ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಚಳ್ಳಕೆರೆ ತಾಲೂಕಿನ ರೈತರ ಕುಂದು ಕೊರತೆಗಳ ಕುರಿತು ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಬುಧವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರೆದಿದ್ದ ಸಭೆಯನ್ನು ಬಹಿಷ್ಕರಿಸಿ ರೈತರು ಹೊರನಡೆದು ಜಿಲ್ಲಾಡಳಿತದ ರೈತ ವಿರೋಧಿ ನಡೆಗಳ ವಿರುದ್ಧ ಆಕ್ರೋಶ ಹೊರಹಾಕಿದ ಘಟನೆ ನಡೆಯಿತು.ಸಮಸ್ಯೆಗಳನ್ನು ಬಗೆಹರಿಸಲಾಗದೆ ಸುಖಾಸುಮ್ಮನೆ ರೈತರ ಸಭೆಗೆ ಕರೆಯುವುದು ಯಾವ ಪುರುಷಾರ್ಥಕ್ಕಾಗಿ ಎಂದು ರೈತ ಸಂಘದ ಮುಖಂಡರು ಅಧಿಕಾರಗಳ ವಿರುದ್ಧ ಹರಿಹಾಯ್ದರು. ತಾಲೂಕಿನ 40 ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ 12 ಗ್ರಾಮ ಪಂಚಾಯತಿಗೆ ಬೆಳೆ ವಿಮೆ ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಸಮಸ್ಯೆಯನ್ನು ಬಗೆಹರಿಸುವಂತೆ ಜಿಲ್ಲಾಧಿಕಾರಿಗಳು, ತಾಲೂಕು ದಂಡಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಬೆಳೆನಷ್ಟ, ಬೆಳೆವಿಮೆ ಪರಿಹಾರ ನೀಡಲು ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದರು.
ಬೆಳೆ ಸಮೀಕ್ಷೆಗಾಗಿ ಬರುವ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳು ಸಮೀಕ್ಷೆಯನ್ನು ಪಾರದರ್ಶಕವಾಗಿ ನಡೆಸಿಲ್ಲ. ಇದರಿಂದ ಬೆಳೆ ಕಳೆದುಕೊಂಡ ರೈತರಿಗೆ ಬೆಳೆವಿಮೆ, ಬೆಳೆಪರಿಹಾರ ಸಿಕ್ಕಿಲ್ಲ. ತಪ್ಪು ವರದಿ ಕಂಡು ಸರ್ಕಾರ ಹಾಗೂ ಖಾಸಗಿ ಇನ್ಸೂರೆನ್ಸ್ ಕಂಪನಿಯವರು ಪರಿಹಾರ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ರೈತರು ಆಕ್ರೋಶ ಹೊರ ಹಾಕಿದರು.ಶೇಂಗಾ ಬೆಳೆವಿಮೆ ಹಣ ಕೆಲವೊಂದು ಗ್ರಾಮಗಳಿಗೆ ಬಂದರೆ, ಇನ್ನೂ ಕೆಲವು ಗ್ರಾಮಗಳಿಗೆ ಬಂದಿಲ್ಲ. ಬೆಳೆ ಇಲ್ಲದ ಭೂಮಿಗೂ ಹಣ ಬಂದಿದೆ. ಪ್ರಾಮಾಣಿಕವಾಗಿ ನಷ್ಟಕ್ಕೆ ಒಳಗಾದ ರೈತರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿ ರೈತರಿಗೆ ಪರಿಹಾರ ಕೊಡಿಸಿ. ತಪ್ಪುಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದೇ ರೈತರ ಕುಂದು ಕೊರತೆ ಸಭೆ ಮಾಡುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸ್ಪಷ್ಟನೆ ನೀಡಿದ ಉಪ ವಿಭಾಗಾಧಿಕಾರಿ ಕಾಂತರಾಜು, ಕೃಷಿ ಜಂಟಿ ನಿರ್ದೇಶಕ ಡಾ.ಮಂಜುನಾಥ, 2025-26ನೇಸಾಲಿನ ಬೆಳೆವಿಮೆ ಹಣ ತಾಲೂಕಿಗೆ 54 ಕೋಟಿ ಬಂದಿದೆ. 40 ಗ್ರಾಮ ಪಂಚಾಯಿತಿಯ 28 ಗ್ರಾಮದಲ್ಲಿ ಬೆಳೆವಿಮೆ ಪಾವತಿಸಿದ ಎಲ್ಲಾ ರೈತರಿಗೂ ಪರಿಹಾರದ ಹಣ ಬಂದಿದೆ. ಉಳಿದ 12 ಗ್ರಾಪಂಗೆ ವರದಿ ಅನ್ವಯ ಹಣ ಬರುವುದಿಲ್ಲ, 12ಗ್ರಾಪಂಗಳಲ್ಲಿ ಸಮೀಕ್ಷೆ ನಡೆಸಿ ವರದಿ ನೀಡಿದ ಮೇಲೆಯೇ ಈ ನಿರ್ದಾರವಾಗಿರುವುದು. ಈ ಬಗ್ಗೆ ತಹಸೀಲ್ದಾರ್ ಹಂತದಲ್ಲಿ ತಂಡ ರಚಿಸಿ ಸಮೀಕ್ಷೆಯ ಲೋಪದೋಷದ ಬಗ್ಗೆ ವರದಿ ಮಾಡಿ, ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಒಟ್ಟು 54 ಕೋಟಿ ಹಣ ರೈತರ ಖಾತೆಗೆ ಜಮೆಯಾಗಿದೆ. ಹಿರೇಹಳ್ಳಿ ಗ್ರಾಪಂ ವ್ಯಾಪ್ತಿಯ77ರೈತರ ಅನ್ಯಾಯದ ಬಗ್ಗೆ ಸಮೀಕ್ಷೆ ನಡೆಯುತ್ತಿದೆ. ವರದಿ ಬಂದ ನಂತರ ಸೂಕ್ತ ಕ್ರಮವಹಿಸಲಾಗುವುದು ಎಂದರು. ಸೋಮಗುದ್ದು ರಂಗಸ್ವಾಮಿ, ಕೆ.ಪಿ.ಭೂತಯ್ಯ, ರೆಡ್ಡಿಹಳ್ಳಿ ವೀರಣ್ಣ, ಆರ್.ಬಿ.ನಿಜಲಿಂಗಪ್ಪ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಡಿ.ಎಸ್. ಹಳ್ಳಿ ಮಲ್ಲಿಕಾರ್ಜುನ, ಕೆ.ಟಿ. ತಿಪ್ಪೇಸ್ವಾಮಿ ಮುಂತಾದವರು ಮಾತನಾಡಿದರು.
ತಹಸೀಲ್ದಾರ್ ರೆಹಾನ್ ಪಾಷಾ, ಕೃಷಿ ಅಧಿಕಾರಿ ರಮೇಶ್, ತೋಟಗಾರಿಕೆ ಅಧಿಕಾರಿ ಕುಮಾರ್, ವೃತ್ತನಿರೀಕ್ಷಕರಾದ ಕೆ.ಕುಮಾರ್, ಹನುಮಂತಪ್ಪ ಎಂ.ಸಿರೇಹಳ್ಳಿ, ಕೃಷಿವಿಜ್ಞಾನಿ ಓಂಕಾರಪ್ಪ ಮುಂತಾದವರು ಇದ್ದರು.