ಕಾರ್ಖಾನೆ ಪ್ರಾರಂಭಕ್ಕೆ ಆಗ್ರಹಿಸಿ ರೈತ ಸಂಘಗಳ ಧರಣಿ

| Published : Jul 16 2024, 12:34 AM IST

ಸಾರಾಂಶ

ಕುಂತೂರು ಕಾರ್ಖಾನೆ ಪ್ರಾರಂಭ ಹಾಗೂ ರೈತರು, ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ, ವಿವಿಧ ಸಂಘಟನೆಗಳ ವತಿಯಿಂದ ಸೋಮವಾರ ಕಾರ್ಖಾನೆ ಒಳ ಪ್ರವೇಶಿಸಿ ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ತಾಲೂಕಿನ ಕುಂತೂರು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಬಳಿ ರೈತರು ವಿವಿಧ ಬೇಡಿಕೆಗಳ ಈಡೇರಿಸುವಂತೆ ಹಾಗೂ ಕಾರ್ಖಾನೆ ಶೀಘ್ರ ಪ್ರಾರಂಭಿಸುವಂತೆ ಆಗ್ರಹಿಸಿ ಪ್ರತಿಭಟಿಸಿದರು. ಅಲ್ಲದೆ ಕಾರ್ಖಾನೆ ಮಾಲೀಕತ್ವದ ವಿರುದ್ಧ ಆಕ್ರೋಶಗೊಂಡು ಕಾರ್ಖಾನೆ ಒಳಗೂ ಪ್ರವೇಶಿಸಿದ ಘಟನೆ ಸೋಮವಾರ ನಡೆದಿದೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕಬ್ಬು ಬೆಳೆಗಾರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಮ್ಮುಖದಲ್ಲಿ ತಾಲೂಕಿನ ಕುಂತೂರು ಗ್ರಾಮದಲ್ಲಿರುವ ಶ್ರೀ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ವಿರುದ್ಧ ರೈತರು ಹರಿಹಾಯ್ದರು. ರೈತರನ್ನು ಸತಾಯಿಸಿ ಬೇಡಿಕೆ ಈಡೇರಿಸದ ನಿರ್ಲಕ್ಷ್ಯವಹಿಸುತ್ತಿರುವ ಆಡಳಿತ ಮಂಡಳಿ ವಿರುದ್ಧ ರೈತರು ಕಿಡಿಕಾರುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.ಹಿಂದಿನ ಸಾಲಿನ ಕಬ್ಬಿನ ಬಾಕಿ ಹಣ 150ರು.ಗಳನ್ನು ಪಾವತಿಸಬೇಕು, ಈ ಸಾಲಿನ ಕಬ್ಬಿನ ಬೆಲೆ ನಿಗದಿಪಡಿಸಬೇಕು, ಕೂಡಲೇ ಕಾರ್ಖಾನೆ ಪ್ರಾರಂಭಿಸಬೇಕು, ಕಾರ್ಮಿಕರಿಗೆ ಬೇರೆ ಕಾರ್ಖಾನೆ ಮಾದರಿಯಂತೆಯೇ ಸವಲತ್ತುಗಳನ್ನು ಒದಗಿಸಬೇಕು, ಕಾರ್ಖಾನೆ ಮುಂಭಾಗ ತೂಕದ ಯಂತ್ರವನ್ನು ಅಳವಡಿಸಬೇಕು, ಕಬ್ಬು ಕಟಾವು ಕಾರ್ಮಿಕರ ಅಕಾಲಿಕ ಆಪತ್ತಿಗೆ ಒಳಗಾದಾಗ ಸೂಕ್ತ ಪರಿಹಾರ ನೀಡಲು ಕ್ರಮವಹಿಸಬೇಕು. ರೈತರು, ಕಾರ್ಖಾನೆ ಮಾಲೀಕರು, ಕಾರ್ಮಿಕರು, ಲಾರಿ ಮಾಲೀಕರು, ಕಬ್ಬು ಕಟಾವು ಜಿಎಲ್ ಗಳು ಒಟ್ಟಾಗಿ ಸೇರಿ ಸಮಸ್ಯೆಯನ್ನು ಬಗೆಹರಿಸಬೇಕು. ಕಾರ್ಖಾನೆ ಕೆಲಸಕ್ಕೆ ಕನ್ನಡಿಗರನ್ನೇ ನೇಮಿಸಿಕೊಳ್ಳಲು ಮೊದಲ ಆದ್ಯತೆ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನಿಟ್ಟು ರೈತರು, ಪ್ರಗತಿಪರ ಸಂಘಟನೆಗಳು ತಮ್ಮ ಹಕ್ಕೊತ್ತಾಯ ಮಂಡಿಸಿದರು.

ಸ್ಥಳಕ್ಕೆ ಕಬ್ಬು ಅಭಿವೃದ್ಧಿ ಅಧಿಕಾರಿ ಮಹದೇವಪ್ಪ, ಜನರಲ್ ಮ್ಯಾನೇಜರ್ ಮುತ್ತುಕುಮಾರ್ ಇನ್ನಿತರರು ಆಗಮಿಸಿ ಶೀಘ್ರದಲ್ಲೆ ಕಾರ್ಖಾನೆ ಪ್ರಾರಂಭಿಸುತ್ತೇವೆ. ಸರ್ಕಾರವೇ 30ರೊಳಗೆ ಕಾರ್ಖಾನೆ ಪ್ರಾರಂಭಕ್ಕೆ ಪತ್ರ ಹೊರಡಿಸಿದೆ. ದಯವಿಟ್ಟು ಸಹಕರಿಸಿ ಎಂದು ರೈತರ ಮನವೊಲಿಕೆಗೆ ಪ್ರಯತ್ನಿಸಿದರು. ಆದರೆ ಅಣಗಳ್ಳಿ ಬಸವರಾಜು ಸೇರಿದಂತೆ ಇನ್ನಿತರ ರೈತ ಹೋರಾಟಗಾರರು ಇಂದೇ ಕಾರ್ಖಾನೆ ಪ್ರಾರಂಭಕ್ಕೆ ಮುನ್ನುಡಿ ಬರೆಯುವ ಮೂಲಕ ಒಲೆ ಹೊತ್ತಿಸಿ ( ಬೆಂಕಿಹಾಕಿ) ಎಂದು ಒತ್ತಾಯಿಸಿದರು.

ಈ ವೇಳೆ ಹೋರಾಟಗಾರರಾದ ರಾಮಕಷ್ಣ, ಮುಳ್ಳೂರು ಷಣ್ಮುಗಸ್ವಾಮಿ, ತೇರಂಬಳ್ಳಿ ಮಹದೇವಪ್ಪ, ಮೋಳೆ ರಾಜೇಂದ್ರ, ವಾಸು, ನಾಗರಾಜು ಹಿತ್ತಲದೊಡ್ಡಿ, ಕರವೇ ಪ್ರವೀಣ್ ಶೆಟ್ಟಿ ಬಣದ ಅಯಾಜ್ ಕನ್ನಡಿಗ, ಕರವೇ ಜಿಲ್ಲಾಧ್ಯಕ್ಷ ಮೋಹನ್, ಪ್ರಧಾನ ಕಾರ್ಯದರ್ಶಿ ರಿಯಾಜ್ ಇನ್ನಿತರರಿದ್ದರು.