ಸಾರಾಂಶ
ರೈತರು ನೆರೆ-ಹೊರೆಯವರನ್ನು ತಮ್ಮ ಹೊಲಕ್ಕೆ ಚರಗ ಚೆಲ್ಲಲು ಕರೆಯುವುದು ವಾಡಿಕೆ
ಗಜೇಂದ್ರಗಡ: ತಾಲೂಕಿನ ರೈತರು ಉತ್ಸಾಹ-ಉಲ್ಲಾಸದಿಂದ ಸೋಮವಾರ ಪಟ್ಟಣದ ಸಮೀಪದ ಹೊಲಕ್ಕೆ ತೆರಳಿ ಎಳ್ಳು ಅಮಾವಾಸ್ಯೆ ಆಚರಿಸಿದರು.
ಎಳ್ಳು ಅಮಾವಾಸ್ಯೆ ಹಿಂದಿನ ದಿನ ರಾತ್ರಿ ಕೃಷಿಕರು ಎಳ್ಳು-ಹೋಳಿಗೆ, ಶೇಂಗಾ -ಹೋಳಿಗೆ, ಕರಿಗಡಬು, ಕರ್ಚಿಕಾಯಿ ಮುಂತಾದ ಸಿಹಿ ಪದಾರ್ಥಗಳನ್ನು ಕತೆ-ಹಾಡುಗಳನ್ನು ಹೇಳುತ್ತಾ ತಯಾರಿಸುತ್ತಾರೆ. ಬೆಳಗ್ಗೆ ರೈತರು ನೆರೆ-ಹೊರೆಯವರನ್ನು ತಮ್ಮ ಹೊಲಕ್ಕೆ ಚರಗ ಚೆಲ್ಲಲು ಕರೆಯುವುದು ವಾಡಿಕೆ.ರೈತರು ಸೋಮವಾರ ಎತ್ತುಗಳನ್ನು ಶೃಂಗರಿಸಿಕೊಂಡು ಜೋಡೆತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್ ಮೂಲಕ ತಮ್ಮ ಹೊಲಗಳಿಗೆ ತೆರಳಿದರು. ಹೊಲದಲ್ಲಿರುವ ಬನ್ನಿ ಮಹಾಕಾಳಿ ವೃಕ್ಷದ ಕೆಳಗೆ ಐದು ಕಲ್ಲು ದೇವರುಗಳನ್ನು ಮಾಡಿ, ಅವುಗಳಿಗೆ ಕುಂಕುಮ-ವಿಭೂತಿ ಹಚ್ಚಿ ಪೂಜಿಸಿದರು. ಬನ್ನಿ ಮಹಾಕಾಳಿಗೆ ಪ್ರದಕ್ಷಿಣೆ ಹಾಕಿ ಹುಲಲ್ಲಿಗೋ... ಚಳ್ಳಾಬರಿಗೋ ಎಂದು ಘೋಷಣೆ ಹಾಕುತ್ತಾ, ಜೋಳ, ಕಡಲೆ, ಹತ್ತಿ, ಸೂರ್ಯಕಾಂತಿ, ಭತ್ತ ಇತ್ಯಾದಿ ಬೆಳೆಗಳನ್ನು ಹೊಂದಿದ ಭೂತಾಯಿಯ ಮಡಿಲಲ್ಲಿ ವಿಶೇಷವಾಗಿ ತಯಾರಿಸಿದ ಸಿಹಿ ಪದಾರ್ಥಗಳನ್ನು ನೈವೇದ್ಯ ಮಾಡಿ, ಹೊಲದ ತುಂಬೆಲ್ಲ ಹರಡಿ, ಸಮೃದ್ಧ ಬೆಳೆ ಬರಲೆಂದು ಭಕ್ತಿ-ಭಾವದಿಂದ ಪ್ರಾರ್ಥಿಸಿದರು.
ಬಳಿಕ ಭೂತಾಯಿಯ ಮಡಿಲಲ್ಲಿ ಕುಳಿತು ಖಡಕ್ ರೊಟ್ಟಿ, ಎಣ್ಣಿಗಾಯಿ, ಹೆಸರು ಕಾಳು, ಮಡಿಕಿಕಾಳು, ಅಗಸಿ, ಗುರೆಳ್ಳು ಚಟ್ನಿ, ಮೊಸರು, ಕಡಬು, ಶೇಂಗಾ ಹೋಳಿಗೆ, ಎಳ್ಳು ಹೋಳಿಗೆ, ತುಪ್ಪ, ಉಪ್ಪಿನಕಾಯಿ, ಕೊಬಂಬರಿ, ಚಿತ್ರನ್ನ, ಮೊಸರನ್ನ, ಸಂಡಿಗೆ, ಹಪ್ಪಳ ಸವಿದರು.