ಬಂಡೀಪುರ ಚೆಕ್‌ ಪೋಸ್ಟ್‌ ಬಳಿ ರೈತಸಂಘ ಪ್ರತಿಭಟನೆ

| Published : Nov 27 2024, 01:04 AM IST

ಸಾರಾಂಶ

ಬಂಡೀಪುರ ಅರಣ್ಯದ ಮೂಲಕ ಕೇರಳದ ವೈನಾಡಿಗೆ ರಾತ್ರಿ ಸಂಚಾರ ಸಡಿಲಗೊಳಿಸುವುದಾಗಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿಕೆ ತಪ್ಪು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರದೊಳಗಿನ ರಾತ್ರಿ ಸಂಚಾರ, 16 ಆಕ್ಸೆಲ್‌ ಟಿಪ್ಪರ್‌ ಸಂಚಾರ, ಸ್ಥಳೀಯ ವಾಹನಗಳಿಗೆ ಗ್ರೀನ್‌ ಟ್ಯಾಕ್ಸ್‌ ಖಂಡಿಸಿ ರೈತ ಸಂಘದ ಕಾರ್ಯಕರ್ತರು ಬಂಡೀಪುರ ಮದ್ದೂರು ಚೆಕ್‌ ಪೋಸ್ಟ್‌ ಬಳಿ ಪ್ರತಿಭಟನೆ ನಡೆಸಿ ಅರಣ್ಯ,ಆರ್‌ಟಿಒ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದರು.ರೈತ ಸಂಘದ ಮುಖಂಡ ಡಾ.ಗುರುಪ್ರಸಾದ್‌ ನೇತೃತ್ವದಲ್ಲಿ ಕಾರ್ಯಕರ್ತರು ಜಮಾಯಿಸಿ ಅರಣ್ಯ, ಆರ್‌ಟಿಒ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು.

ಡಿಕೆಶಿ ಹೇಳಿದ್ದು ತಪ್ಪು:

ಬಂಡೀಪುರ ಅರಣ್ಯದ ಮೂಲಕ ಕೇರಳದ ವೈನಾಡಿಗೆ ರಾತ್ರಿ ಸಂಚಾರ ಸಡಿಲಗೊಳಿಸುವುದಾಗಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿಕೆ ತಪ್ಪು. ರಾತ್ರಿ ಸಂಚಾರ ನಿಷೇಧ ಮುಂದುವರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕೆಎ 10 ನಂಬರಿನ ಸ್ಥಳೀಯ ವಾಹನಗಳಿಗೂ ಗ್ರೀನ್ ಟ್ಯಾಕ್ಸ್ ಪಡೆಯುತ್ತಿರುವುದನ್ನು ನಿಲ್ಲಿಸಬೇಕು. ಅಲ್ಲದೆ ಮೈಸೂರು ನಂಬರಿನ ವಾಹನಗಳು ತಾಲೂಕಿನಲ್ಲಿವೆ. ಅವುಗಳಿಗೂ ಗ್ರೀನ್‌ ಟ್ಯಾಕ್ಸ್‌ ಪಡೆಯದಂತೆ ಒತ್ತಾಯಿಸಿದರು.

16 ರಿಂದ 18 ಚಕ್ರದ ವಾಹನಗಳನ್ನು ಬಂಡೀಪುರದ ಕಾಡಿನೊಳಗೆ ಸಂಚರಿಸುತ್ತಿವೆ. ಇದಕ್ಕೆ ಆರ್‌ಟಿಒ, ಅರಣ್ಯ ಇಲಾಖೆ ತಡೆಯಬೇಕು. ಮದ್ದೂರು ಚೆಕ್‌ಪೋಸ್ಟ್‌ ಬಳಿ ವೇಬ್ರಿಡ್ಜ್‌ ಆರಂಭಿಸಿದರೆ ಅತಿ ಹೆಚ್ಚು ಭಾರ ವಾಹನಗಳಿಗೆ ಬ್ರೇಕ್‌ ಬೀಳಲಿದೆ ಎಂದು ಅಧಿಕಾರಿಗಳ ಗಮನಕ್ಕೆ ಗುರುಪ್ರಸಾದ್‌ ತಂದರು.

16 ಆಕ್ಸೆಲ್‌ ಬಿಡಲಿಲ್ಲ:

ಇನ್ಮುಂದೆ 16 ಆಕ್ಸೆಲ್‌ ಟಿಪ್ಪರ್‌ಗಳನ್ನು ಬಂಡೀಪುರ ಅರಣ್ಯದೊಳಗೆ ಬಿಡುವುದಿಲ್ಲ ಎಂದು ಆರ್‌ಟಿಒ ಗಾಯತ್ರಿ, ಎಸಿಎಫ್‌ ಸುರೇಶ್‌ ರೈತರಿಗೆ ಭರವಸೆ ನೀಡಿದರಲ್ಲದೆ ಆರ್‌ಟಿಒ ಕಚೇರಿಯಲ್ಲಿ ಬ್ರೋಕರ್‌ಗಳಿಗೆ ಹಾವಳಿ ತಡೆಯುವುದಾಗಿ ಹೇಳಿದರು.

ರಾತ್ರಿ ಸಂಚಾರ, 16 ಆಕ್ಸೆಲ್‌ ಟಿಪ್ಪರ್‌ ಸಂಚಾರ, ಗ್ರೀನ್‌ ಟ್ಯಾಕ್ಸ್‌ ಸಂಬಂಧ ಮುಂದಿನ ತಿಂಗಳ ಡಿ. 6ರೊಳಗೆ ರೈತ ಮುಖಂಡರ ಸಭೆ ಕರೆಯುವುದಾಗಿ ಭರವಸೆ ಹಿನ್ನೆಲೆ ಪ್ರತಿಭಟನೆ ಕೈಬಿಟ್ಟರು. ಪ್ರತಿಭಟನೆಯಲ್ಲಿ ರೈತಸಂಘದ ಮುಖಂಡರಾದ ಮಾಡ್ರಳ್ಳಿ ಮಹದೇವಪ್ಪ, ಕುಂದಕೆರೆ ಸಂಪತ್ತು, ಲೋಕೇಶ್, ಮಹೇಶ್, ಕೆ.ಎಸ್.ಮಹೇಶ್, ಗುರು ಬೆಟ್ಟಹಳ್ಳಿ, ಕಬ್ಬಹಳ್ಳಿ ಪ್ರಕಾಶ್‌, ಹಸಿರು ಸೇನೆ ಅಧ್ಯಕ್ಷ ಹಿರಿಕಾಟಿ ಚಿಕ್ಕಣ್ಣ ಸೇರಿದಂತೆ ಹಲವರಿದ್ದರು.

೨೬ಜಿಪಿಟಿ೨

ಬಂಡೀಪುರ ಮದ್ದೂರು ಚೆಕ್‌ ಪೋಸ್ಟ್‌ ಬಳಿ ರೈತಸಂಘದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ರೈತಸಂಘದ ಮುಖಂಡ ಗುರುಪ್ರಸಾದ್‌ ಮಾತನಾಡಿದರು.