ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬಂಡೀಪುರದ ಓಂಕಾರ ವಲಯದಲ್ಲಿ ಕಾಡಾನೆಗಳ ಹಾವಳಿ ತಡೆಗಟ್ಟಬೇಕು ಎಂದು ಆಗ್ರಹಿಸಿ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನ ಕುರುಬರಹುಂಡಿ ಬಳಿಯ ಓಂಕಾರ ವಲಯ ಕಚೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತಸಂಘದ ಮುಖಂಡ ನಾಗಪ್ಪ ಮಾತನಾಡಿ, ಓಂಕಾರ ವಲಯದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ಕಾಡಾನೆ ದಾಳಿ ನಡೆದರೂ ಪರಿಹಾರ ಬೇಗ ಕೊಡುವುದಿಲ್ಲ. ಕಂದಕಗಳು ಮುಚ್ಚಿವೆ. ರೈಲ್ವೆ ಕಂಬಿ ಅಳವಡಿಸಬೇಕು, ಚಿರತೆ, ಹುಲಿಗಳು ದಾಳಿ ನಡೆಸಿ ಜಾನುವಾರು ಸಾಯಿಸುತ್ತಿವೆ. ಇದಕ್ಕೆ ಪರಿಹಾರ ತುರ್ತಾಗಿ ಕೊಡಬೇಕು ಎಂದು ಒತ್ತಾಯಿಸಿದರು.
ಧರಣಿ ಅಂತ್ಯ:ಓಂಕಾರ ವಲಯದಲ್ಲಿ ರೈತರು ಪ್ರತಿಭಟನೆ ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ಬಂಡೀಪುರ ಹುಲಿ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಎಸ್.ಪ್ರಭಾಕರನ್ ಮಾತನಾಡಿ, ಅರಣ್ಯ ಇಲಾಖೆ ಕಾಡು ಪ್ರಾಣಿಗಳ ಹಾವಳಿ ತಡೆಗೆ ಎಲ್ಲಾ ಪ್ರಯತ್ನ ಮಾಡುತ್ತಿದೆ ಎಂದರು. ರೈತರು ಸಲ್ಲಿಸಿದ ಮನವಿ ಸ್ವೀಕರಿಸಿ ನಿಮ್ಮೆಲ್ಲರ ಸಮಸ್ಯೆ ಪರಿಹಾರಕ್ಕೆ ಅರಣ್ಯ ಇಲಾಖೆ ಸದಾ ಸಿದ್ಧವಿದೆ. ಸ್ವಲ್ಪ ಸಮಯ ಕಾಯಿರಿ ಪರಿಹಾರ ಸಿಗಲಿದೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಅಂತ್ಯಗೊಂಡಿತು.
ಪ್ರತಿಭಟನೆಯಲ್ಲಿ ರೈತಸಂಘದ ಮಲ್ಲಯ್ಯನಪುರ ಪುಟ್ಟೇಗೌಡ, ಹಸಗೂಲಿ ಮಹೇಶ್, ಮಂಚಹಳ್ಳಿ ಮಣಿಕಂಠ, ನಂಜುಂಡಸ್ವಾಮಿ, ಬೆಟ್ಟದ ಮಾದಳ್ಳಿ ಶ್ರೀನಿವಾಸ್,ಷಣ್ಮುಖಸ್ವಾಮಿ, ಅಗತ ಗೌಡನಹಳ್ಳಿ ಜಗದೀಶ್, ಮಾಡ್ರಳ್ಳಿ ಪಾಪಣ್ಣ, ಯಡವನಹಳ್ಳಿ ಗೋವಿಂದ ನಾಯಕ, ಶಿವಮಲ್ಲ ನಾಯಕ, ಕೋಟೆಕೆರೆ ಮಾದೇವ ನಾಯಕ, ಹೊಸಪುರ ಮರಿಸ್ವಾಮಿ, ಬರಗಿ ಸಿದ್ದರಾಜು, ರಾಘವಪುರ ಅರಸ ಶೆಟ್ಟಿ ಹಾಗೂ ಗುಂಡ್ಲುಪೇಟೆ ಉಪ ವಿಭಾಗದ ಎಸಿಎಫ್ ಜಿ.ರವೀಂದ್ರ, ಆರ್‌ಎಫ್‌ಒ ಕೆ.ಪಿ.ಸತೀಶ್ ಕುಮಾರ್ ಹಾಗೂ ಸಿಬ್ಬಂದಿ ಇದ್ದರು.