗೆ ಸುಮಾರು 5 ಎಕರೆಯಷ್ಟು ಕೃಷಿ ಭೂಮಿ ಇದೆ. ಬೆಳೆಗಳಿಗೆ ಕಾಡುಪ್ರಾಣಿಗಳ ಉಪಟಳವಿರುವುದರಿಂದ ಪರವಾನಗಿ ಹೊಂದಿರುವ ಕೋವಿ ಅವರಲ್ಲಿತ್ತು. ದಂಪತಿಗೆ ಪ್ರಶಾಂತ, ನಿಶಾಂತ ಮತ್ತು ರಂಜಿತ್ ಎಂಬ ಮೂವರು ಪುತ್ರರಿದ್ದಾರೆ.

ಘಟನೆಯ ವಿವರ: ಕೆಲವು ತಿಂಗಳ ಹಿಂದೆ ರಾಮಚಂದ್ರ ಕುಡಿದು ಬಂದು ಪತ್ನಿಯೊಡನೆ ಜಗಳವಾಡುತ್ತಿದ್ದಾಗ ಮಧ್ಯಪ್ರವೇಶಿಸಿದ ಮಕ್ಕಳನ್ನು ಹೆದರಿಸಲು ಕೋವಿ ಹಿಡಿದುಕೊಂಡು ಅಟ್ಟಾಡಿಸಿದ್ದರು. ಈ ಘಟನೆ ಪೊಲೀಸ್ ಠಾಣೆಯ ಮೆಟ್ಟಿಲೇರಿ ಪೊಲೀಸರ ಸೂಚನೆಯಂತೆ ಮನೆಯಲ್ಲಿದ್ದ ಕೋವಿಯನ್ನು ಸುಳ್ಯದ ಕೋವಿ ಮಳಿಗೆಯಲ್ಲಿ ಮೂರು ತಿಂಗಳ ಅವಧಿಗೆ ಡೆಪಾಸಿಟ್ ಇಡಲಾಗಿತ್ತು. ಅವಧಿ ಮುಗಿದ ಹಿನ್ನೆಲೆಯಲ್ಲಿ ವಿನೋದಾ ಅವರ ಕೋರಿಕೆ ಮೇರೆಗೆ ಕೋವಿ ಬಿಡಿಸಿಕೊಳ್ಳಲಾಗಿತ್ತು. 

ಕೋವಿಯನ್ನು ಮನೆಗೆ ವಾಪಸ್ ತಂದು ಮೂರು ದಿನವಷ್ಟೇ ಆಗಿತ್ತು. ಶುಕ್ರವಾರ ರಾತ್ರಿ ಕುಡಿದು ಬಂದು 10 ಗಂಟೆಯ ನಂತರ ಪತ್ನಿ ವಿನೋದಾ ಹಾಗೂ ಪುತ್ರ ಪ್ರಶಾಂತ್ ಜೊತೆ ರಾಮಚಂದ್ರ ಗೌಡ ಜಗಳ ಆರಂಭಿಸಿದ್ದಾರೆ. ಜಗಳವಾಡುವುದನ್ನು ವಿರೋಧಿಸಿದ ಪ್ರಶಾಂತ್‌ನತ್ತ ರಾಮಚಂದ್ರ ಗೌಡರು ಕೋವಿಯೊಂದಿಗೆ ಮುನ್ನುಗ್ಗಿದ್ದಾರೆ. ಇದನ್ನು ಕಂಡ ಪತ್ನಿ ವಿನೋದಾ ಅಡ್ಡ ಬಂದರು. ಗಂಡನನ್ನು ತಡೆಯಲು ಪ್ರಯತ್ನಿಸಿ, ಅವರು ಮಲಗುತ್ತಿದ್ದ ಕೊಠಡಿಯ ಕಡೆಗೆ ದೂಡಿಕೊಂಡು ಬಂದಿದ್ದಾರೆ. ಆ ವೇಳೆ ರಾಮಚಂದ್ರ ಗೌಡರು ಕೋವಿಯ ಟ್ರಿಗರ್ ಎಳೆದಿದ್ದಾರೆ. ಗುಂಡು ವಿನೋದಾ ಅವರ ಎದೆಯನ್ನು ಹೊಕ್ಕು ಅವರು ಅಲ್ಲೇ ಕುಸಿದುಬಿದ್ದು ಪ್ರಾಣಬಿಟ್ಟಿದ್ದಾರೆ. ತಾಯಿ ಮೃತಪಟ್ಟಿದ್ದನ್ನು ಕಂಡ ಮಗ ಪ್ರಶಾಂತ್ ತಂದೆಯಿಂದ ಕೋವಿ ಕಸಿದು ಅಡಗಿಸಿಟ್ಟು ಸಮೀಪದ ಮನೆಯತ್ತ ಓಡಿದ್ದಾನೆ. 

ಈ ವೇಳೆಗೆ ರಾಮಚಂದ್ರ ಗೌಡರಿಗೆ ಕುಡಿತದ ನಶೆ ಇಳಿದಿದೆ. ತಾನು ಹಾರಿಸಿದ ಗುಂಡಿಗೆ ಪತ್ನಿ ಪ್ರಾಣಬಿಟ್ಟಿರುವುದನ್ನು ಕಂಡು ಹೆದರಿದ ರಾಮಚಂದ್ರ ಗೌಡ ರಬ್ಬರ್‌ಗೆ ಹಾಕಲೆಂದು ತಂದಿಟ್ಟಿದ್ದ ಆ್ಯಸಿಡ್‌ ಕುಡಿದು ಪತ್ನಿ ಬಿದ್ದಿದ್ದಲ್ಲಿಗೇ ಬಂದು ತಾವೂ ಪ್ರಾಣಬಿಟ್ಟಿದ್ದಾರೆ. ಘಟನೆ ನಡೆಯುವ ಸಂದರ್ಭ ಮನೆಯಲ್ಲಿ ಹಿರಿಮಗ ಪ್ರಶಾಂತ್ ಮಾತ್ರ ಇದ್ದನೆನ್ನಲಾಗಿದೆ. ಎರಡನೇ ಮಗ ನಿಶಾಂತ್ ಸುಳ್ಯದಲ್ಲಿದ್ದ ಹಾಗೂ ಕಿರಿಯಮಗ ರಂಜಿತ್ ಬೆಳ್ತಂಗಡಿ ತಾಲೂಕಿನ ಕ್ಷೇತ್ರವೊಂದಕ್ಕೆ ಹೋಗಿದ್ದನೆಂದು ತಿಳಿದುಬಂದಿದೆ. ಘಟನೆಯ ಬಗ್ಗೆ ರಾತ್ರಿಯೇ ವಿಷಯ ತಿಳಿದ ವಿಷಯ ಸ್ಥಳೀಯರಾದ ರಾಘವ ಕಂಜಿಪಿಲಿ ಹಾಗೂ ಹರೀಶ್ ಕಂಜಿಪಿಲಿ ಸ್ಥಳಕ್ಕೆ ಹೋಗಿದ್ದು ಪೊಲೀಸರು ಮಹಜರು ನಡೆಸಿ ಕ್ರಮ ಕೈಗೊಂಡಿದ್ದಾರೆ. ಶನಿವಾರ ಮಂಗಳೂರಿನಲ್ಲಿರುವ ವಿಧಿವಿಜ್ಞಾನ ತಜ್ಞರು, ಬೆರಳಚ್ಚು ತಜ್ಞರು ಆಗಮಿಸಿದರು. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ಡಿವೈಎಸ್ಪಿ ಅರುಣ್ ನಾಗೇಗೌಡ ಆಗಮಿಸಿದರು. ಸುಳ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಮನೆಗೆ ತಂದು ಅಂತ್ಯ ಸಂಸ್ಕಾರ ನಡೆಸಲಾಯಿತು.

ಸುಳ್ಯ ಸರ್ಕಲ್ ಇನ್‌ಸ್ಪೆಕ್ಟರ್‌ ತಿಮ್ಮಪ್ಪ ನಾಯ್ಕ್, ಎಸ್.ಐ.ಗಳಾದ ಸಂತೋಷ್ ಕುಮಾರ್, ಸರಸ್ವತಿ ತನಿಖೆಯ ನೇತೃತ್ವ ವಹಿಸಿದ್ದಾರೆ.