ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ರೈತಸಂಘ ಪ್ರತಿಭಟನೆ

| Published : Feb 14 2025, 12:33 AM IST

ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ರೈತಸಂಘ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಡಗಿ ಪಟ್ಟಣದ ರೈತ ಸಂಘದ ಕಾರ್ಯಾಲಯದಲ್ಲಿ ವಿಶ್ವಚೇತನ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ 89ನೇ ಜನ್ಮ ದಿನಾಚರಣೆ ಬಳಿಕ ಮೈಕ್ರೋ ಫೈನಾನ್ಸಗಳ ವಿರುದ್ಧ ಪಟ್ಟಣದಲ್ಲಿ ರೈತ ಸಂಘದ ಸದಸ್ಯರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬ್ಯಾಡಗಿ: ಪಟ್ಟಣದ ರೈತ ಸಂಘದ ಕಾರ್ಯಾಲಯದಲ್ಲಿ ವಿಶ್ವಚೇತನ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ 89ನೇ ಜನ್ಮ ದಿನಾಚರಣೆ ಬಳಿಕ ಮೈಕ್ರೋ ಫೈನಾನ್ಸಗಳ ವಿರುದ್ಧ ಪಟ್ಟಣದಲ್ಲಿ ರೈತ ಸಂಘದ ಸದಸ್ಯರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಪ್ರಜಾ ಪ್ರಭುತ್ವದ ಸಿದ್ಧಾಂತಗಳು ಬಡವರು, ರೈತರು, ಕೂಲಿ ಕಾರ್ಮಿಕರು, ಶೋಷಿತರನ್ನು ರಕ್ಷಿಸುವಲ್ಲಿ ವಿಫಲವಾಗುತ್ತಿವೆ. ಇನ್ಮುಂದೆ ಸುಮ್ಮನಿರಲು ಸಾಧ್ಯವಿಲ್ಲ. ರೈತ ಮಹಿಳೆಯರ ಮನೆಗೆ ಕಾಲಿಟ್ಟರೇ ಮೈಕ್ರೋ ಫೈನಾನ್ಸ ಸಿಬ್ಬಂದಿಗಳ ವಿರುದ್ಧ ನಾವೂ ಸಹ ಶಕ್ತಿ ಸಿದ್ಧಾಂತ ಅಳವಡಿಸಿ ಬಲ ಪ್ರಯೋಗಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅನಾಮಧೇಯ ಹಾಗೂ ಅನಧಿಕೃತ ಫೈನಾನ್ಸ್‌ಗಳ‍ು ಕಾರ್ಯನಿರ್ವಹಿಸುತ್ತಿವೆ. ಇನ್ನಿಲ್ಲದ ಬಡ್ಡಿ ಹಣವನ್ನು ಗೂಂಡಾಗಳ ಮೂಲಕ ದಬ್ಬಾಳಿಕೆ ನಡೆಸಿ ವಸೂಲಿಗಿಳಿದಿವೆ, ಬಡ್ಡಿ ಕಟ್ಟಲು ಹಣ ಇಲ್ಲವೆಂದರ ಮನೆಯಲ್ಲಿ ಕೈಗೆ ಸಿಕ್ಕ ಸಾಮಾನುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಇವೆಲ್ಲದಕ್ಕೂ ಆರ್.ಬಿ.ಐ.ನಿಯಮದಲ್ಲಿ ಇದಕ್ಕೆ ಅವಕಾಶವಿದೆಯೇ..? ಸಾಲ ಪಡೆದವರು ಮರ್ಯಾದೆಗೆ ಅಂಜಿ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಇಂತಹ ಅಮಾನವೀಯ, ಅನಾಗರಿಕ ಕೃತ್ಯಗಳು ನಡೆಯುತ್ತಿದ್ದರೂ ಸತ್ಯವನ್ನು ಮರೆ ಮಾಚಲು ಸುಗ್ರೀವಾಜ್ಞೆ ವಿಷಯ ಮುಂದಿಟ್ಟುಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಟಾಪಟಿಗಿಳಿದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ. ನೆರೆ-ಬರ ಸೇರಿದಂತೆ ಬೆಂಬಲ ಬೆಲೆ ಇಲ್ಲದೇ ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ಪರವಾಗಿ ನಿಲ್ಲಬೇಕಾಗಿದ್ದ ಸರ್ಕಾರಗಳು ಕೈಕಟ್ಟಿ ಕುಳಿತಿವೆ. ಇದರ ನಡುವೆ ಮೈಕ್ರೋ ಫೈನಾನ್ಸ ಕಂಪನಿಗಳು ರೈತರು ಹಾಗೂ ಜನರ ಜೀವ ಹಿಂಡುತ್ತಿವೆ. ಇಲ್ಲಿವಯರೆಗೂ ಹೇಳಿದ್ದು ಕೇಳಿದ್ದು ಮುಗಿದಿದೆ, ಇನ್ನು ಮುಂದೇ ಯಾವುದೇ ಮನವಿ ಸಂಧಾನ ನಡೆಸಲ್ಲ, ಬದಲಾಗಿ ಇಂತಹ ಕಂಪನಿಗಳ ವಿರುದ್ಧ ರೈತ ಸಂಘದ ವತಿಯಿಂದಲೇ ಡೈರೆಕ್ಟ್ ಆ್ಯಕ್ಷನ್ ಚಳವಳಿ ನಡೆಸಲು ನಿರ್ಧರಿಸಿದ್ದು, ಬ್ಯಾಡಗಿಯಲ್ಲಿ ಇದಕ್ಕೆ ಮುನ್ನುಡಿ ಇಟ್ಟಿದ್ದೇವೆ, ಹಣಕ್ಕಾಗಿ ಕಿರುಕುಳ ನೀಡಿದರೇ ಹುಷಾರ್ ಎಂದು ಎಚ್ಚರಿಸಿದರು.

ಯಾರು ಭಯಪಡಬೇಡಿ:ರುದ್ರನಗೌಡ ಕಾಡನಗೌಡ್ರ ಮಾತನಾಡಿ, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ ಹಾವಳಿಯಿಂದ ಜನರು ತತ್ತರಿಸಿದ್ದಾರೆ. ಬಡ್ಢಿ ದಂಧೆ ಸಹ ಎಗ್ಗಿಲ್ಲದೇ ಸಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕೆ ಈ ಘಟನೆಗಳೆ ಸಾಕ್ಷಿ. ಆದರೆ ಯಾರೂ ಹೆದರುವ ಅವಶ್ಯಕತೆ ಇಲ್ಲ, ಕಿರುಕುಳ ಹೆಚ್ಚಾದರೇ ಗ್ರಾಮ ಘಟಕದ ರೈತ ಸಂಘದ ಸದಸ್ಯರ ಗಮನಕ್ಕೆ ತರುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಸದಸ್ಯರು ರೈತ ಮುಖಂಡರು ಉಪಸ್ಥಿತರಿದ್ದರು.