ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದ ಸುಬ್ರಹ್ಮಣ್ಯ ಬೆಟ್ಟದ ತಪ್ಪಲಿನಲ್ಲಿ ಹೌಸಿಂಗ್ ಫಾರ್ ಆಲ್ ಯೋಜನೆಯಡಿ ನಿರ್ಮಿಸಿರುವ ಮನೆಗಳ ಪೈಕಿ, ಮುಂದಿನ ಮೂರು ತಿಂಗಳ ಒಳಗೆ ಮೊದಲ ಹಂತದಲ್ಲಿ 8೦೦ ಫಲಾನುಭವಿಗಳಿಗೆ ನೂತನ ಗೃಹಗಳನ್ನು ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಸ್ಥಳೀಯ ಶಾಸಕ ಹಾಗೂ ಕರ್ನಾಟಕ ರಾಜ್ಯ ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಭರವಸೆ ನೀಡಿದರು.ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರು ಹಾಗೂ ಅಧಿಕಾರಿಗಳೊಂದಿಗೆ ಬಡಾವಣೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, ವಸತಿ ರಹಿತರು, ನಿರ್ಗತಿಕರು ಹಾಗೂ ಬಡವರಿಗೆ ನೀಡಲು ರಾಜ್ಯ-ಕೇಂದ್ರ ಸರ್ಕಾರಗಳ ಸಹಭಾಗಿತ್ವದಲ್ಲಿ ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಸುಬ್ರಹ್ಮಣ್ಯ ಬೆಟ್ಟದ ತಪ್ಪಲಿನಲ್ಲಿ ಸುಮಾರು 1181 ಮನೆಗಳನ್ನು ನಿರ್ಮಾಣ ಮಾಡಲಾಗಿದೆ,ಈ ಪೈಕಿ ಶೇ.9೦ರಷ್ಟು ಕಾಮಗಾಗಿ ಮುಗಿದಿರುವ 8೦೦ ಮನೆಗಳ ಹಂಚಿಕೆಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಭಾಗಿತ್ವದಲ್ಲಿ ನಿರ್ಗತಿಕರಿಗೆ, ಆಶ್ರಯ ವಂಚಿತರಿಗೆಂದು ಹೊಸದಾಗಿ ಗೃಹಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಸದರಿ ಯೋಜನೆ ನಿರೀಕ್ಷಿತ ಪ್ರಮಾಣದಲ್ಲಿ ವೇಗ ಪಡೆಯಲಿಲ್ಲ. ಅದಕೆ ಹಲವು ಕಾರಣಗಳಿದ್ದು, ಇದೀಗ ಎದುರಾಗಿದ್ದ ಎಲ್ಲ ರೀತಿಯ ಅಡೆ ತಡೆ ನಿವಾರಿಸಿಕೊಂಡು 1181 ಮನೆಗಳ ಪೈಕಿ, 8೦೦ ಮನೆಗಳು ಮುಕ್ತಾಯ ಹಂತ ತಲುಪಿವೆ. ಅಂದರೆ ಶೇ.೯೦ರಷ್ಟು ಕೆಲಸ ಮುಗಿದಿದ್ದು, ಶೀಘ್ರವೇ ಅರ್ಹರಿಗೆ ವಿತರಿಲಾಗುವುದು ಎಂದರು. ಈ ಸಂಬಂಧ ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ಜಮೀರ್ ಅಹಮದ್ ಅವರ ಜೊತೆ ಮಾತನಾಡಲಾಗಿದೆ ಎಂದರು.ಈ ಹಿನ್ನೆಲೆಯಲ್ಲಿ ಬಡಾವಣೆಯಲ್ಲಿ ಆಗಬೇಕಿರುವ ರಸ್ತೆಗಳು, ಚರಂಡಿಗಳು ಹಾಗೂ ಇತೆರೆ ಮೂಲಭೂತ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಮುಗಿಸಲು ಸಹ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಯೋಜನೆ ಕುಂಠಿತವಾಗಲು ಮತ್ತೊಂದು ಕಾರಣ, ರಾಜ್ಯ, ಕೇಂದ್ರ ಸರ್ಕಾರಗಳು ಹಣ ಬಿಡುಗಡೆ ಮಾಡಿದರೂ, ಆಯ್ಕೆಯಾಗಿದ್ದ ಫಲಾನುಭವಿಗಳು ತಮ್ಮ ಪಾಲಿನ ೨ ಲಕ್ಷ ಪಾವತಿಸಲು ಸತಾಯಿಸಿದ್ದು, ಇದೀಗ ಸಿಎಂ ಅವರೇ, ಸರ್ಕಾರದ ಕಡೆಯಿಂದಲೇ ೧ ಲಕ್ಷ ರು.ಕೊಡಲು ನಿರ್ಧಾರ ಮಾಡಿದ್ದಾರೆ. ಉಳಿದ ೧ ಲಕ್ಷವನ್ನು ಸಾಲದ ರೂಪದಲ್ಲಿ ಅರ್ಹ ಫಲಾನುಭವಿಗಳಿಗೆ ನೀಡಲು ಕೆಲ ಬ್ಯಾಂಕ್‌ಗಳೊಂದಿಗೆ ಮಾತುಕತೆ ನಡೆಸಿದ್ದು, ಅವರೂ ಮುಂದೆ ಬಂದಿದ್ದಾರೆ ಎಂದು ಶಾಸಕರು ಹೇಳಿದರು. ಮುಂದುವರಿದು ೧ ಲಕ್ಷ ಸಾಲಕ್ಕೆ ಬ್ಯಾಂಕ್‌ನವರು ವಿಧಿಸುವ ಒಟ್ಟು ಬಡ್ಡಿಯಲ್ಲಿ ಶೇ.೫ರಷ್ಟನ್ನು ಸರ್ಕಾರದ ಕಡೆಯಿಂದಲೇ ಭರಿಸುವ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸುವೆ, ಅರ್ಹ ಫಲಾನುಭವಿಗಳು ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಈ ಎಲ್ಲ ಪ್ರಕ್ರಿಯೆ ೩ ತಿಂಗಳಲ್ಲಿ ಆಗಲಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ್ ಮೇಸ್ತ್ರಿ, ರಾಜೀವ್‌ಗಾಂಧಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ದೇವರಾಜೇಗೌಡ, ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ, ಎಇಇ ಸುನಿಲ್, ನಗರಸಭೆ ಹಾಗೂ ಆಶ್ರಯ ಸಮಿತಿ ಸದಸ್ಯರು ಇದ್ದರು.