ಬಾಳೆಹೊನ್ನೂರುಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಶೃಂಗೇರಿ ಕ್ಷೇತ್ರಾದ್ಯಂತ ಜ.15ರಿಂದ 24ವರೆಗೆ ಮಲೆನಾಡಿಗರ ಬದುಕನ್ನು ಉಳಿಸಲು ಜನ ಜಾಗೃತಿ ಯಾತ್ರೆ ಆಯೋಜಿಸಲಾಗಿದೆ ಎಂದು ಸಮಿತಿ ಉಪಾಧ್ಯಕ್ಷ ನವೀನ್ ಕರಗಣೆ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಶೃಂಗೇರಿ ಕ್ಷೇತ್ರಾದ್ಯಂತ ಜ.15ರಿಂದ 24ವರೆಗೆ ಮಲೆನಾಡಿಗರ ಬದುಕನ್ನು ಉಳಿಸಲು ಜನ ಜಾಗೃತಿ ಯಾತ್ರೆ ಆಯೋಜಿಸಲಾಗಿದೆ ಎಂದು ಸಮಿತಿ ಉಪಾಧ್ಯಕ್ಷ ನವೀನ್ ಕರಗಣೆ ತಿಳಿಸಿದರು.ಪಟ್ಟಣದ ಮಾರ್ಕಾಂಡೇಶ್ವರ ಸಭಾ ಭವನದಲ್ಲಿ ನಡೆದ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಬಾಳೆಹೊನ್ನೂರು, ಖಾಂಡ್ಯ ಹೋಬಳಿ ಘಟಕದ ಸಭೆಯಲ್ಲಿ ಮಾತನಾಡಿದರು. ಮಲೆನಾಡು ಭಾಗದಲ್ಲಿ ಹಲವಾರು ಸಮಸ್ಯೆಗಳಿದ್ದು, ಹಲವಾರು ಬಾರಿ ಸರ್ಕಾರಗಳ ಗಮನ ಸೆಳೆದರೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಸೆಕ್ಷನ್ 4, ಸೆಕ್ಷನ್ 17 ಸಮಸ್ಯೆ, ಡೀಮ್ಡ್ ಫಾರೆಸ್ಟ್ ಸಮಸ್ಯೆ, ಅಡಕೆ ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ ಸಮಸ್ಯೆ, ಮಾನವ-ಪ್ರಾಣಿ ಸಂಘರ್ಷ ಮುಂತಾದವು ಇದೆ. ಇಲ್ಲಿನ ಕೃಷಿ ನಂಬಿಕೊಂಡು ಬದುಕಲು ಸಾಧ್ಯವಿಲ್ಲ ಎಂದು ಅರಿತ ಕಾರಣಕ್ಕೆ ಇಂದಿನ ಹಲವು ಯುವಕರು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಮಲೆನಾಡಿಗರ ಬದುಕು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಹಿನ್ನೆಲೆಯಲ್ಲಿ ಶೃಂಗೇರಿ ಕ್ಷೇತ್ರಾದ್ಯಂತ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತೀ ಗ್ರಾಪಂ ಮಟ್ಟದಲ್ಲಿ ಸಮಿತಿಯ ವತಿಯಿಂದ ಯಾತ್ರೆ ನಡೆಸಲು ಉದ್ದೇಶಿಸಲಾಗಿದೆ.ಈ ಹಿನ್ನೆಲೆಯಲ್ಲಿ ಜ.14ರಂದು ಸಂಜೆ 6 ಗಂಟೆಗೆ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಸ್ವಾಮೀಜಿ ಯಾತ್ರೆಗೆ ಚಾಲನೆ ನೀಡಿ ಆಶೀರ್ವಾದ ಮಾಡಲಿದ್ದಾರೆ. ಜ.15ರಿಂದ ಯಾತ್ರೆ ವಿದ್ಯುಕ್ತವಾಗಿ ಕ್ಷೇತ್ರದ ಗ್ರಾಪಂ ವ್ಯಾಪ್ತಿಗಳಿಗೆ ಸಂಚರಿಸಲಿದೆ. ಜ.24ರಂದು ಯಾತ್ರೆಯು ಸಮಾಪ್ತಿಗೊಳ್ಳಲಿದೆ.ತಾಲೂಕಿಗೆ ಬರುವ ಜನ ಜಾಗೃತಿ ಯಾತ್ರೆ ಗ್ರಾಪಂ ಮಟ್ಟದಲ್ಲಿ ಜನರಿಗೆ ತಲುಪಿಸಲು ಯಾತ್ರೆ ಸಾಗುವ ಮಾರ್ಗಸೂಚಿಯನ್ನು ಸಭೆಯಲ್ಲಿ ತಯಾರಿಸಲಾಗಿದೆ. ಯಾತ್ರೆಗೆ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಮಿತಿ ಗೌರವ ಅಧ್ಯಕ್ಷ ಎಸ್.ವಿ.ಶಂಕರ ಮಾತನಾಡಿ, ಮಲೆನಾಡಿಗರಲ್ಲಿ ಜಾಗೃತಿ ಅವಶ್ಯಕತೆ ಇದ್ದು, ಜನರು ಈ ಅಭಿಯಾನಕ್ಕೆ ಕೈ ಜೋಡಿಸಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಸಮಿತಿ ಖಜಾಂಚಿ ಚಂದ್ರಶೇಖರ್ ರೈ, ರತ್ನಾಕರ ಗಡಿಗೇಶ್ವರ, ಸದಸ್ಯರಾದ ಸಂದೀಪ್ ಸಾರಗೋಡು, ಧರ್ಮಣ್ಣ , ಪ್ರಮುಖರಾದ ಉಮೇಶ್ ಕಲ್ಮಕಿ, ದೀಪಕ್ ಹಲಸೂರು, ಬಿ.ಕೆ.ಮಧುಸೂದನ್, ಬಿ.ಅಕ್ಷಯ್, ಎಸ್.ಮಂಜುನಾಥ್, ಅತಿಶಯ್ ಮತ್ತಿತರರು ಹಾಜರಿದ್ದರು. ೧೨ಬಿಹೆಚ್‌ಆರ್ ೩:

ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯಿಂದ ಶೃಂಗೇರಿ ಕ್ಷೇತ್ರದಲ್ಲಿ ನಡೆಯಲಿರುವ ಜನ ಜಾಗೃತಿ ಯಾತ್ರೆ ಪೂರ್ವಭಾವಿ ಸಭೆ ಬಾಳೆಹೊನ್ನೂರು ಮಾರ್ಕಾಂಡೇಶ್ವರ ಸಭಾ ಮಂಟಪದಲ್ಲಿ ನಡೆಯಿತು.