ಸಾರಾಂಶ
ಮುಂಗಾರು ಹಂಗಾಮಿನ ಬೆಳೆ ಬೆಳೆಯಲು ಹಾನಗಲ್ಲ ತಾಲೂಕಿನಲ್ಲಿ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಮಳೆಗಾಗಿ ಮುಗಿಲಿನತ್ತ ನೋಡುತ್ತಿದ್ದಾರೆ. ಈಗ ಮಳೆಯಾದರೆ ಮುಂಗಾರು ಬಿತ್ತನೆಗೆ ರೈತರಿಗೆ ಅನುಕೂಲವಾಗಲಿದೆ.
ಮಾರುತಿ ಶಿಡ್ಲಾಪುರ
ಹಾನಗಲ್ಲ: 77 ಸಾವಿರ ಹೆಕ್ಟೇರ್ ಭೂಪ್ರದೇಶವುಳ್ಳ ತಾಲೂಕಿನ 47 ಸಾವಿರ ಹೆಕ್ಟೇರ್ ಕೃಷಿ ಭೂಮಿ ಮುಂಗಾರು ಹಂಗಾಮು ಬೆಳೆಗಾಗಿ ಸಿದ್ಧಗೊಳಿಸಲು ಅಗತ್ಯ ಮಳೆ ಬೀಳದೆ ರೈತರು ಮುಗಿಲಿನತ್ತ ಮುಖ ಮಾಡಿದ್ದಾರೆ. ಅಲ್ಲದೆ, ಮತ್ತೆ ಈ ವರ್ಷವೂ ಗೋವಿನಜೋಳವೇ ಇಲ್ಲಿನ ಪ್ರಮುಖ ಬೆಳೆಯಾಗಲಿದೆ.ದಶಕಗಳಾಚೆ ತಾಲೂಕು ಭತ್ತ, ಕಬ್ಬು ಬೆಳೆಯಲು ಹೆಸರು ಮಾಡಿತ್ತು. ಮಳೆಯ ಕಣ್ಣಾಮುಚ್ಚಾಲೆಯಿಂದಾಗಿ ಅತಿವೃಷ್ಟಿ, ಅನಾವೃಷ್ಟಿಗಳ ತೂಗುಯ್ಯಾಲೆಯಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬ ಸಂದಿಗ್ಧತೆಯಲ್ಲಿ ಚಿಂತೆಗೊಳಗಾದ ರೈತ ಅನಿವಾರ್ಯವಾಗಿ ಗೋವಿನಜೋಳವನ್ನೇ ಮುಖ್ಯ ಬೆಳೆಯಾಗಿ ಬೆಳೆಯುತ್ತಿರುವುದು ವಿಶೇಷವಾಗಿದೆ.ಕಡಿಮೆ ಮಳೆ ಹಾಗೂ ನಿರ್ವಹಣೆಯೂ ಸುಲಭ ಎಂಬ ಕಾರಣಕ್ಕೆ ಗೋವಿನ ಜೋಳವೇ ಪ್ರಮುಖ ಬೆಳೆಯಾಗಿದೆ. 30 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಕೃಷಿ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದ ರೈತರು ಈಗ ಕೇವಲ 14 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಗೋವಿನಜೋಳ ಅಪರೂಪಕ್ಕೆ ಬೆಳೆಯುತ್ತಿದ್ದ ಈ ನಾಡಿನಲ್ಲಿ ಈಗ 25 ಸಾವಿರ ಹೆಕ್ಟೇರ್‌ನಲ್ಲಿ ಗೋವಿನ ಜೋಳ ಬೆಳೆಯುತ್ತಿದ್ದಾರೆ. ಕಬ್ಬು ಕೇವಲ 2700 ಹೆಕ್ಟೇರ್‌ನಲ್ಲಿ, ಇದರೊಂದಿಗೆ ಸೋಯಾ ಅವರೆ 2397 ಹೆಕ್ಟೇರ್, ಹತ್ತಿ 3122 ಹೆಕ್ಟೇರ್, ಶೇಂಗಾ 850 ಹೆಕ್ಟೇರ್‌ನಲ್ಲಿ ಬೆಳೆಯುತ್ತಿದ್ದಾರೆ.ಬಿತ್ತನೆ ಬೀಜ: ತಾಲೂಕಿನಲ್ಲಿ 38 ಸಾವಿರ ರೈತರಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ 13 ಸಾವಿರ ರೈತರಿಗೆ 2024ರ ವರ್ಷದಲ್ಲಿ 1627 ಕ್ವಿಂಟಲ್ ಭತ್ತ, 408 ಕ್ವಿಂಟಲ್ ಗೋವಿನ ಜೋಳ, 1121 ಕ್ವಿಂಟಲ್ ಸೋಯಾ ಅವರೆ, 69 ಕ್ವಿಂಟಲ್ ಶೇಂಗಾ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲಾಗಿದೆ.
ಈ ಬಾರಿ ಈಗಾಗಲೇ ಕೃಷಿ ಇಲಾಖೆ ಬಿತ್ತನೆ ಬೀಜಗಳ ಬೇಡಿಕೆ ಸಲ್ಲಿಸಲಾಗಿದ್ದು, ಗೋವಿನಜೋಳ ಮತ್ತು ಭತ್ತದ ಬಿತ್ತನೆ ಬೀಜಗಳ ಬೇಡಿಕೆಯನ್ನು ಹೆಚ್ಚಿಸಲಾಗಿದೆ. ದಿಢೀರನೆ ರೈತರು ಬೆಳೆಯನ್ನು ಬದಲಿಸಲು ಮುಂದಾಗಿ ಬಿತ್ತನೆ ಬೀಜದ ಕೊರತೆ ಆಗಬಾರದು ಎಂಬ ಕಾರಣಕ್ಕೆ ಸುಮಾರು ಹಿಂದಿನ ವರ್ಷದ ಎರಡರಷ್ಟು ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಮೇ 25ರ ಹೊತ್ತಿಗೆ ಬಿತ್ತನೆ ಬೀಜ ವಿತರಿಸುವ ಕಾರ್ಯ ತಾಲೂಕಿನ 7 ಕೇಂದ್ರಗಳಲ್ಲಿ ನಡೆಯಲಿದೆ.ಡಿಎಪಿ ಕೊರತೆ: ಕಳೆದ ಕೃಷಿ ವರ್ಷದಲ್ಲಿ 3860 ಟನ್ ಡಿಎಪಿ, 13900 ಟನ್ ಯೂರಿಯಾ, 525 ಟನ್ ಎಂಒಪಿ, 1 ಸಾವಿರ ಟನ್ ಕಾಂಪ್ಲೆಕ್ಸ್ ರಾಸಾಯನಿಕ ಗೊಬ್ಬರ ತಾಲೂಕಿನಲ್ಲಿ ಮಾರಾಟ ಆಗಿದೆ. ಪ್ರಸ್ತುತ ವರ್ಷ 6607 ಟನ್ ಡಿಎಪಿ, 11550 ಟನ್ ಯುರಿಯಾ, 6746 ಟನ್ ಕಾಂಪ್ಲೆಕ್ಸ್, 1330 ಟನ್ ಎಂಒಪಿ ರಾಸಾಯನಿಕ ಗೊಬ್ಬರಕ್ಕೆ ಕೃಷಿ ಇಲಾಖೆ ಬೇಡಿಕೆ ಸಲ್ಲಿಸಿದೆ. ಸದ್ಯದ ಸಂಗ್ರಹ 308 ಟನ್ ಡಿಎಪಿ, 2900 ಟನ್ ಯುರಿಯಾ, 1467 ಟನ್ ಕಾಂಪ್ಲೆಕ್ಸ್, 323 ಟನ್ ಎಂಒಪಿ ಮಾತ್ರ ದಾಸ್ತಾನು ಇದೆ. ಆದರೆ ಈ ನಡುವೆ ಡಿಎಪಿ ಕೊರತೆಯಾಗುತ್ತದೆ ಎಂಬ ಸುದ್ದಿ ಹಬ್ಬಿದ್ದು, ರೈತರು ಆತಂಕದಲ್ಲಿದ್ದಾರೆ.ಮಳೆ ಬೀಳದೆ ಬಿತ್ತನೆ ಮಾಡಬೇಡಿ: ಮಳೆ ಬೀಳದೆ ಒಣ ಬಿತ್ತನೆಗೆ ಮುಂದಾಗಬಾರದು. ಭೂಮಿಯು ಸೂಕ್ತ ತೇವಾಂಶ ಹೊಂದಿದಾಗ ಮಾತ್ರ ಬಿತ್ತನೆ ಮಾಡಬೇಕು. ಇಲ್ಲದಿದ್ದರೆ ಬಿತ್ತಿದ ಬೀಜ ಸರಿಯಾಗಿ ಮೊಳಕೆಯಾಗದೆ ಮರು ಬಿತ್ತನೆಗೆ ಹೋಗಬೇಕಾಗುತ್ತದೆ. ಡಿಎಪಿ ಬದಲಾಗಿ ಅದಕ್ಕೆ ಸಮನಾದ ಸಂಯೋಜನೆಯ ರಸಗೊಬ್ಬರ ದಾಸ್ತಾನು ಇದೆ. ರೈತರು ಡಿಎಪಿಗೆ ಪರ‍್ಯಾಯವಾಗಿ ಬೇರೆ ಸಂಯೋಜನೆಯ ರಸಗೊಬ್ಬರ ಬಳಸಲು ಮುಂದಾಗಬೇಕು ಎಂದು ಹಾನಗಲ್ಲ ಸಹಾಯಕ ಕೃಷಿ ನಿರ್ದೇಶಕ ಮಾರುತಿ ಅಂಗರಗಟ್ಟಿ ಹೇಳಿದರು.