ರೈತ ಸಂಘ ಪ್ರತಿಭಟನೆ: ಒತ್ತುವರಿ ತೆರವಿಗೆ ಬಂದ ಜೆಸಿಬಿಗಳು ಹಿಂದಕ್ಕೆ

| Published : Aug 25 2024, 02:04 AM IST

ರೈತ ಸಂಘ ಪ್ರತಿಭಟನೆ: ಒತ್ತುವರಿ ತೆರವಿಗೆ ಬಂದ ಜೆಸಿಬಿಗಳು ಹಿಂದಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಶೃಂಗಾರಬಾಗು, ಕಂಚುಗಾರ್ತಿ ಕಟ್ಟೆ ಸರ್ವೆ ನಂಬರ್ 16ರಲ್ಲಿ ಇರುವ 52 ಎಕರೆ ಜಮೀನನ್ನು ವಶಪಡಿಸಿಕೊಳ್ಳಲು ಅರಣ್ಯ ಇಲಾಖೆಗೆ ಮುಂದಾಗಿತ್ತು. ಬಡ ರೈತರು ಬಗರ್ ಹುಕ್ಕುಂ ಆಗಿ ಸಾಗುಮಾಡಿದ್ದ ಜಮೀನನ್ನು ಬಿಡಿಸಲು ಶನಿವಾರ ಕಾರ್ಯಚರಣೆಗೆ ಮುಂದಾದಾಗ ತಾಲೂಕಿನ ರೈತ ಸಂಘದ ಅಧ್ಯಕ್ಷ ಯಲೋದಹಳ್ಳಿ ರವಿಕುಮಾರ್ ನೇತೃತ್ವದಲ್ಲಿ ಸಂಘದ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆಯವರು ಜಮೀನನ್ನು ವಶ ಪಡಿಸಿಕೊಳ್ಳಲು ತಂದಿದ್ದ ಮೂರು ಜೆಸಿಬಿ ಯಂತ್ರಗಳನ್ನು ವಾಪಸ್ ಕಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಈ ಬಗ್ಗೆ ತಾಲೂಕು ರೈತ ಸಂಘ-ಹಸಿರು ಸೇನೆಯ ಅಧ್ಯಕ್ಷ ಯಲೋದಹಳ್ಳಿ ರವಿಕುಮಾರ್ ಮಾಹಿತಿ ನೀಡುತ್ತಾ, ಕಳೆದ 50-60 ವರ್ಷಗಳಿಂದ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗದ ಜನರು ಬಗರ್ ಹುಕ್ಕುಂ ಆಗಿ ಸಾಗುಮಾಡುತ್ತಿದ್ದ ಜಮೀನು ಇದಾಗಿದ್ದು, ಇದೇ ಪ್ರದೇಶದ ಕಂಚುಗಾರ್ತಿ ಕಟ್ಟೆಯಲ್ಲಿ 18 ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡು ವಾಸವಾಗಿವೆ ಎಂದು ತಿಳಿಸಿದರು.

ಅವರಿಗೆ ಮನೆಗಳನ್ನು ನಿರ್ಮಿಸಿಕೊಳ್ಳಲು 2.6 ಎಕರೆ ಭೂಮಿಯನ್ನು ಸರ್ಕಾರವೇ ಮಂಜೂರು ಮಾಡಿದ್ದು, ಇದಕ್ಕೆ ಸಂಬಂಧ ಪಟ್ಟ ಪಹಾಣಿ ಇದೆ. ಅರಣ್ಯ ಇಲಾಖೆಯವರು ಇವರನ್ನು ಬೆದರಿಸಿ ಅಲ್ಲಿಂದ ವಕ್ಕಲೆಬ್ಬಿಸಲು ಪ್ರಯತ್ನ ಮಾಡಿ, ಬಡ ರೈತರ ಮೇಲೆ ದಬ್ಬಾಳಿಕೆಯನ್ನು ಮಾಡುವುದು ಸರಿಯಲ್ಲ ಎಂದರು.

ಈ ಪ್ರದೇಶವು ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರಲಿದ್ದು, ಈ ಹಿಂದೆ ನಮ್ಮ ಕ್ಷೇತ್ರದ ಶಾಸಕರಾಗಿದ್ದ ಶಿವಮೂರ್ತಿ ನಾಯ್ಕ್ ಈ ಪ್ರದೇಶದಲ್ಲಿ ವಾಸವಾಗಿದ್ದ 18ಕುಟುಂಬಗಳ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿ ಕುಡಿಯುವ ನೀರಿಗೆ ಕೊಳವೆ ಬಾವಿಯನ್ನು ಕೊರೆಸಿ ಕೊಟ್ಟಿದ್ದರು ಎಂದರು.

ಶನಿವಾರ ಜಮೀನು ಒತ್ತುವರಿ ಮಾಡಲು ಬಂದಾಗ ಅರಣ್ಯ ಇಲಾಖೆಯ ಸಿಬ್ಭಂದಿಗಳು ಮತ್ತು ರೈತ ಸಂಘದ ಕಾರ್ಯಕರ್ತರೊಂದಿಗೆ ವಾದ-ವಿವಾದಗಳು ನಡೆಯುತ್ತಿದ್ದಾಗ ಸ್ಥಳಕ್ಕೆ ಬಸವಾಪಟ್ಟಣ ಪೊಲೀಸ್ ಠಾಣೆಯ ಸಬ್ಇನ್ಸ್ ಪೆಕ್ಟರ್ ವೀಣಾ ತಮ್ಮ ಸಿಬ್ಭಂದಿಗಳೊಂದಿಗೆ ಸ್ಥಳಕ್ಕೆ ಬಂದು ಎರಡು ಕಡೆಯವರಿಗೂ ಕಾನೂನು ರೀತಿಯಲ್ಲಿ ಬಗೆಹರಿಸಿಕೊಳ್ಳಲು ತಿಳಿಸಿದರು.

ಈ ಬಗ್ಗೆ ತಾಲೂಕು ರೈತಸಂಘ-ಹಸಿರು ಸೇನೆಯ ವತಿಯಿಂದ ಆಗಸ್ಟ್ 26ರಂದು ನ್ಯಾಯಲಯಕ್ಕೆ ಹೋಗಲಿದ್ದೇವೆ ಎಂದು ರೈತ ಸಂಘದ ಅಧ್ಯಕ್ಷ ರವಿಕುಮಾರ್ ತಿಳಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಪ್ರಮುಖರಾದ ಪ್ರಭಕರ್, ಹನುಮಂತಪ್ಪ, ಬಸವರಾಜ್, ಕುಮಾರ್, ಕುಬೇರನಾಯ್ಕ್ ಸೇರಿದಂತೆ ಬಗರ್ ಹುಕ್ಕುಂ ಸಾಗುಮಾಡಿದ ರೈತರು ಹಾಜರಿದ್ದರು