ನೀರು ಶುದ್ದೀಕರಣ ಘಟಕಕ್ಕಾಗಿ ಉಪವಾಸ ಸತ್ಯಾಗ್ರಹ

| Published : Jul 25 2024, 01:17 AM IST

ಸಾರಾಂಶ

ದೊಡ್ಡಬಳ್ಳಾಪುರ: ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ದೊಡ್ಡ ತುಮಕೂರು ಮತ್ತು ಮಜರಾ ಹೊಸಹಳ್ಳಿ ಗ್ರಾಮ ಪಂಚಾಯಿತಿ ಕೆರೆ ಹೋರಾಟ ಸಮಿತಿ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ತಾಲೂಕು ಕಚೇರಿಯ ಮುಂದೆ ಸ್ಥಳೀಯರಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಬುಧವಾರ ಆರಂಭಿಸಲಾಗಿದೆ.

ದೊಡ್ಡಬಳ್ಳಾಪುರ: ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ದೊಡ್ಡ ತುಮಕೂರು ಮತ್ತು ಮಜರಾ ಹೊಸಹಳ್ಳಿ ಗ್ರಾಮ ಪಂಚಾಯಿತಿ ಕೆರೆ ಹೋರಾಟ ಸಮಿತಿ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ತಾಲೂಕು ಕಚೇರಿಯ ಮುಂದೆ ಸ್ಥಳೀಯರಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಬುಧವಾರ ಆರಂಭಿಸಲಾಗಿದೆ.

ಚಿಕ್ಕ ತುಮಕೂರು ಕೆರೆಯ ಎಸ್‌ಟಿಪಿ ಘಟಕ ಬದಲಾವಣೆ, 3ನೇ ಹಂತದ ನೀರು ಶುದ್ದೀಕರಣ ಘಟಕ ಸ್ಥಾಪನೆ ಸಂಬಂಧ ವಿಧಾನಸಭೆಯಲ್ಲಿ ಸ್ಥಳೀಯ ಶಾಸಕರ ಪ್ರಶ್ನೆಗೆ ಉತ್ತರಿಸಿರುವ ಸಚಿವರು ಪ್ರಸ್ತಾವಿತ ಯೋಜನೆ, ಟೆಂಡರ್‌ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಈ ಬೆನ್ನಲ್ಲೇ ಹೋರಾಟ ತೀವ್ರಗೊಳಿಸುವ ಎಚ್ಚರಿಕೆಯನ್ನು ಸ್ಥಳೀಯರು ನೀಡಿದ್ದಾರೆ.

ಹೋರಾಟ ಆರಂಭಿಸಿದ ಮುಖಂಡರು ಪ್ರತಿಕ್ರಿಯಿಸಿ, ದೊಡ್ಡಬಳ್ಳಾಪುರ ನಗರಸಭೆ ತಮ್ಮ ಒಳಚರಂಡಿ ನೀರನ್ನು ನೇರವಾಗಿ ಶುದ್ಧೀಕರಿಸದೇ ಚಿಕ್ಕ ತುಮಕೂರು ಕೆರೆಗೆ ಬಿಡುತ್ತಿರುವುದರಿಂದ ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯವರು ತಮ್ಮಲ್ಲಿ ಉತ್ಪತ್ತಿಯಾಗುವ ಒಳಚರಂಡಿ ನೀರನ್ನು ಚಿಕ್ಕ ತುಮಕೂರು ಕೆರೆಗೆ ಬಿಡುತ್ತಿರುವುದರಿಂದ ಮತ್ತು ಕಾರ್ಖಾನೆಗಳು ತಮ್ಮಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ನೀರನ್ನು ಮಳೆ ನೀರು ಹರಿಯುವ ಕಾಲುವೆಗೆ ಬಿಡುತ್ತಿರುವುದರಿಂದ ಆ ನೀರು ಸಹ ಕೆರೆಗೆ ಸೇರುತ್ತದೆ. ಆ ಕಾರಣ ದೊಡ್ಡತುಮಕೂರು ಗ್ರಾಮ ಪಂಚಾಯಿತಿ ಮತ್ತು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ಅಂತರ್ಜಲವು ಸಂಪೂರ್ಣ ಕೆಟ್ಟಿದ್ದು ಶುದ್ಧೀಕರಣ ಘಟಕದ ನೀರು ಸಹ ಬಳಸಲು ಯೋಗ್ಯವಾಗಿಲ್ಲ ಎಂಬ ವರದಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿಯು ನೀಡಿದೆ. ಇದಕ್ಕೆ ಸಂಬಂದಿಸಿದಂತೆ ಎರಡು ಪಂಚಾಯಿತಿಯ ಜನರು ಅನೇಕ ಹೋರಾಟಗಳು ನಡೆಸಿದರೂ ಹಸಿರು ನ್ಯಾಯ ಪೀಠವು ಕೆರೆಯಲ್ಲಿರುವ ಎಸ್‌ಟಿಪಿಯನ್ನು ಬದಲಾಯಿಸಿ ಎಂಬ ಆದೇಶವನ್ನು ನೀಡಿದೆ ಎಂದು ವಿವರಿಸಿದರು.

ಪ್ರತಿಫಲವಾಗಿ 2023ನೇ ಇಸವಿಯಲ್ಲಿ ಎರಡನೇಯ ವೈಜ್ಞಾನಿಕ ಶುದ್ಧೀಕರಣ ಘಟಕಕ್ಕೆ ಅಧಿಕಾರಿಗಳು ಅನುಮೋದನೆ ನೀಡಿದ್ದರು. ಆದರೆ ವಿಧಾನಸಭೆಯಲ್ಲಿ ಶಾಸಕರು ಈ ವಿಚಾರವಾಗಿ ವಿಷಯ ಪ್ರಸ್ತಾಪ ಮಾಡಿದ್ದಾರೆ. ಅದಕ್ಕೆ ಸಂಬಂದಪಟ್ಟಂತಹ ಸಚಿವರು ಈ ಕುರಿತು ಯಾವುದೇ ರೀತಿಯ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ ಎಂದು ತಿಳಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯನ್ನು ಎರಡು ಪಂಚಾಯಿತಿ ಜನರು ಬಹಿಷ್ಕರಿಸಿದಾಗ ಜಿಲ್ಲಾಧಿಕಾರಿ ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ಮುಂದೆ ಎರಡು ಪಂಚಾಯಿತಿಯ ಮುಖಂಡರ ಸಭೆ ನಡೆಸಿ 2ನೇ ಹಂತದ ಶುದ್ಧೀಕರಣ ಘಟಕಕ್ಕೆ ಒಪ್ಪಿಗೆ ಸಿಕ್ಕಿದೆ. ಜಮೀನು ಸಹ ನೋಡಿದ್ದೇವೆ ಎಂದು ಮೌಖಿಕವಾಗಿ ಸಭೆಯಲ್ಲಿ ತಿಳಿಸಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ಚಳವಳಿಗಾರರನ್ನು ದಿಕ್ಕುತಪ್ಪಿಸಿ ಚುನಾವಣೆಯಲ್ಲಿ ಮತದಾನ ಮಾಡುವಂತೆ ಓಲೈಸಿದ ಬಳಿಕ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇದೀಗ ವಿಧಾನಸಭೆಯಲ್ಲಿ ಶಾಸಕರು ಈ ವಿಷಯ ಪ್ರಸ್ತಾವನೆ ಮಾಡಿದಾಗ ಸಂಬಂದಪಟ್ಟ ಸಚಿವರು ನಮ್ಮ ಮುಂದೆ ಯಾವುದೇ ಕ್ರಿಯಾಯೋಜನೆ ಇಲ್ಲ ಎಂದು ಹೇಳಿದ್ದಾರೆ. ಇದರಿಂದ ನಮ್ಮ ಭಾಗದ ಜನರಿಗೆ ಸರ್ಕಾರದಿಂದ ದ್ರೋಹವಾಗಿದೆ. ಜೀವಜಲ ಉಳಿವಿಗಾಗಿ ನಮ್ಮ ಮುಂದಿನ ಮಕ್ಕಳ ಭವಿಷ್ಯಕ್ಕಾಗಿ ನಮಗೆ 3ನೇ ಹಂತದ ಶುದ್ಧೀಕರಣ ಘಟಕ ಬೇಕಾಗಿದೆ. ಇದಕ್ಕಾಗಿ ತಾಲೂಕು ಕಚೇರಿ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ ಎಂದು ತಿಳಿಸಿದರು. ಅರ್ಕಾವತಿ ಹೋರಾಟ ಸಮಿತಿಯ ಹಲವು ಮುಖಂಡರು ಉಪವಾಸ ಸತ್ಯಾಗ್ರಹದಲ್ಲಿ ಪಾಳ್ಗೊಂಡಿದ್ದರು.

ಫೋಟೋ-

24ಕೆಡಿಬಿಪಿ3-

ದೊಡ್ಡಬಳ್ಳಾಪುರದ ತಾಲೂಕು ಕಚೇರಿ ಮುಂಭಾಗ ನೀರು ಶುದ್ದೀಕರಣ ಘಟಕಕ್ಕೆ ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಬುಧವಾರ ಆರಂಭಿಸಲಾಗಿದೆ.