ಸಾರಾಂಶ
ನಾಗಮಂಗಲ: ಗಣಪತಿ ಮೆರವಣಿಗೆ ವೇಳೆ ಸಂಭವಿಸಿದ ಕೋಮು ಗಲಭೆಯಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿರುವ ಮತ್ತು ಬಂಧನದ ಭೀತಿಯಲ್ಲಿ ಗ್ರಾಮ ತೊರೆದಿದ್ದರಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಕುಟುಂಬಗಳಿಗೆ ತಾಲೂಕಿನ ಕದಬಹಳ್ಳಿ ಭಾಗದ ರೈತರು ಆರ್ಥಿಕ ಸಹಾಯ ನೀಡಿದರು.
ಬದರಿಕೊಪ್ಪಲು ಗ್ರಾಮಕ್ಕೆ ಭೇಟಿ ನೀಡಿದ ರೈತರ ತಂಡ, ಮನೆಯ ಆಧಾರಸ್ಥಂಭವಾಗಿದ್ದವರ ಬಂಧನದಿಂದ ನೀರವ ಮೌನಕ್ಕೆ ಶರಣಾಗಿದ್ದ ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬಿದರು.ಘಟನೆಯಲ್ಲಿ ಪಾಲ್ಗೊಳ್ಳದಿದ್ದರೂ ವಿನ:ಕಾರಣ ಬಂಧಿಸಿರುವ ಪೊಲೀಸರ ಕ್ರಮ ನಿಜಕ್ಕೂ ಅಮಾನವೀಯ. ಘಟನೆ ನಿಯಂತ್ರಿಸುವ ಉದ್ದೇಶದಿಂದ ವಶಕ್ಕೆ ಪಡೆದಿದ್ದರೂ ಎಫ್‌ಐಆರ್ ದಾಖಲಿಸುವ ಮುನ್ನ ಪ್ರಾಥಮಿಕ ತನಿಖೆಯ ಮೂಲಕ ಅಮಾಯಕರನ್ನು ಬಿಡುಗಡೆ ಮಾಡಬಹುದಿತ್ತು. ಪೊಲೀಸರ ಆತುರದ ಕ್ರಮದಿಂದ ಕುಟುಂಬಗಳು ದುಃಖದಲ್ಲಿ ಮುಳುಗಿವೆ. ಆದರೂ ಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯ ನೀಡುವ ಇಚ್ಛಾಶಕ್ತಿಯಿಂದ ಬಂದಿದ್ದೇವೆ. ನಿಮ್ಮ ಕಷ್ಟದಲ್ಲಿ ನಾವು ಭಾಗಿಯಾಗುವ ಜೊತೆಗೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಆತ್ಮಸ್ಥೈರ್ಯ ತುಂಬಿದರು.
ರೈತ ಮುಖಂಡ ಹಡೇನಹಳ್ಳಿ ಧನಂಜಯ ಮಾತನಾಡಿ, ಈಗಾಗಲೇ ವೈಯುಕ್ತಿಕವಾಗಿ ಆರ್ಥಿಕ ನೆರವು ನೀಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಾಲೂಕಿನ ಸಮಸ್ತ ರೈತ ಬಾಂಧವರ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ. ಜಾಮೀನು ಪಡೆಯುವ ಮೂಲಕ ಹೊರ ಬಂದು ಕುಟುಂಬಗಳು ಯಥಾಸ್ಥಿತಿಗೆ ಮರಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.ಜೈಲು ಸೇರಿರುವ ಮತ್ತು ಊರು ಬಿಟ್ಟಿರುವವರ ಪೈಕಿ 20 ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಿದರು. ಯರಗನಹಳ್ಳಿ ನಾಗರಾಜು, ಕದಬಹಳ್ಳಿ ಮಂಜು, ಸೋಮಣ್ಣ, ಎ.ನಾಗತಿಹಳ್ಳಿ ಪರಮೇಶ್ವರಚಾರ್. ಸಿಬಂಗ್ಲಿ ಗ್ರಾಮದ ನಾಗರಾಜು, ಧನಂಜಯ, ಅಶೋಕ್ ಸೇರಿದಂತೆ ಹಲವರು ಇದ್ದರು.