ಮ್ಯೂಟೆಷನ್ ಕಾಪಿಯಲ್ಲಿ ಸಿ ಆ್ಯಂಡ್ ಡಿ ದಾಖಲು ಕೃಷಿಕರಿಗೆ ಆತಂಕ: ಕೆ.ಬಿ.ಸುರೇಶ್

| Published : Sep 08 2025, 01:01 AM IST

ಸಾರಾಂಶ

ರೈತರ ಪೈಸಾರಿ ಕೃಷಿ ಭೂಮಿಯ ಮ್ಯೂಟೇಷನ್‌ ಕಾಪಿಯಲ್ಲಿ ಸಿ ಅಂಡ್‌ ಡಿ ದಾಖಲಾಗುತ್ತಿತ್ತು ಕೃಷಿಕರು ಆತಂಕಗೊಂಡಿದ್ದಾರೆ.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ತಾಲೂಕಿನ ಗ್ರಾಮೀಣ ಭಾಗದ ಕೆಲ ರೈತರ ಪೈಸಾರಿ ಕೃಷಿ ಭೂಮಿಯ ಮ್ಯೂಟೆಷನ್ ಕಾಪಿ(ಎಂ.ಸಿ.)ಯಲ್ಲಿ ಸಿ ಆ್ಯಂಡ್ ಡಿ ಎಂದು ದಾಖಲಾಗುತ್ತಿತ್ತು ಕೃಷಿಕರು ಆತಂಕಗೊಂಡಿದ್ದಾರೆ ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಬಿ.ಸುರೇಶ್ ಆತಂಕ ವ್ಯಕ್ತಪಡಿಸಿದರು.

ಮ್ಯೂಟೆಷನ್ ಕಾಪಿಯಲ್ಲಿ ಪೈಸಾರಿ ಜಾಗ, ಸಿ ಆ್ಯಂಡ್ ಡಿ ಎಂದು ಪರಿವರ್ತನೆಯಾದರೆ, ಕೃಷಿಕರು ಯಾವುದೇ ಭೂಮಿ ದಾಖಲಾತಿಯನ್ನು ಪಡೆಯಲು ಸಾಧ್ಯವಿಲ್ಲ. ಇದರಿಂದ ಕೃಷಿಕರು ಆತಂಕಗೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸೋಮವಾರಪೇಟೆ ತಾಲೂಕಿನ ನೇಗಳ್ಳೆ ಗ್ರಾಮದ ಸರ್ವೆ ನಂ 235, 225/2 ರಲ್ಲಿ 110 ಜಾಗವನ್ನು ಸಿ ಆ್ಯಂಡ್ ಡಿ ಎಂದು ಅರಣ್ಯ ಇಲಾಖೆಯವರು ಮೇಲಾಧಿಕಾರಿಗಳಿಗೆ ವರದಿ ನೀಡಿರುವ ಬಗ್ಗೆ ಮಾಹಿತಿ ಇದ್ದು, ಕೃಷಿಕರಿಗೆ ಯಾವುದೇ ಮಾಹಿತಿ ನೀಡದೆ, ಕೃಷಿಕರ ಆಹವಾಲು ಸ್ವೀಕರಿಸದೆ, ಏಕಾಏಕಿ ಸಿ ಆ್ಯಂಡ್ ಡಿ ಭೂಮಿ ಎಂದು ಗುರುತು ಮಾಡಿರುವುದು ನಿಯಮ ಬಾಹಿರ ಎಂದು ಹೇಳಿದರು.ಪೈಸಾರಿ ಜಾಗವನ್ನು ಮೀಸಲು ಅರಣ್ಯ ಎಂದು ಘೋಷಣೆ ಮಾಡಲು ಸೆಕ್ಷನ್-4 ಯಿಂದ ಸೆಕ್ಷನ್-17 ತನಕ ಕಾಯಿದೆ ಕ್ರಮಗಳಿವೆ. ನಿಯಮ ಮೀರಿ ಅರಣ್ಯ ಇಲಾಖೆ ಕೃಷಿಕರಿಗೆ ತೊಂದರೆ ಕೊಡಬಾರದು ಎಂದು ಮನವಿ ಮಾಡಿದರು. ಕೃಷಿ ಭೂಮಿಯನ್ನು ಮೀಸಲು ಅರಣ್ಯ ಮಾಡಿಕೊಂಡರೆ, ಮನುಷ್ಯ ತಿನ್ನಬೇಕಾದ ಆಹಾರ ಬೆಳೆಗಳನ್ನು ಎಲ್ಲಿ ಬೆಳೆಯುವುದು ಎಂದು ಪ್ರಶ್ನಿಸಿದರು. ರೈತ ಹೋರಾಟ ಸಮಿತಿ ಕಳೆದ ಹಲವು ವರ್ಷಗಳಿಂದ ರೈತರ ಪರವಾಗಿ ಹೋರಾಟ ಮಾಡುತ್ತ ಬರುತ್ತಿದೆ. ಮಡಿಕೇರಿ ಶಾಸಕರಾದ ಡಾ.ಮಂತರ್‌ಗೌಡ ಅವರು ಸಿ ಆ್ಯಂಡ್ ಡಿ ಜಾಗದ ಸಮಸ್ಯೆಯ ಬಗ್ಗೆ ಸದನದಲ್ಲಿ ಚರ್ಚಿಸಲು ಮುಂದಾದರೆ, ಸ್ಪೀಕರ್ ಅವರು ಸಮಯವನ್ನೇ ಕೊಡುತ್ತಿಲ್ಲ. ದೇಶದ ಬೆನ್ನೆಲುಬು ರೈತರು. ರೈತರು ಸಂಕಷ್ಟದಲ್ಲಿ ಸಿಲುಕಿದ ಸಂದರ್ಭ ರಾಜ್ಯದ ಎಲ್ಲಾ ಶಾಸಕರುಗಳು ರೈತರ ಪರವಾಗಿ ನಿಲ್ಲಬೇಕು ಎಂದು ಹೇಳಿದರು.ಸಮಿತಿ ಸಂಚಾಲಕ ಬಿ.ಜೆ.ದೀಪಕ್ ಮಾತನಾಡಿ, ಜಿಲ್ಲೆಯಲ್ಲಿ ಸಿ ಆ್ಯಂಡ್ ಡಿ ಭೂಮಿಯ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಕೂಡಲೆ ಉನ್ನತಾಧಿಕಾರಿಗಳು ಮತ್ತು ರೈತ ಮುಖಂಡರುಗಳನ್ನೊಳಗೊಂಡ ಸಮಿತಿ ರಚಿಸಬೇಕು. ಸಮಿತಿ ಪ್ರತಿ ಗ್ರಾಮಗಳಲ್ಲಿ ಸಭೆ ಮಾಡಬೇಕು. ರೈತರ ಸಮಸ್ಯೆಯನ್ನು ಆಲಿಸಬೇಕು. ಜಿಲ್ಲೆಯಲ್ಲಿರುವ ಪೈಸಾರಿ ಜಾಗ, ಸಿ ಆ್ಯಂಡ್ ಡಿ ಭೂಮಿ, ಮೀಸಲು ಅರಣ್ಯ, ದೇವರಕಾಡು, ಊರುಡುವೆ ಎಲ್ಲಿದೆ, ಎಷ್ಟಿದೆ? ಎಂಬುದನ್ನು ಕಂದಾಯ ಇಲಾಖೆ, ಅರಣ್ಯ ಇಲಾಖೆ, ಸರ್ವೆ ಇಲಾಖೆಗಳು ಜಂಟಿ ಸರ್ವೆ ನಡೆಸಿ ಜಾಗ ಗುರುತು ಮಾಡಬೇಕು ಎಂದು ಆಗ್ರಹಿಸಿದರು. ಜಂಟಿ ಸರ್ವೆಯಾಗುವ ತನಕ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಸರ್ವೆ ಹೆಸರಿನಲ್ಲಿ ಕೃಷಿಕರನ್ನು ಭಯಪಡಿಸಬಾರದು ಎಂದು ಒತ್ತಾಯಿಸಿದರು.ರಾಜ್ಯ ರೈತಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಮಾತನಾಡಿ, ಮೀಸಲು ಅರಣ್ಯವನ್ನು ರೈತರು ಕೇಳುತ್ತಿಲ್ಲ. ಕೃಷಿ ಭೂಮಿಯಲ್ಲಿ ಮರಗಿಡಗಳನ್ನು ಬೆಳೆದು ಪರಿಸರಕ್ಕೆ ರೈತರು ಬಹುದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಆದರೆ ಪೈಸಾರಿ ಕೃಷಿ ಭೂಮಿಯನ್ನು ಮೀಸಲು ಅರಣ್ಯ ಮಾಡುವುದಕ್ಕೆ ಮುಂದಾದರೆ ದೊಡ್ಡ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಮಲೆನಾಡಿನ ರೈತರು ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಮಲೆನಾಡು ಭಾಗದ ಶಾಸಕರುಗಳು ರಾಜಕೀಯ ಮರೆತು ರೈತರ ಪರವಾಗಿ ಹೋರಾಟ ಮಾಡಬೇಕು ಎಂದು ಒತ್ತಾಯಿಸಿದರು. ವಿಧಾನಸಭಾ ಅಧಿವೇಶನದಲ್ಲಿ ಕೊಡಗಿನ ಶಾಸಕರು ರೈತರ ಸಂಕಷ್ಟದ ಬಗ್ಗೆ ಮಾತನಾಡಿದರೆ, ಮಲೆನಾಡಿನ ಶಾಸಕರು ಮೌನಕ್ಕೆ ಶರಣಾಗುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಗೋಷ್ಠಿಯಲ್ಲಿ ಸಮಿತಿ ಸಂಚಾಲಕ ಬಿ.ಎಂ.ಸುರೇಶ್, ಪದಾಧಿಕಾರಿ ಎಸ್.ಎಂ.ಡಿಸಿಲ್ವಾ ಇದ್ದರು.