ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ

ಇನ್ನೊಂದು ಉತ್ತಮ ಮಳೆಯಾದರೆ ಬಿತ್ತಿದ ಬೆಳೆ ಉಳಿಯುತ್ತದೆ, ಇಲ್ಲದಿದ್ದರೆ ಎಲ್ಲವೂ ಕೈತಪ್ಪುತ್ತದೆ. ಮಳೆ ಬರದಿದ್ದರೆ ಅನ್ನದಾತನ ಬದುಕು ತೂಗುಯ್ಯಾಲೆಯಲ್ಲಿ. ಇದು ತಾಲೂಕಿನ ಹಲವು ಗ್ರಾಮಗಳ ರೈತರ ಬಾಯಲ್ಲಿ ಕೇಳಿ ಬರುತ್ತಿರುವ ಆತಂಕದ ಮಾತು.

ಮುಂಗಾರು ಹಂಗಾಮಿನ ಆರಂಭದಲ್ಲಿ ಸುರಿದ ಮಳೆ ನಂಬಿಕೊಂಡು ಬಿತ್ತನೆ ನಡೆಸಿದ್ದ ರೈತರು ಈಗ ಮಳೆ ಕೈಕೊಟ್ಟ ಪರಿಣಾಮ ಸಂಕಷ್ಟದ ದಿನ ಎದುರಿಸುತ್ತಿದ್ದಾರೆ.

ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಜೋಳ, ತೊಗರಿ, ಹತ್ತಿ, ಹೆಸರು, ಎಳ್ಳು, ಸೂರ್ಯಕಾಂತಿ, ಉದ್ದು, ಸಜ್ಜೆ ಸೇರಿದಂತೆ ವಿವಿಧ ಬೆಳೆ ಬಿತ್ತನೆ ಮಾಡಲಾಗಿದೆ. ಆದರೆ ಕಳೆದ ಕೆಲವು ದಿನಗಳಿಂದ ಮಳೆಯಾಗದ ಕಾರಣ ಹೊಲಗಳಲ್ಲಿನ ತೇವಾಂಶ ಕಡಿಮೆಯಾಗಿ ಬೆಳೆಗಳು ಬಿಸಿಲಿನ ತಾಪಕ್ಕೆ ಬಾಡತೊಡಗಿವೆ. ಇನ್ನೂ ಕೆಲವೇ ದಿನಗಳಲ್ಲಿ ಮಳೆ ಸುರಿಯದಿದ್ದರೆ ಬೆಳೆಗಳ ಬೆಳವಣಿಗೆ ಸಂಪೂರ್ಣ ಕುಂಠಿತಗೊಂಡು ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.

ರೈತರು ಸಾವಿರಾರು ಕೋಟಿ ರು. ಸಾಲ ಮಾಡಿ ಬೀಜ, ಗೊಬ್ಬರ ಮತ್ತು ಕೃಷಿ ಕಾರ್ಯಗಳಿಗೆ ಹಣ ವೆಚ್ಚ ಮಾಡಿದ್ದಾರೆ. ಉತ್ತಮ ಮಳೆಯ ನಿರೀಕ್ಷೆಯಲ್ಲಿ ಆರಂಭಿಸಿದ್ದ ಕೃಷಿ ಈಗ ಅನಿಶ್ಚಿತತೆಯ ಅಂಚಿಗೆ ತಲುಪಿದೆ. ಹೊಲಕ್ಕೆ ಹೋದಾಗ ಹಸಿರಾಗಿರಬೇಕಿದ್ದ ಬೆಳೆಗಳು ಬಾಡುತ್ತಿರುವ ದೃಶ್ಯ ರೈತರ ಆತಂಕ ಇನ್ನಷ್ಟು ಹೆಚ್ಚಿಸಿದೆ.


ಮುಂಗಾರು ಹಂಗಾಮಿನ ಕೃಷಿಯ ಯಶಸ್ಸು ಈಗ ಸಂಪೂರ್ಣವಾಗಿ ಮಳೆಯ ಮೇಲೆ ನಿಂತಿದೆ. ರೈತರು ಪ್ರತಿದಿನ ಮೋಡಗಳತ್ತ ಕಣ್ಣಿಟ್ಟು ಮೋಡಗಳೇ ಬನ್ನಿ ಮಳೆ ತಂದು ಬೆಳೆ ಉಳಿಸಿ ಎಂದು ಪ್ರಾರ್ಥಿಸುತ್ತಿದ್ದಾರೆ. ಮುಂದಿನ ಕೆಲ ದಿನಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ಹೊಲಗಳಲ್ಲಿ ಮತ್ತೆ ಹಸಿರು ಚಿಗುರು ಮೂಡಲಿದೆ ಇಲ್ಲದಿದ್ದರೆ ಅನ್ನದಾತನ ಶ್ರಮ ಮತ್ತು ಕನಸು ಎರಡೂ ಒಣಗುವ ಅಪಾಯ ಎದುರಾಗಿದೆ.

ಮಳೆಯ ಕೊರತೆ ಮುಂದುವರಿದರೆ ಬೆಳೆ ನಷ್ಟ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ತಕ್ಷಣವೇ ಬೆಳೆ ಸಮೀಕ್ಷೆ ನಡೆಸಿ ಅಗತ್ಯವಿದ್ದರೆ ಮಧ್ಯಂತರ ಪರಿಹಾರ ಘೋಷಿಸಬೇಕು ಮರುಬಿತ್ತನೆ ಅಗತ್ಯವಾದರೆ ಗುಣಮಟ್ಟದ ಬೀಜ ಮತ್ತು ಇತರೆ ಕೃಷಿ ಸಾಮಗ್ರಿ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಮುಂಗಾರು ಹಂಗಾಮಿನ ಮೊದಲ ಮಳೆಯಾದ ನಂತರ ಹೆಸರು ಬೆಳೆ ಬಿತ್ತನೆ ಮಾಡಿದ್ದೇವೆ, ಆದರೆ ಈಗ ಮಳೆ ಇಲ್ಲದ ಕಾರಣ ಬೆಳೆ ಬಾಡುತ್ತಿದ್ದು ಸಾಲ ಮಾಡಿ ಕೃಷಿ ಮಾಡಿದ್ದೇವೆ ಇನ್ನೂ ಎರಡು ಮೂರು ದಿನಗಳಲ್ಲಿ ಮಳೆ ಬರದಿದ್ದರೆ ಮರುಬಿತ್ತನೆ ಮಾಡುವ ಪರಿಸ್ಥಿತಿ ಎದುರಾಗಬಹುದು ಸರ್ಕಾರ ರೈತನ ಬದುಕಿಗೆ ಅಗತ್ಯ ನೆರವು ನೀಡಬೇಕು ಎಂದು ರೈತ ನಾಗನಗೌಡ ನಾಗೋಡ ತಿಳಿಸಿದ್ದಾರೆ.

ಪ್ರತಿ ದಿನ ಬೆಳಗ್ಗೆ ಎದ್ದಾಕ್ಷಣ ಆಕಾಶದತ್ತ ನೋಡುತ್ತೇವೆ, ಮೋಡ ಕಂಡರೆ ಆಸೆ ಬಿಸಿಲು ಕಂಡರೆ ನಿರಾಸೆ ಮಳೆಯೊಂದೇ ನಮ್ಮ ಬೆಳೆ ಮತ್ತು ಬದುಕಿನ ಆಸರೆಯಾಗಿದ್ದು ಎರಡು ಮೂರು ದಿನಗಳಲ್ಲಿ ಮಳೆ ಸುರಿದರೆ ರೈತನ ಬದುಕು ಹಸಿರಾಗಲಿದೆ ಎಂದು ದೋಟಿಹಾಳ ಗ್ರಾಮದ ರೈತ ಮಹಿಳೆ ಹನಮವ್ವ ಚೌರಿ ತಿಳಿಸಿದ್ದಾರೆ.